ಬೆಂಗಳೂರು: ನಿರಂತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದ ಆರೋಪದಡಿ ರೌಡಿಶೀಟರ್ನನ್ನು ಬೆಂಗಳೂರು ನಗರದಿಂದ ಒಂದು ವರ್ಷ ಕಾಲ ಗಡೀಪಾರು ಮಾಡಿ ಪೂರ್ವ ವಿಭಾಗದ ಡಿಸಿಪಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಶರಣಪ್ಪ ಆದೇಶ ಹೊರಡಿಸಿದ್ದಾರೆ.
ಜೀವನ್ ಭೀಮಾ ನಗರ ಪೊಲೀಸ್ ಠಾಣೆಯ ರೌಡಿಶೀಟರ್ ಜೋಶ್ವಾ (29) ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಗಡಿಪಾರು ಮಾಡಲಾಗಿದ್ದು, ಇನ್ನೊಂದು ವರ್ಷದವರೆಗೂ ನಗರ ಪ್ರವೇಶಿಸದಂತೆ ತಾಕೀತು ಮಾಡಿ ಡಿಸಿಪಿ ಆದೇಶಿಸಿದ್ದಾರೆ.
ಈತ ಸಮಾಜಕ್ಕೆ ಧಕ್ಕೆಯಾಗುವಂತಹ ಹಾಗೂ ಕಾನೂನು ಸುವ್ಯವಸ್ಥೆಗೆ ಸವಾಲಾಗುವ ಅಪರಾಧ ಪ್ರಕರಣಗಳಲ್ಲಿ ನಿರಂತರವಾಗಿ ಭಾಗಿಯಾಗಿದ್ದ. ಈತನ ವಿರುದ್ಧ ಕೊಲೆ ಯತ್ನ, ಹಲ್ಲೆ ಹಾಗೂ ಪ್ರಾಣ ಬೆದರಿಕೆ ಸೇರಿ ವಿವಿಧ ಪ್ರಕರಣಗಳಿವೆ.
ಗಲಾಟೆ ಪ್ರಕರಣಗಳಲ್ಲಿ ಭಾಗಿಯಾಗಿ ಗೂಂಡಾಗಿರಿ ಪ್ರದರ್ಶಿಸಿದ್ದ ಈತ ಕಾನೂನು ಸುವ್ಯವಸ್ಥೆಗೆ ಧಕ್ಕೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟಗಳಿಗೆ ಹಾನಿಯಾಗುವ ಅಪಾಯವಿರುವ ಹಿನ್ನೆಲೆ ಜೆಬಿನಗರ ಪೊಲೀಸರು ಗಡಿಪಾರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಪರಿಶೀಲನೆ ನಡೆಸಿದ ಡಿಸಿಪಿ ರೌಡಿಶೀಟರ್ನನ್ನು ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.