ಕರ್ನಾಟಕ

karnataka

ETV Bharat / state

ಶಾಂತಿಯುತ ಮತದಾನ: ಕರ್ನಾಟಕದ ಜನತೆಗೆ ಕೃತಜ್ಞತೆ ಹೇಳಿದ ಎಡಿಜಿಪಿ ಅಲೋಕ್ ಕುಮಾರ್

ಕರ್ನಾಟಕ ವಿಧಾನಸಭಾ ಚುನಾವಣೆಗೆ ನಡೆದ ಮತದಾನ ನಿನ್ನೆ ಶಾಂತಿಯುತವಾಗಿ ಮುಗಿದಿದ್ದು, ಸಹಕಾರ ನೀಡಿದ ರಾಜ್ಯದ ಜನತೆಗೆ ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್​ ಮೂಲಕ ಧನ್ಯವಾದ ತಿಳಿಸಿದ್ದಾರೆ.

alok kumar
ಎಡಿಜಿಪಿ ಅಲೋಕ್ ಕುಮಾರ್

By

Published : May 11, 2023, 8:43 AM IST

ಬೆಂಗಳೂರು: ರಾಜ್ಯದ ಎಲ್ಲ 58,282 ಮತಗಟ್ಟೆಗಳಲ್ಲಿ ಬುಧವಾರ ರಾತ್ರಿ 10.15ಕ್ಕೆ ಮತದಾನ ಪ್ರಕ್ರಿಯೆ ಮುಗಿದಿದೆ. ಬಹುತೇಕ ಶಾಂತಿಯುತ ಮತದಾನ ನಡೆದಿದೆ. ಕೆಲವು ಪ್ರದೇಶಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಸವಾಲಾಗಿತ್ತು ಎಂದು ತಿಳಿಸಿ, ಸಹಕಾರ ನೀಡಿದ ಕರ್ನಾಟಕದ ನಾಗರಿಕರಿಗೆ ಎಡಿಜಿಪಿ ಅಲೋಕ್ ಕುಮಾರ್ ಕೃತಜ್ಞತೆ ತಿಳಿಸಿದ್ದಾರೆ. ಜೊತೆಗೆ, ಕರ್ನಾಟಕ ಪೊಲೀಸರ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ.

ತಾಯಿಯ ಅಂತ್ಯಕ್ರಿಯೆ ಮುಗಿಸಿ ಕೆಲಸಕ್ಕೆ ಹಾಜರಾದ ಸಿಬ್ಬಂದಿ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್‌ ಸಿಬ್ಬಂದಿಯೊಬ್ಬರು ತಮ್ಮ ತಾಯಿಯ ಅಂತ್ಯಸಂಸ್ಕಾರ ಮುಗಿಸಿ ತಕ್ಷಣವೇ ಕೆಲಸಕ್ಕೆ ಹಿಂದಿರುಗಿರುವ ಮೂಲಕ ಕರ್ತವ್ಯನಿಷ್ಠೆ ತೋರಿದ್ದು, ಅವರ ಕೆಲಸದ ಬದ್ಧತೆಗೆ ಕರ್ನಾಟಕ ಡಿಜಿ, ಐಜಿಪಿ ಪ್ರವೀಣ್ ಸೂದ್ ಮತ್ತು ಎಡಿಜಿಪಿ ಅಲೋಕ್ ಕುಮಾರ್ ಸೇರಿದಂತೆ ಹಲವು ಅಧಿಕಾರಿಗಳು ಮತ್ತು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಡಿಜಿ, ಐಜಿಪಿ ಪ್ರವೀಣ್ ಸೂದ್ ಕೂಡ ಟ್ವೀಟ್​ ಮಾಡಿದ್ದು, "ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ನಮ್ಮ ಸಿಬ್ಬಂದಿಯೊಬ್ಬರ ತಾಯಿ ನಿಧನರಾಗಿದ್ದರು. ಅವರಿಗೆ ರಜೆ ತೆಗೆದುಕೊಳ್ಳಿ ಎಂದು ಹೇಳಲಾಗಿತ್ತು. ಆದರೂ, ರಜೆ ತೆಗೆದುಕೊಳ್ಳದೇ ಕರ್ತವ್ಯದಲ್ಲಿ ಮುಂದುವರಿಯುವುದಾಗಿ ಹೇಳಿದರು. ಇದು ನಿಜಕ್ಕೂ ಹೆಮ್ಮೆ ಪಡುವ ವಿಷಯ" ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಕರ್ತವ್ಯದಲ್ಲಿ ಬದ್ಧತೆ ತೋರಿದ ಪೊಲೀಸ್ ಸಿಬ್ಬಂದಿಯನ್ನು ಸಹೋದ್ಯೋಗಿಗಳು ಸನ್ಮಾನಿಸಿದ ವಿಡಿಯೋ ಶೇರ್​ ಮಾಡಿದ್ದಾರೆ.

ಪ್ರವೀಣ್ ಸೂದ್ ತಮ್ಮ ಟ್ವಿಟರ್​ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ಮಾತನಾಡಿದ ಪೊಲೀಸ್​ ಸಿಬ್ಬಂದಿ, "ನನ್ನ ತಾಯಿಗೆ ಹುಷಾರಿರಲಿಲ್ಲ, ಅವರಿಗೆ 80 ವರ್ಷದ ಆಸುಪಾಸು. ಒಂದು ವರ್ಷದ ಹಿಂದೆ ಜಾರಿಬಿದ್ದು ಕಾಲಿಗೆ ಏಟು ಮಾಡಿಕೊಂಡಿದ್ರು. ಆಪರೇಷನ್​ ಮಾಡಿಸಿದ್ರೂ ಕೂಡ ಕಾಲು ಸರಿಯಾಗಿರಲಿಲ್ಲ. ನಿನ್ನೆ ಸ್ಪಲ್ಪ ಉಸಿರಾಟದ ತೊಂದರೆಯಾಗಿದ್ದು, ಬೆಳಗಿನ ಜಾವ ತೀರಿಕೊಂಡರು. ಮನೆಯಲ್ಲಿ ಅಣ್ಣ ಇದ್ದಾನೆ, ಉಳಿದ ಎಲ್ಲ ಕಾರ್ಯಕ್ರಮಗಳನ್ನು ಮನೆಯವರು ನೋಡಿಕೊಳ್ಳುತ್ತಾರೆ ಎಂದು ತಿಳಿದು, ಎಲೆಕ್ಷನ್​ ಡ್ಯೂಟಿ ಇರುವ ಕಾರಣ ನಾನು ಕೆಲಸಕ್ಕೆ ಬಂದಿದ್ದೇನೆ. ನಮ್ಮನ್ನು ಹೆತ್ತುಹೊತ್ತ ಸಾಕಿದ ತಾಯಿ ಸಾವನ್ನಪ್ಪಿದ್ದಾರೆ. ಈಗ ನಮ್ಮನ್ನು ಸಾಕಿ, ಜೋಪಾನ ಮಾಡುತ್ತಿರುವುದು ಪೊಲೀಸ್​ ಇಲಾಖೆ, ಇದು ಸಹ ನಮ್ಮ ತಾಯಿಯೇ. ಇಬ್ಬರೂ ತಾಯಂದಿರು ಒಂದೇ" ಎನ್ನುವ ಮೂಲಕ ಕೆಲಸ ಮೇಲಿನ ವಿಶೇಷ ಆಸಕ್ತಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ವಿಧಾನಸಭಾ ಚುನಾವಣೆಗೆ ಬೆಂಗಳೂರು ಪೊಲೀಸರ ಸಕಲ ಸಿದ್ಧತೆ: ನಿರ್ಭೀತ ಮತದಾನಕ್ಕೆ ವೇದಿಕೆ ಸಿದ್ಧ

ABOUT THE AUTHOR

...view details