ಬೆಂಗಳೂರು: ರಾಜ್ಯದಲ್ಲಿ ಸಾಂಪ್ರದಾಯಿಕ ಕುಸ್ತಿಯನ್ನು ಉತ್ತೇಜಿಸಿ ಪ್ರೋತ್ಸಾಹಿಸಲು ಭಾರತೀಯ ಶೈಲಿಯ ಕರ್ನಾಟಕ ಕುಸ್ತಿ ಸಂಘ ಅಸ್ತಿತ್ವಕ್ಕೆ ಬಂದಿದೆ. ಕುಸ್ತಿಗೆ ಮತ್ತೊಂದು ಹೆಸರಾದ ಕರ್ನಾಟಕದಲ್ಲಿ ಮಣ್ಣಿನ ಕುಸ್ತಿಗೆ ಒತ್ತು ನೀಡುವ ಉದ್ದೇಶದಿಂದ ಭಾರತೀಯ ಶೈಲಿಯ ಕುಸ್ತಿ ಮಹಾಸಂಘದ ಸರ್ವ ಸದಸ್ಯರ ಸಭೆಯಲ್ಲಿ ರಾಜ್ಯದ ಕುಸ್ತಿ ಸಂಘಕ್ಕೆ ಮಾನ್ಯತೆ ನೀಡಿದೆ. ರಾಷ್ಟ್ರೀಯ ಸಂಘದ ಸಂಚಾಲಕ ಮತ್ತು ಪ್ರಧಾನ ಕಾರ್ಯ ಗೌರವ್ ರೋಷನ್ ಲಾಲ್ ರಾಜ್ಯ ಸಂಘಕ್ಕೆ ಮಾನ್ಯತೆ ನೀಡಿದರು.
ಈ ಕುರಿತು ಪ್ರೆಸ್ ಕ್ಲಬ್ನಲ್ಲಿ ನಡೆದ ಮಾಧ್ಯಗೋಷ್ಟಿಯಲ್ಲಿ ನೂತನ ಗೌರವಾಧ್ಯಕ್ಷ ಎಂ ರುದ್ರೇಶ್ ಮಾತನಾಡಿ, ಈ ಹಿಂದೆ ರಾಜ್ಯದ ಕುಸ್ತಿ ಸಂಘಕ್ಕೆ ನೀಡಿದ್ದ ಮಾನ್ಯತೆಯನ್ನು ಭಾರತೀಯ ಶೈಲಿಯ ಸಂಘ ಅನರ್ಹತೆಗೊಳಿಸಿತ್ತು. ಈಗ ಹೊಸ ಸಂಘಕ್ಕೆ ಅವಕಾಶ ಕಲ್ಪಿಸಿದ್ದು, ಕರ್ನಾಟಕದ ಎಲ್ಲಾ ಜಿಲ್ಲೆಗಳನ್ನು ಒಗ್ಗೂಡಿಸಿ ಸಂಘ ಸ್ಥಾಪನೆ ಮಾಡಿರುವುದು ಉತ್ತಮ ಬೆಳವಣಿಗೆ ಎಂದರು.
ನೂತನ ಪದಾಧಿಕಾರಿಗಳು: ಬೆಂಗಳೂರಿನ ಎಂ ರುದ್ರೇಶ್ ಗೌರವ ಅಧ್ಯಕ್ಷರಾಗಿ, ಮಂಗಳೂರಿನ ಸುರೇಶ್ ಚಂದ್ರ ಶೆಟ್ಟಿ ಹಿರಿಯ ಉಪಾಧ್ಯಕ್ಷ, ದಾವಣಗೆರೆಯ ಬಿ ವೀರಣ್ಣ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ರಾಮನಗರದ ಕೆ ಎನ್ ವಿಜಯ ಕುಮಾರ್ ಪ್ರಧಾನ ಕಾರ್ಯದರ್ಶಿ, ಕಾರ್ಯಾಧ್ಯಕ್ಷರಾಗಿ ಮೈಸೂರಿನ ಅಮೃತ್ ಪುರೋಹಿತ್, ದೇವನಹಳ್ಳಿ ಮಂಜಣ್ಣ, ಬೆಳಗಾವಿಯ ಹನುಮಂತಪ್ಪ ಮಲಹರಿ ಗುರವ್, ಬೆಂಗಳೂರಿನ ಎಸ್ ನಾಗರಾಜ್, ಧಾರವಾಡದ ಅಶೋಕ್ ಏಣಗಿ, ಬಾಗಲಕೋಟೆಯ ಮಂಜು ಮಾನೆ ಅವರನ್ನು ಉಪಾಧ್ಯಕ್ಷರನ್ನಾಗಿ, ಬೆಳಗಾವಿಯ ಪ್ರದೀಪ್ ದೇಸಾಯಿ, ಮೈಸೂರಿನ ವಿಜಯೇಂದ್ರ ಅವರನ್ನು ಜಂಟಿ ಕಾರ್ಯದರ್ಶಿಗಳಾಗಿ ನೇಮಕ ಮಾಡಲಾಗಿದೆ.