ಬೆಂಗಳೂರು:ಲಾಕ್ಡೌನ್ ನಿಂದಾಗಿ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿರುವ ರೈತರ ನೆರವಿಗೆ ಸರ್ಕಾರ ಧಾವಿಸಿದೆ. ಸಹಕಾರ ಸಂಘಗಳಿಂದ ರೈತರು ಪಡೆದಿರುವ ಬೆಳೆಸಾಲ, ಮಧ್ಯಮಾವಧಿ ಹಾಗು ದೀರ್ಘಾವಧಿಯ ಕೃಷಿ ಸಾಲ ಕಂತು ಪಾವತಿಯ ಅವಧಿಯನ್ನು ಮೂರು ತಿಂಗಳ ಕಾಲ ವಿಸ್ತರಣೆ ಮಾಡಲಾಗಿದೆ.
ಮಾರ್ಚ್ ತಿಂಗಳಿನಿಂದ ಜೂನ್ ತಿಂಗಳ ಒಳಗೆ ಕೃಷಿ ಸಾಲ ಪಾವತಿಸಬೇಕಿದ್ದ ರೈತರಿಗೆ ಅನುಕೂಲವಾಗುವಂತೆ ಸಾಲ ಪಾವತಿಸುವ ಅವಧಿಯನ್ನು ವಿಸ್ತರಣೆ ಮಾಡಿ ರಾಜ್ಯ ಸರ್ಕಾರದ ಕೃಷಿ ಇಲಾಖೆ ಇಂದು ಆದೇಶ ಹೊರಡಿಸಿದೆ.
ರೈತರು ಶೂನ್ಯ ಬಡ್ಡಿದರದಲ್ಲಿ ಪಡೆದ 3 ಲಕ್ಷ ವರೆಗಿನ ಬೆಳೆ ಸಾಲ, ಶೇ.3ರ ಬಡ್ಡಿ ದರದಲ್ಲಿ 10ಲಕ್ಷ ರೂ.ಗಳವರೆಗೆ ಪಡೆದ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಾಲದ ಮೇಲಿನ ಕಂತು ಪಾವತಿಸಲು ಅನುಕೂಲವಾಗುವಂತೆ ಈ ಆದೇಶ ಜಾರಿ ಮಾಡಲಾಗಿದೆ.
ರಾಜ್ಯ ಸರ್ಕಾರದ ಕೃಷಿ ಇಲಾಖೆ ಹೊರಡಿಸಿರುವ ಆದೇಶ ರಾಜ್ಯ ಸರ್ಕಾರದ ಕೃಷಿ ಇಲಾಖೆ ಹೊರಡಿಸಿರುವ ಆದೇಶ ಸಹಕಾರ ಸಂಘಗಳಿಗೆ ಈ ಅವಧಿಯ ಬಡ್ಡಿಯ ಸಹಾಯಧನವನ್ನು ರಾಜ್ಯ ಸರ್ಕಾರವು ಭರಿಸಲಿದೆ. ಕೇಂದ್ರ ಸರ್ಕಾರವು ಬ್ಯಾಂಕ್ಗಳಲ್ಲಿ ಗ್ರಾಹಕರು ಪಡೆದ ಗೃಹ, ವಾಹನ, ವೈಯಕ್ತಿಕ ಸಾಲದ ಇಎಂಐ ಕಂತುಗಳ ಪಾವತಿಗೆ ಮೂರು ತಿಂಗಳ ಸಮಯ ನೀಡುವಂತೆ ಆದೇಶ ನೀಡಿದ ಬೆನ್ನಲ್ಲೇ, ರಾಜ್ಯ ಸರ್ಕಾರ ಸಹ ತನ್ನ ವ್ಯಾಪ್ತಿಗೆ ಒಳಪಡುವ ಸಹಕಾರ ಸಂಘಗಳ ಕೃಷಿ ಸಾಲ ಪಾವತಿ ಅವಧಿಯನ್ನು ವಿಸ್ತರಣೆ ಮಾಡಿದೆ.
ಬಡ್ಡಿ ಮನ್ನಾ ಯೋಜನೆ ಅವಧಿಯೂ ವಿಸ್ತರಣೆ:
ಸಹಕಾರ ಸಂಘಗಳಲ್ಲಿ ರೈತರು ತಾವು ಪಡೆದ ಸಾಲ ಕಟ್ಟದೇ ಸುಸ್ತಿಯಾಗಿರುವ ಸಾಲದ ಮೇಲಿನ ಬಡ್ಡಿ ಮನ್ನಾ ಯೋಜನೆಯನ್ನೂ ಸಹ ಸರ್ಕಾರ ಜೂನ್ ಅಂತ್ಯದವರೆಗೆ ವಿಸ್ತರಿಸಿದೆ.
ಈ ಮೊದಲು ರೈತರು 2020ರ ಮಾರ್ಚ್ ಅಂತ್ಯದ ಒಳಗೆ ಇರುವ ಸಾಲ ಪಾವತಿಸಿದರೆ ಅದರ ಮೇಲಿನ ಬಡ್ಡಿ ಮನ್ನಾ ಮಾಡಲಾಗುವುದೆಂದು ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು. ಈ ಯೋಜನೆಯ ಬಡ್ಡಿ ಮನ್ನಾ ಅವಧಿಯನ್ನು ಮೂರು ತಿಂಗಳವರೆಗೆ ಸಹಕಾರ ಇಲಾಖೆ ವಿಸ್ತರಿಸಿದೆ.