ಕರ್ನಾಟಕ

karnataka

By

Published : Apr 8, 2020, 7:40 PM IST

ETV Bharat / state

ಲಾಕ್‌ಡೌನ್:  ತಜ್ಞರ ಸಮಿತಿ ವರದಿ ಸಲ್ಲಿಕೆ...  ಹಾಟ್‌ಸ್ಪಾಟ್​ಗಳಲ್ಲಿ 6 ತಿಂಗಳ ಎಚ್ಚರಿಕೆಗೆ ಶಿಫಾರಸು

ಮುಖ್ಯಮಂತ್ರಿಗಳ‌ ಗೃಹ ಕಚೇರಿ ಕೃಷ್ಣಾದಲ್ಲಿ ಲಾಕ್​ಡೌನ್​ ಮುಂದುವರಿಕೆ ವಿಚಾರ ಸಂಬಂಧ ಸರ್ಕಾರಕ್ಕೆ ಶಿಫಾರಸು ಮಾಡುವ ಕುರಿತು ಕೋವಿಡ್ ಟಾಸ್ಕ್ ಫೋರ್ಸ್ ಸಭೆ ಇಂದು ನಡೆಯಿತು.

Meeting
ಸಭೆ

ಬೆಂಗಳೂರು: ಡಾ.ದೇವಿ ಶೆಟ್ಟಿ ಅಧ್ಯಕ್ಷತೆಯ ತಜ್ಞರ ಸಮಿತಿಯು ಲಾಕ್​​​​ಡೌನ್​ ಸಡಿಲಿಸುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ವರದಿ ಸಲ್ಲಿಸಿತು.

ಮುಖ್ಯಂಮತ್ರಿಗಳ‌ ಗೃಹ ಕಚೇರಿ ಕೃಷ್ಣಾದಲ್ಲಿ ಲಾಕ್​​ಡೌನ್​ ಮುಂದುವರಿಕೆ ವಿಚಾರ ಸಂಬಂಧ ಸರ್ಕಾರಕ್ಕೆ ಶಿಫಾರಸು ಮಾಡುವ ಕುರಿತು ಕೋವಿಡ್ ಟಾಸ್ಕ್ ಫೋರ್ಸ್ ಸಭೆ ನಡೆಯಿತು.

ಈ ಸಭೆಯಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಮಂಜುನಾಥ್, ರಾಜೀವ್ ಗಾಂಧಿ ಆಸ್ಪತ್ರೆಯ ಡಾ. ನಾಗರಾಜ್, ಡಾ. ರವಿ ಹಾಗೂ ಡಾ. ಸುದರ್ಶನ್ ಅವರಿದ್ದ ತಜ್ಞರ ಸಮಿತಿಯು, ಲಾಕ್​​​​ಡೌನ್ ಹಂತ ಹಂತವಾಗಿ ಹೇಗೆ ಸಡಿಲಗೊಳಿಸುವುದು ಎಂಬ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ವರದಿ ಸಲ್ಲಿಸಿದೆ. ಇದಕ್ಕಾಗಿ ಮುಖ್ಯಮಂತ್ರಿಗಳು ತಜ್ಞರ ತಂಡಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಮುಂದಿನ ಆರು ತಿಂಗಳವರೆಗೆ ಹೆಚ್ಚಿನ ಎಚ್ಚರ ವಹಿಸಬೇಕಾಗಿದೆ. ಕೊರೊನಾ ತೀವ್ರವಾಗಿ ಬಾಧಿಸಿರುವ (ಹಾಟ್‌ಸ್ಪಾಟ್‌) ಪ್ರದೇಶಗಳಲ್ಲಿ ಲಾಕ್ ಡೌನ್ ಮುಂದುವರೆಸಬೇಕು ಎಂದು ಸಮಿತಿ ಕಟ್ಟುನಿಟ್ಟಿನ ಶಿಫಾರಸು ಮಾಡಿದೆ.
ಸಮಿತಿಯ ಶಿಫಾರಸಿನ ಕೆಲವು ಮುಖ್ಯಾಂಶಗಳು ಹೀಗಿವೆ:
• ಲಾಕ್​ಡೌನ್​ ನಂತರ ಪ್ರಕರಣಗಳು ವರದಿಯಾದ ಪ್ರದೇಶದಲ್ಲಿ ಸ್ಥಳೀಯವಾಗಿ ಲಾಕ್​​ಡೌನ್ ಮಾಡಬೇಕು.
• ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಕಾಯ್ದುಕೊಳ್ಳುವುದನ್ನು ಮುಂದುವರಿಸಬೇಕು.
• ಶಾಲೆ, ಕಾಲೇಜುಗಳನ್ನು ಮೇ 31ರ ವರೆಗೆ ಮುಚ್ಚಬೇಕು.
• ಎ.ಸಿ. ಇಲ್ಲದ ಎಲ್ಲ ಅಂಗಡಿಗಳನ್ನು ತೆರೆಯಬಹುದು.
• ಐಟಿ, ಬಿಟಿ ಉದ್ಯಮಗಳು, ಅತ್ಯಾವಶ್ಯಕ ಸೇವೆ ಒದಗಿಸುವ ಸರ್ಕಾರಿ ಕಚೇರಿಗಳು, ಕಾರ್ಖಾನೆಗಳಲ್ಲಿ ಶೇ. 50 ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸಬಹುದು.
• ಅಂತರರಾಜ್ಯ ಗಡಿಗಳಲ್ಲಿ ಸರಕು ಸಾಗಣೆ ವಾಹನಗಳಿಗೆ ಮಾತ್ರ ಪ್ರವೇಶ ನೀಡಬೇಕು.
• ಸ್ಥಳೀಯ ಅಂಗಡಿಗಳು ಹೆಚ್ಚಿನ ಅವಧಿಗೆ ತೆರೆದಿಡುವ ಮೂಲಕ ಜನ ಸಂದಣಿಯಾಗದಂತೆ ಎಚ್ಚರ ವಹಿಸಬೇಕು.
• ಅಂತರರಾಜ್ಯ ರೈಲು ಸೇವೆ, ವಿಮಾನ ಸೇವೆಗಳನ್ನು ಸದ್ಯ ಪ್ರಾರಂಭಿಸಬಾರದು.
• ಕೋವಿಡ್ ಪ್ರಕರಣಗಳು ವರದಿಯಾದಾಗ ಚಿಕಿತ್ಸೆಗೆ ವೈದ್ಯರು, ದಾದಿಯರು, ಇತರ ಅರೆ ವೈದ್ಯಕೀಯ ಸಿಬ್ಬಂದಿ
ಜನರ ಅನವಶ್ಯಕ ಓಡಾಟಕ್ಕೆ ಕಡಿವಾಣ ಹಾಕಬೇಕು.
• ಏಪ್ರಿಲ್ 30 ರ ವರೆಗೆ ಎಸಿ ಬಸ್ / ಮೆಟ್ರೋ ಸೇವೆ ಬೇಡ.
• ಖಾಸಗಿ ವಾಹನಗಳ ಓಡಾಟಕ್ಕೆ ಸರಿ - ಬೆಸ ಸಂಖ್ಯೆಯ ಸೂತ್ರವನ್ನು ಅನುಸರಿಸಬೇಕು.
• ಸಮಿತಿಯು ಮುಂದಿನ 15 ದಿನಗಳ ಅವಧಿಗೆ ಈ ಶಿಫಾರಸುಗಳನ್ನು ಮಾಡಿದೆ.

ಈ ಬಗ್ಗೆ ಸಿಎಂ ಹೇಳಿದ್ದೇನು?

ಟಾಸ್ಕ್ ಫೋರ್ಸ್ ನೀಡಿದ ವರದಿ ಬಗ್ಗೆ ನಾಳೆ ಕ್ಯಾಬಿನೆಟ್ ನಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಕೇಂದ್ರ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಅಂತ ಕಾದುನೋಡಿ ಮುಂದಿನ ನಿರ್ಧಾರ ಕೈಗೊಳ್ಳೋಣ. ಈಗಲೇ ನಿರ್ಧಾರ ಕೈಗೊಳ್ಳುವುದು ಬೇಡ. ಈಗಾಗಲೇ ಹಲವು ರಾಜ್ಯಗಳು ಲಾಕ್ ಡೌನ್ ಮುಂದುವರೆಸೋ ನಿರ್ಧಾರ ಕೈಗೊಂಡಿವೆ. ನಾವು ನಮ್ಮ ಅಭಿಪ್ರಾಯವನ್ನು ಕೇಂದ್ರಕ್ಕೆ ನೀಡಿದ್ದೇವೆ ಕೇಂದ್ರದ ನಿರ್ಧಾರ ಹಾಗೂ ರಾಜ್ಯದ ಪರಿಸ್ಥಿತಿ ನೋಡಿಕೊಂಡು ನಿರ್ಧರಿಸೋಣ. ಈ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಿ ನಿರ್ಧರಿಸಲಾಗುತ್ತದೆ ಎಂದು ತಜ್ಞರ ಸಮಿತಿಗೆ ಸಿಎಂ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಹಾಗೂ ಸಮಿತಿಯ ಶಿಫಾರಸುಗಳನ್ನು ಪರಿಶೀಲಿಸಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಇದೇ ವೇಳೆ ಸಿಎಂ ತಜ್ಞರ ತಂಡಕ್ಕೆ ಭರವಸೆ ನೀಡಿದ್ದಾರೆ.

ABOUT THE AUTHOR

...view details