ಬೆಂಗಳೂರು :ರಾಜ್ಯದಲ್ಲಿ ಅಂತೂ ಪರೀಕ್ಷಾ ಗೊಂದಲಗಳಿಗೆ ತೆರೆ ಎಳೆಯಲಾಗಿದೆ. ಜುಲೈ ಮಧ್ಯ ಭಾಗದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲಾಗುವುದು ಎಂದು ಶಿಕ್ಷಣ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಈ ಹಿನ್ನೆಲೆ ಪರೀಕ್ಷಾ ತುರ್ತು ಘೋಷಣೆ ಮಾಡಿರುವ ಎಸ್ಎಸ್ಎಲ್ಸಿ ಬೋರ್ಡ್, ಇದಕ್ಕಾಗಿ ಇಂದಿನಿಂದಲ್ಲೇ ತಯಾರಿ ನಡೆಸಿದೆ. ಸದ್ಯ ಸಾಂಕ್ರಾಮಿಕ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಹಿಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷಾ ಕೇಂದ್ರಗಳನ್ನ ಗುರುತಿಸುವುದು ಅವಶ್ಯಕ. ಈಗಾಗಲೇ 6000ಕ್ಕೂ ಅಧಿಕ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಸುವುದಾಗಿ ಇಲಾಖೆ ಮಾಹಿತಿ ನೀಡಿದೆ.
ಹೀಗಾಗಿ, 2021ರ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯ ಪರೀಕ್ಷಾ ಕೇಂದ್ರಗಳ ಪುನರ್ ರಚನೆ ಮಾಡಿ ಪ್ರಸ್ತಾವನೆ ಸಲ್ಲಿಸುವ ಕುರಿತು ಆದೇಶ ಹೊರಡಿಸಲಾಗಿದೆ. ಈ ಹಿಂದೆ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಜೂನ್ 21ರಿಂದ ಜುಲೈ 5ರವರೆಗೆ ನಡೆಸಲು ತೀರ್ಮಾನಿಸಲಾಗಿತ್ತು.
ಅದರ ಅನುಗುಣವಾಗಿ, ಪರೀಕ್ಷಾ ಕೇಂದ್ರಗಳನ್ನು ಒಂದು ಕೊಠಡಿಗೆ ಗರಿಷ್ಠ 18 ರಿಂದ 20 ವಿದ್ಯಾರ್ಥಿಗಳಿರುವಂತೆ, ದೈಹಿಕ ಅಂತರ ಕನಿಷ್ಠ ಮೂರು ಅಡಿ ಅಂತರ ಕಾಪಾಡಿಕೊಂಡು, ಒಂದು ಡೆಸ್ಕ್‌ಗೆ ಇಬ್ಬರು ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ ಇರುವಂತೆ ಕೊಠಡಿಗಳ ಲಭ್ಯತೆ ಮತ್ತು ಪರೀಕ್ಷಾ ಕೇಂದ್ರದ ಸಾಮರ್ಥ್ಯ(Center capacity) ಆಧರಿಸಿ ಪರೀಕ್ಷಾ ಕೇಂದ್ರಗಳನ್ನು ಈಗಾಗಲೇ ಅಂತಿಮಗೊಳಿಸಲಾಗಿತ್ತು.
ಕನಿಷ್ಠ 12 ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ :ಆದರೆ, ಪ್ರಸ್ತುತ ಕೋವಿಡ್-19 ಹಿನ್ನೆಲೆ ಪರೀಕ್ಷೆಯನ್ನು ಮುಂದೂಡಲಾಗಿದೆ. ಪರಿಷ್ಕೃತ ವೇಳಾಪಟ್ಟಿಯನ್ನು ಸರ್ಕಾರದ ಆದೇಶವಾದ ನಂತರ ಪ್ರಕಟಿಸಲಾಗುತ್ತೆ. ಈ ವೇಳೆಗೆ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಕನಿಷ್ಠ ಆರು ಅಡಿ ಸಾಮಾಜಿಕ ಅಂತರ ಕಾಯ್ದುಕೊಂಡು ಒಂದು ಕೊಠಡಿಗೆ ಕನಿಷ್ಠ 12 ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ. ಹೀಗಾಗಿ, ಇದನ್ನ ಗುರುತಿಸುವಂತೆ ಪರೀಕ್ಷಾ ಮಂಡಳಿ ಸೂಚಿಸಿದೆ.
ಕೊಠಡಿಗಳ ವಿಶಾಲತೆಯನ್ನು ಆಧರಿಸಿ ಆರು ಅಡಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕನಿಷ್ಠ 12ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳಿಗೂ ಆಸನ ವ್ಯವಸ್ಥೆ ಮಾಡಬಹುದು. ಈ ರೀತಿ ಮಾಡುವುದರಿಂದ ಪರೀಕ್ಷಾ ಕೊಠಡಿಗಳ ಅಗತ್ಯತೆಯಲ್ಲಿ ಹೆಚ್ಚಳವಾಗುವುದರಿಂದ ಕನಿಷ್ಠ 100 ವಿದ್ಯಾರ್ಥಿಗಳಿಗೆ ಒಂದರಂತೆ ಪರೀಕ್ಷಾ ಕೇಂದ್ರಗಳ ರಚನೆ ಮಾಡಬಹುದಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಕೊಠಡಿಗಳ ಲಭ್ಯತೆಗನುಗುಣವಾಗಿ ಗರಿಷ್ಠ ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆ ಮಾಡಬಹುದು.
ಸಂಬಂಧಪಟ್ಟವರೊಂದಿಗೆ ಪತ್ರ ವ್ಯವಹಾರ :ಈ ಹಿನ್ನೆಲೆಯಲ್ಲಿ ಹೆಚ್ಚಿನ ಪರೀಕ್ಷಾ ಕೇಂದ್ರಗಳನ್ನು ರಚನೆ ಮಾಡುವ ಅನಿವಾರ್ಯ ಉಂಟಾಗಿದೆ. ಹೀಗಾಗಿ, ಶಿಕ್ಷಣ ಇಲಾಖೆಯು ಪ್ರೌಢಶಾಲೆಗಳ ಜೊತೆಯಲ್ಲಿ ಆಯಾ ವ್ಯಾಪ್ತಿಯಲ್ಲಿ ಬರುವ ಪದವಿಪೂರ್ವ ಕಾಲೇಜುಗಳು, ವಸತಿಶಾಲೆಗಳು, ಪ್ರಥಮ ದರ್ಜೆ ಕಾಲೇಜುಗಳು, ಸಿಬಿಎಸ್‌ಸಿ ಅಥವಾ ಐಸಿಎಸ್‌ಸಿ ಪ್ರೌಢಶಾಲೆಗಳು ಈ ಎಲ್ಲಾ ಕಟ್ಟಡಗಳನ್ನು ಪರೀಕ್ಷಾ ಕೇಂದ್ರಗಳನ್ನಾಗಿ ರಚಿಸಲು ಸಂಬಂಧಪಟ್ಟವರಿಗೆ ಪತ್ರ ವ್ಯವಹಾರ ಮಾಡಿಕೊಂಡು ಹೆಚ್ಚಿನ ಪರೀಕ್ಷಾ ಕೇಂದ್ರಗಳನ್ನು ರಚಿಸುವಂತೆ ಸೂಚಿಸಲಾಗಿದೆ.
ಸಿಸಿಟಿವಿ ಅಳವಡಿಕೆಯಿಂದ ವಿನಾಯಿತಿ : ಒಂದು ವೇಳೆ ಈ ಎಲ್ಲಾ ಕಟ್ಟಡಗಳನ್ನು ಉಪಯೋಗಿಸಿಕೊಂಡ ನಂತರವೂ ಪರೀಕ್ಷಾ ಕೊಠಡಿಗಳ ಕೊರತೆಯಾದಲ್ಲಿ, ಅದೇ ಪರೀಕ್ಷಾ ಕೇಂದ್ರದಲ್ಲಿನ ಆವರಣದಲ್ಲಿರುವ ಒಂದೇ ಕಾಂಪೌಂಡ್‌ನೊಳಗೆ ಇರುವ ಅಥವಾ ಸಮೀಪದಲ್ಲಿರುವ ಪ್ರಾಥಮಿಕ ಶಾಲೆಗಳ ಕೊಠಡಿಗಳನ್ನು ಬಳಸಿಕೊಳ್ಳಬಹುದಾಗಿದೆ. ಅಗತ್ಯ ಮೂಲಸೌಕರ್ಯಗಳನ್ನು ಹೊಂದಿರುವ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಕ್ಲಸ್ಟರ್‌ಸಹಿತ/ಕ್ಲಸರ್‌ರಹಿತ ಪರೀಕ್ಷಾ ಕೇಂದ್ರಗಳನ್ನು ರಚಿಸಬಹುದು. ಇನ್ನು, ಸಮಾಯಾವಕಾಶದ ಕೊರತೆಯ ಹಿನ್ನೆಲೆಯಲ್ಲಿ ಪ್ರಸ್ತುತ ವರ್ಷಕ್ಕೆ ಸೀಮಿತವಾದಂತೆ "ಸಿಸಿಟಿವಿ ಅಳವಡಿಕೆಯಿಂದ ವಿನಾಯಿತಿ"ಯನ್ನ ನೀಡಲಾಗಿದೆ.
ಖಾಸಗಿ ಪರೀಕ್ಷಾ ಕೇಂದ್ರಗಳನ್ನು ಜಿಲ್ಲಾ ಹಂತದಲ್ಲಿ ರಚಿಸಲಾಗಿದ್ದು, ಒಂದು ವೇಳೆ ಜಿಲ್ಲಾ ಹಂತದಲ್ಲಿ ಮೇಲೆ ಸೂಚಿಸಿರುವಂತೆ ಸಾಮಾಜಿಕ ಅಂತರ ಕಾಪಾಡಿಕೊಂಡು ಪರೀಕ್ಷೆ ನಡೆಸಲು ಕಷ್ಟ ಸಾದ್ಯವಾದರೆ, ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಖಾಸಗಿ ಪರೀಕ್ಷಾ ಕೇಂದ್ರಗಳನ್ನು ತಾಲೂಕು ಮಟ್ಟದಲ್ಲಿ ಪ್ರತ್ಯೇಕವಾಗಿ ರಚನೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
ಸ್ವಾಧೀನಾಧಿಕಾರಿಗಳನ್ನು ನೇಮಕ ಮಾಡುವುದು ಕಡ್ಡಾಯ : ಜಿಲ್ಲೆಯಲ್ಲಿ ರಚಿಸಲಾಗುವ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಪ್ರತಿ ವರ್ಷದಂತೆ ಮುಖ್ಯ ಅಧೀಕ್ಷಕರು, ಕಸ್ಟೋಡಿಯನ್ ಹಾಗೂ ಮೊಬೈಲ್ ಫೋನ್ ಸ್ವಾಧೀನಾಧಿಕಾರಿಗಳನ್ನು ನೇಮಕ ಮಾಡುವುದು ಕಡ್ಡಾಯವಾಗಿದೆ. ಕಾಲಾವಕಾಶ ಕಡಿಮೆ ಇರುವುದರಿಂದ, ಪರೀಕ್ಷಾ ಕೇಂದ್ರಗಳ ರಚನೆ ಕಾರ್ಯಕ್ಕೆ ಪ್ರಥಮ ಆದ್ಯತೆ ನೀಡಿ, ತುರ್ತಾಗಿ ಪರೀಕ್ಷಾ ಕೇಂದ್ರಗಳ ಪ್ರಸ್ತಾವನೆಯನ್ನು ಈಗಾಗಲೇ ಮಂಡಳಿಯಿಂದ ನೀಡಿರುವ ನಮೂನೆಯಲ್ಲಿ ಸಿದ್ಧಪಡಿಸಿ, ಜೂನ್ 9ರೊಳಗೆ ಮಂಡಳಿಗೆ ಸಲ್ಲಿಸಲು ಸೂಚಿಸಲಾಗಿದೆ.
ಓದಿ:ಮೈಸೂರು DC ವರ್ಗಾವಣೆ ವಿವಾದ : ಹೈಕೋರ್ಟ್ ಮೆಟ್ಟಿಲೇರಿದ ಅಧಿಕಾರಿ ಬಿ ಶರತ್