ಬೆಂಗಳೂರು:ಕರ್ನಾಟಕದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಜೂನ್ ತಿಂಗಳಲ್ಲಿ ಸೋಂಕಿತರ ಸಂಖ್ಯೆ 10 ಸಾವಿರ ಗಡಿದಾಟುವ ಎಲ್ಲ ಮುನ್ಸೂಚನೆ ಕಾಣುತ್ತಿದೆ. ಮಾರ್ಚ್ 8 ರಂದು ಶುರುವಾದ ಕೊರೊನಾ ಆತಂಕ ನಾಲ್ಕು ತಿಂಗಳಾದರೂ ಕಡಿಮೆಯಾಗಿಲ್ಲ.
ಮೊದ ಮೊದಲು ನಿಯಂತ್ರಣದಲ್ಲಿದ್ದ ಕೊರೊನಾ ಸೋಂಕಿತರ ಸಂಖ್ಯೆ, ಲಾಕ್ಡೌನ್ ಸಡಿಲಿಕೆ ಬಳಿಕ ಅಂದಾಜಿಗೆ ಸಿಗದಷ್ಟು ವೇಗ ಪಡೆದುಕೊಳ್ಳುತ್ತಿದೆ. ಅದರಲ್ಲೂ, ಅಂತಾರಾಜ್ಯ ಪ್ರಯಾಣಿಕರು ರಾಜ್ಯಕ್ಕೆ ಆಗಮಿಸಿದ್ದೇ ತಡ, ಸೋಂಕಿತರ ಸಂಖ್ಯೆ 500 ರಲ್ಲಿ ಇದ್ದದ್ದು ಇದೀಗ 7000 ಗಡಿ ತಲುಪಿದೆ.
ಮಹಾರಾಷ್ಟ್ರ, ತಮಿಳುನಾಡು, ರಾಜಸ್ಥಾನ ಸೇರಿದಂತೆ ಹಲವೆಡೆಯಿಂದ ಬಂದವರು, ಕೊರೊನಾ ಸೋಂಕಿನೊಂದಿಗೆ ಬಂದಿದ್ದಾರೆ. ಇದರ ಪರಿಣಾಮ ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯು ಶುರುವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ನಿವೃತ್ತಿ ಹೊಂದುತ್ತಿರುವ ಸಿಬ್ಬಂದಿ ಅವಧಿ ವಿಸ್ತರಣೆ ಮಾಡಲಾಗಿದೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಕೊರೊನಾ ವೈರಸ್ ಹರಡುವಿಕೆ ಹೆಚ್ಚಾಗುತ್ತಿರುವ ಹಿನ್ನೆಲೆ, ಎರಡು ಬಾರಿ ವಯೋ ನಿವೃತ್ತಿ ಅವಧಿ ವಿಸ್ತರಣೆ ಮಾಡಿದ್ದಾರೆ. ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳ ವೈದ್ಯಕೀಯ, ಅರೆ ವೈದ್ಯಕೀಯ, ಪೂರಕವಾಗಿರುವ ಕ್ಲಿನಿಕಲ್ ಮತ್ತು ನಾನ್ ಕ್ಲಿನಿಕಲ್ ಸಿಬ್ಬಂದಿ ಸೇವೆಯನ್ನ ಜೂನ್ 30 ರವರಗೆ ವಿಸ್ತರಿಸಲಾಗಿದೆ.
ಈ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮಾತನಾಡಿ, ಕೋವಿಡ್-19, ಕೋವಿಡೇತರ ಅನಾರೋಗ್ಯ ಸಮಸ್ಯೆಗಳು ಉಲ್ಬಣಗೊಳ್ಳುತ್ತಿದೆ. ಈಗ ಮಳೆಗಾಲವು ಶುರುವಾಗುತ್ತಿದ್ದು, ಈ ಸಮಯದಲ್ಲೇ ಪ್ರತ್ಯೇಕ ರೋಗಗಳು ಬರುತ್ತವೆ. ಅಂತಹವರಿಗೂ ಚಿಕಿತ್ಸೆ ನೀಡುವ ಸಲುವಾಗಿಯೇ ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಎಲ್ಲಾ ವೈದ್ಯಕೀಯ ಸಂಘದೊಂದಿಗೆ, ಖಾಸಗಿ ಆಸ್ಪತ್ರೆಗಳೊಂದಿಗೆ ಸಮಾಲೋಚನೆ ನಡೆಸಿ ಸಭೆ ಮಾಡಿ ಕಟ್ಟುನಿಟ್ಟಿನ ನಿರ್ದೇಶನವನ್ನು ಕೊಟ್ಟಿದ್ದೇವೆ ಎಂದರು.
ಈಗಾಗಲೇ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಎಲ್ಲಾ ಖಾಸಗಿ ವಲಯದ ಆಸ್ಪತ್ರೆಗಳು ಕೋವಿಡೇತ್ತರ ರೋಗಿಗಳಿಗೆ ಚಿಕಿತ್ಸೆ ನೀಡಬೇಕೆಂದು ತಿಳಿಸಲಾಗಿದೆ ಎಂದರು. ಕೊರೊನಾಗೆ ಚಿಕಿತ್ಸೆ ನೀಡುವುದು ಎಷ್ಟು ಮುಖ್ಯವೋ, ಅಷ್ಟೇ ಇತರೆ ಅನಾರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಬೇಕಾಗಿದೆ. ಹೀಗಾಗಿ ಮತ್ತೆ ವಯೋ ನಿವೃತ್ತಿ ಹೊಂದುತ್ತಿರುವವರ ಅವಧಿಯನ್ನ ವಿಸ್ತರಣೆ ಮಾಡಲಾಗುವುದು ಎಂದು ಹೇಳಿದರು.