ಬೆಂಗಳೂರು:ಕೆಲವೇ ದಿನಗಳಲ್ಲಿ ಹೈಕಮಾಂಡ್ ಅನುಮತಿ ಪಡೆದು ಸಚಿವ ಸಂಪುಟ ವಿಸ್ತರಣೆ ಮಾಡುತ್ತೇವೆ. ಆದಷ್ಟು ಬೇಗ ಸಚಿವ ಸಂಪುಟ ವಿಸ್ತರಣೆ ಮಾಡೋಣ ಅಂತಾ ಹೈಕಮಾಂಡ್ ಹೇಳಿದೆ ಎಂದು ಸಿಎಂ ಬೊಮ್ಮಾಯಿ ವಿಧಾನಸೌಧದಲ್ಲಿ ಹೇಳಿದ್ದಾರೆ.
ದೂರು ನೀಡಿದರೆ ತನಿಖೆ ಮಾಡುತ್ತೇವೆ:ಕಮಿಷನ್ ಬಗ್ಗೆ ಸರ್ಕಾರವೇ ತನಿಖೆ ನಡೆಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ಯಾವುದರ ಮೇಲೆ ತನಿಖೆ ಮಾಡಬೇಕು. ಯಾವ ಆಧಾರದಲ್ಲಿ ತನಿಖೆ ಮಾಡಬೇಕು? ಎಂದು ದೂರು ನೀಡಿದರೆ ತನಿಖೆ ಮಾಡುತ್ತೇವೆ ಎಂದರು.
ಗುತ್ತಿಗೆದಾರರ ಸಂಘದವರು ಯಾವುದೇ ದಾಖಲೆ ನೀಡಿಲ್ಲ. ಲೋಕಾಯುಕ್ತಕ್ಕೆ ದೂರು ನೀಡಲಿ. ಅವರು ದೂರು ನೀಡಿದರೆ, ನಾಳೆಯೇ ತನಿಖೆಗೆ ಆದೇಶ ನೀಡುತ್ತೇವೆ. ಪ್ರತಿಪಕ್ಷದಲ್ಲೇ ಹೊಂದಾಣಿಕೆ ಇಲ್ಲದಂತಾಗಿದೆ. ಗುತ್ತಿಗೆದಾರರ ವಿಚಾರವನ್ನು ಕೊನೆಯಲ್ಲಿ ತೆಗೆದುಕೊಂಡರು. ಯಾಕೆಂದರೆ ಅದರಲ್ಲಿ ಸತ್ಯ ಇಲ್ಲ ಅಂತ ಅವರಿಗೂ ಗೊತ್ತು. ಸರ್ಕಾರ ಈಗಲೂ ಸ್ಪಷ್ಟವಾಗಿದೆ ದೂರು ನೀಡಿದ್ರೆ ತನಿಖೆ ಮಾಡಲು ಸಿದ್ಧವಿದೆ ಎಂದು ಹೇಳಿದರು.
ಗುತ್ತಿಗೆದಾರರ ಸಂಘದ ಕೆಂಪಣ್ಣ ಒಂದು ಕಡೆ, ನ್ಯಾಯಮೂರ್ತಿ ಕೆಂಪಣ್ಣ ಅವರ ರಿಪೋರ್ಟ್ ಒಂದು ಕಡೆ. ಇದರ ಬಗ್ಗೆ ಚರ್ಚೆಯಾಗಬೇಕು. ನ್ಯಾಯಮೂರ್ತಿ ಕೆಂಪಣ್ಣನವರ ರಿಪೋರ್ಟ್ ಬಗ್ಗೆ ಚರ್ಚೆಯಾಗಬೇಕು. ಮುಂದಿನ ದಿನಗಳಲ್ಲಿ ಜನರಿಗೆ ಎಲ್ಲವೂ ಗೊತ್ತಾಗಲಿದೆ. ಈಗಾಗಲೇ ಮುನಿರತ್ನ ಅವರ ಮೇಲೆ ಕೇಸ್ ಹಾಕಿದ್ದಾರೆ. ಏನಾದ್ರೂ ಇದ್ದಿದ್ದರೆ ಕೋರ್ಟ್ ಮುಂದೆ ಹೇಳಲಿ ಎಂದರು.
ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ: 2006 ರಿಂದ ಎಲ್ಲಾ ತನಿಖೆಯಾಗಲಿ ಎಂಬ ಸಿದ್ದರಾಮಯ್ಯನವರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ಕಾಲದಲ್ಲಿ ಆದೇಶ ಮಾಡಿದ ಪ್ರಕರಣಗಳ ಮೇಲೆ ಅವರೇ ಕ್ರಮ ತೆಗೆದುಕೊಂಡಿಲ್ಲ. ಸರ್ಕಾರ ತನಿಖೆ ಮಾಡಲಿ ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ಕಾದು ನೋಡಿ ಎಂದು ಉತ್ತರಿಸಿದರು.
ದಾಖಲೆ ಕೊಡುವಂತೆ ಸಿಎಂ ಆಗ್ರಹ:ಪ್ರತಿಪಕ್ಷದವರು ಎತ್ತಿರುವ ಪಿಎಸ್‌ಐ ಸ್ಕಾಮ್, ಇನ್ನೂ ಅನೇಕ ವಿಚಾರ ಅವರಿಗೆ ತಿರುಗೇಟು ಆಗಿದೆ. ನಾವು ತೆಗೆದುಕೊಂಡ ಕ್ರಮವನ್ನೇ ಚರ್ಚೆ ಮಾಡಿದ್ದಾರೆ. ಬೇರೆ ಏನು ಚರ್ಚೆಯಾಗಿಲ್ಲ. ಅವರ ಅವಧಿಯಲ್ಲಿ ಮಾಡದಿರುವುದನ್ನ ನಮ್ಮ ಸರ್ಕಾರ ಮಾಡಿದೆ. ಪೋಲಿಸ್ ಕಾನ್ಸ್ಟೇಬಲ್ ಹಗರಣದಲ್ಲಿ ಆರೋಪಿಗಳ ಬಂಧನಕ್ಕೆ ಆಗ ಪ್ರಾಸಿಕ್ಯೂಷನ್ ಅವಕಾಶ ಕೊಡಲಿಲ್ಲ. ಅವರ ಕಾಲದಲ್ಲಿ ಟೀಚರ್ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಗುತ್ತಿಗೆದಾರರ ವಿಷಯದಲ್ಲಿ ಪದೇ ಪದೆ ಹೇಳಿದ್ರೆ ಜನ ನಂಬುತ್ತಾರೆ ಎಂದು ಭಾವಿಸಿದ್ದಾರೆ. ಒಂದು ಪ್ರಕರಣಕ್ಕೆ ದಾಖಲೆ ಕೊಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:ಮೀಸಲಾತಿ ಹೆಚ್ಚಳ ಕುರಿತು ಚರ್ಚೆ: ಒಂದು ವಾರದಲ್ಲಿ ಸರ್ವಪಕ್ಷ ಸಭೆ ಕರೆದು ತೀರ್ಮಾನ ಎಂದ ಸಿಎಂ
ಕಾಂಗ್ರೆಸ್‌ಗೆ ನೈತಿಕತೆ ಇಲ್ಲ: ಯಾರು ಕಮಿಷನ್ ಕೇಳಿದ್ದರು ಅಂತ ಈಗಲೂ ಲೋಕಾಯುಕ್ತಕ್ಕೆ ದಾಖಲೆ ಕೊಡಿ. ತನಿಖೆ ಮಾಡಿಸಿ ಕ್ರಮ ತೆಗೆದುಕೊಳ್ಳುತ್ತೇವೆ. ಕಾಂಗ್ರೆಸ್‌ಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಪುಸ್ತಕವನ್ನೇ ಮಾಡಿದ್ದೇವೆ, ಯಾವ ಕ್ಯಾಂಪೇನ್ ಆದ್ರೂ ಮಾಡಲಿ ಸತ್ಯಕ್ಕೆ ಜಯ ಸಿಗುತ್ತದೆ. ಪುರಾವೆ ಇಲ್ಲದೇ ಮಾತನಾಡುವ ಪ್ರವೃತ್ತಿ ಬಹಳ ದಿನ ನಡೆಯಲ್ಲ ಎಂದು ಸಿಎಂ ಕೈ ನಾಯಕರಿಗೆ ತಿರುಗೇಟು ಕೊಟ್ಟರು.