ಬೆಂಗಳೂರು:ಸಂಚಾರಿ ದಂಡ ಪಾವತಿಸಲು ನೀಡಲಾಗಿದ್ದ ಅರ್ಧದಷ್ಟು ರಿಯಾಯಿತಿಯನ್ನು ವಿಸ್ತರಿಸುವ ಮೂಲಕ ವಾಹನ ಸವಾರರಿಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಸಿಹಿಸುದ್ದಿ ನೀಡಿದೆ. ಮಾರ್ಚ್ 4 ರಿಂದ ಆರಂಭಿಸಿ ಮುಂದಿನ ಹದಿನೈದು ದಿನಗಳಿಗೆ ಅನ್ವಯವಾಗುವಂತೆ ಶೇ 50ರಷ್ಟು ರಿಯಾಯಿತಿಗೆ ಅವಕಾಶ ವಿಸ್ತರಿಸಲಾಗಿದೆ. ಕೇವಲ ಫೆಬ್ರವರಿ 11ರ ಮೊದಲು ದಾಖಲಾಗಿರುವ ಹಳೆಯ ಸಂಚಾರ ಉಲ್ಲಂಘನೆ ಪ್ರಕರಣಗಳಿಗೆ ಮಾತ್ರವೇ ಈ ನಿಯಮ ಅನ್ವಯವಾಗಲಿದೆ.
120 ಕೋಟಿಗೂ ಅಧಿಕ ದಂಡದ ಹಣ ಸಂಗ್ರಹ: ಮೊದಲ ಹಂತದಲ್ಲಿ ಫೆಬ್ರವರಿ 2 ರಿಂದ 11ರ ವರೆಗೆ ವಾಹನ ಸವಾರರು ಸಂಚಾರಿ ದಂಡ ಪಾವತಿಸಲು ಶೇ 50ರಷ್ಟು ರಿಯಾಯತಿ ನೀಡಿ ರಾಜ್ಯ ಸರ್ಕಾರ ಘೋಷಣೆ ಮಾಡಿತು.ಈ ಅವಧಿಯಲ್ಲಿ ಬೆಂಗಳೂರು ನಗರದ ಒಂದರಲ್ಲೇ 41.20 ಪ್ರಕರಣಗಳಿಗೆ 120 ಕೋಟಿಗೂ ಅಧಿಕ ದಂಡದ ಹಣ ಸಂಗ್ರಹವಾಗಿತ್ತು.
ಮತ್ತೊಮ್ಮೆ ರಿಯಾಯತಿ ಆಫರ್:ಫೆಬ್ರವರಿ 14ರಂದು ನಡೆದಿದ್ದ ಸಭೆಯಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಬಿ ವೀರಪ್ಪ ನೇತೃತ್ವದ ಸಭೆಯಲ್ಲಿ ಮತ್ತೊಮ್ಮೆ ರಿಯಾಯತಿ ಆಫರ್ ವಿಸ್ತರಣೆ ಬಗ್ಗೆ ತೀರ್ಮಾನಿಸಲಾಗಿದೆ. ರಿಯಾಯಿತಿ ವಿಸ್ತರಿಸಿ ಮತ್ತೊಮ್ಮೆ ರಾಜ್ಯ ಸರ್ಕಾರ ಆದೇಶಿಸಿದ್ದು, ಮೊದಲಿನಂತೆ ಸಂಚಾರಿ ಪೊಲೀಸ್ ಆಯುಕ್ತರ ಕಚೇರಿ, ಬೆಂಗಳೂರು ಒನ್, ಪೇಟಿಎಂ ಮೂಲಕ ದಂಡ ಪಾವತಿಸಬಹುದಾಗಿದೆ.
ಒಟ್ಟಾರೆ 1300 ಕೋಟಿ ದಂಡ ಪಾವತಿ ಬಾಕಿ:ರಾಜ್ಯದಲ್ಲಿ ಸುಮಾರು 1300 ಕೋಟಿ ರೂಪಾಯಿಗಿಂತ ಅಧಿಕ ದಂಡ ಪಾವತಿ ಬಾಕಿ ಇರುವ ಕುರಿತಾಗಿ ಕಳವಳ ವ್ಯಕ್ತಪಡಿಸಿ ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರವೂ, ಸರ್ಕಾರಕ್ಕೆ ಈ ಬಗ್ಗೆ ಮನವಿ ಸಲ್ಲಿಸಿತ್ತು. ಈ ಸಮಸ್ಯೆಗೆ ಪರಿಹಾರವಾಗಿ ಶೇ 50 ರಿಯಾಯಿತಿ ನೀಡುವ ಕುರಿತು ನಿರ್ಧರಿಸಿ ಸಾರಿಗೆ ಇಲಾಖೆ ರಿಯಾಯಿತಿ ಆಫರ್ನ ಆದೇಶ ಹೊರಡಿಸಿತ್ತು.
ರಿಯಾಯಿತಿಯಲ್ಲಿ ದಂಡ ಪಾವತಿಸಲು ವಾಹನ ಸವಾರರಿಗೆ ಮೊದಲಿನ ಹಂತದಲ್ಲಿ ಫೆ 2ರಿಂದ ಫೆ.11ರ ವರೆಗೆ ಅವಕಾಶಗಳನ್ನು ನೀಡಲಾಗಿತ್ತು. ಬೆಂಗಳೂರು ನಗರ ಸಂಚಾರ ಪೊಲೀಸ್ ವಿಭಾಗ ಒಂದರಲ್ಲೆ ಹಲವು ವರ್ಷಗಳಿಂದ ಸುಮಾರು 2 ಕೋಟಿ ಪ್ರಕರಣಗಳು ಬಾಕಿ ಇದ್ದು, ಈ ರಿಯಾಯಿತಿ ದಂಡ ಪಾವತಿಗೆ ಅವಕಾಶ ಘೋಷಣೆಯಾದ ಮೊದಲ ದಿನವೇ ಬೆಂಗಳೂರು ನಗರದಲ್ಲಿ ಐದು ಕೋಟಿಗೂ ಹೆಚ್ಚು ದಂಡ ಪಾವತಿಯಾಗಿತ್ತು. ಹೀಗೆ ಪ್ರತಿ ದಿನವೂ ಕೋಟಿ ಕೋಟಿ ರೂ. ದಂಡ ಸರ್ಕಾರದ ಬೊಕ್ಕಸಕ್ಕೆ ಸೇರಿದೆ. ಬೆಂಗಳೂರು ಮಾತ್ರವಲ್ಲದೇ ಈ ಆಫರ್ ಇಡೀ ರಾಜ್ಯಕ್ಕೆ ಘೋಷಣೆಯಾದ ಕಾರಣ ರಾಜ್ಯದೆಲ್ಲೆಡೆ ಭಾರಿ ಮೊತ್ತದಲ್ಲಿ ದಂಡ ಪಾವತಿಯಾಗಿದೆ.
ಸದುಪಯೋಗಕ್ಕೆ ಸಲಹೆ:ಇನ್ನೂ ದಂಡ ಪಾವತಿಸಲು ಬಾಕಿ ಉಳಿಸಿಕೊಂಡ ವಾಹನ ಸವಾರರಿಗೆ ಮಾರ್ಚ್ 4 ರಿಂದ ಆರಂಭಿಸಿ ಮುಂದಿನ ಹದಿನೈದು ದಿನಗಳಿಗೆ ಅನ್ವಯವಾಗುವಂತೆ ಶೇ 50ರಷ್ಟು ರಿಯಾಯಿತಿ ಅವಕಾಶ ವಿಸ್ತರಿಸಲಾಗಿದೆ. ರಾಜ್ಯ ಸರಕಾರವು ರಿಯಾಯಿತಿ ಆಫರ್ನ ಆದೇಶ ಹೊರಡಿಸಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದೆ.
ಇದನ್ನೂಓದಿ:ಕರ್ನಾಟಕದಲ್ಲಿ ಆ್ಯಪಲ್ ಫೋನ್ ತಯಾರಿಕಾ ಘಟಕ, 1 ಲಕ್ಷ ಹೊಸ ಉದ್ಯೋಗ: ಸಿಎಂ ಬೊಮ್ಮಾಯಿ