ಬೆಂಗಳೂರು: ಕೊರೊನಾ ಸೋಂಕಿತರಿಗೆ ಆಯುರ್ವೇದ ಔಷಧಿ ಪ್ರಯೋಗ ಯತ್ನಕ್ಕೆ ಮೆಡಿಸಿನ್ ಲಾಬಿ ಅಡ್ಡಿಯಾಗಿದೆ ಎನ್ನುವುದನ್ನು ಆಯುರ್ವೇದ ವೈದ್ಯ ಡಾ.ಗಿರಿಧರ್ ಕಜೆ ತಳ್ಳಿಹಾಕಿದ್ದಾರೆ. ಎರಡನೇ ಹಂತದ ಕ್ಲಿನಿಕಲ್ ಟ್ರಯಲ್ಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಬಾರಿ ದೊಡ್ಡಮಟ್ಟದ ಟ್ರಯಲ್ಗೆ ಮುಂದಾಗಲಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು 'ಈಟಿವಿ ಭಾರತ'ಕ್ಕೆ ಎಕ್ಸ್ಕ್ಲೂಸಿವ್ ಕಿರು ಸಂದರ್ಶನ ನೀಡಿದ್ದು, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಮೊದಲ ಹಂತದ ಟ್ರಯಲ್ ಯಶಸ್ವಿಯಾಗಿದೆ. ರಾಜ್ಯದಲ್ಲಿ 400 ಪ್ರಕರಣ ಇದ್ದಾಗ 10 ಜನ ಸೋಂಕಿತರ ಮೇಲೆ ಪ್ರಯೋಗ ಮಾಡಲಾಯಿತು. ಹೃದ್ರೋಗ, ಕ್ಷಯದಂತಹ ಗಂಭೀರ ಆರೋಗ್ಯ ಸಮಸ್ಯೆ ಇರುವವರನ್ನೂ ಕ್ಲಿನಿಕಲ್ ಟ್ರಯಲ್ಗೆ ಬಳಸಿಕೊಳ್ಳಲಾಯಿತು. ಎಲ್ಲಾ 10 ಸೋಂಕಿತರು ಗುಣಮುಖರಾಗಿದ್ದಾರೆ. ಈಗ ದೊಡ್ಡ ಸಂಖ್ಯೆಯ ಕ್ಲಿನಿಕಲ್ ಟ್ರಯಲ್ಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಡಾ. ಗಿರಿಧರ್ ಕಜೆ ಮಾಹಿತಿ ನೀಡಿದ್ದಾರೆ.
ಪ್ರಾಥಮಿಕ ಸಂಪರ್ಕಿತರಿಗೆ ಆಯುರ್ವೇದ ಔಷದ ಕೊಟ್ಟರೆ ಸೋಂಕು ನಿಯಂತ್ರಣಕ್ಕೆ ಸಹಕಾರ ಆಗಲಿದೆ ಅಂತಾ ಸರ್ಕಾರಕ್ಕೆ ಸಲಹೆ ಕೊಟ್ಟಿದ್ದೇನೆ. ಪ್ರಾಥಮಿಕ ಸಂಪರ್ಕಿತರ ಸಂಖ್ಯೆ ಬಹಳ ದೊಡ್ಡದಿದೆ. ಆದರೂ ಇಷ್ಟು ದೊಡ್ಡಸಂಖ್ಯೆ ನಿರ್ವಹಿಸಲು ಮಾಡಲು ತೊಂದರೆ ಇಲ್ಲ. ಪ್ರಾಥಮಿಕ ಸಂಪರ್ಕಿತರಿಗೆ ಮೊದಲು ನೆಗಟಿವ್ ವರದಿ ಬಂದು ನಂತರ ಕೆಲ ದಿನದಲ್ಲಿ ಪಾಸಿಟಿವ್ ವರದಿ ಬರಲಿದೆ. ಹಾಗಾಗಿ ಅವರಿಗೆ ಮೊದಲು ಕೊಟ್ಟರೆ ಅನುಕೂಲ ಆಗಲಿದೆ. ಸೋಂಕು ನಿಯಂತ್ರಣಕ್ಕೆ ಬರಲಿದೆ ಎಂದು ಕಜೆ ಹೇಳಿದ್ದಾರೆ.
70 ಲಕ್ಷ ಮಾತ್ರೆಗಳು ಬೇಕು:
ಪ್ರಾಥಮಿಕ ಸಂಪರ್ಕಿತರಿಗೆ ಕೊಡಲು 70 ಲಕ್ಷ ಮಾತ್ರೆಗಳು ಬೇಕು. ಅದಕ್ಕೆ ಸಿದ್ಧತೆ ನಡೆದಿದೆ ಎಂದ ವೈದ್ಯ ಗಿರಿಧರ್, ಮೆಡಿಸಿನ್ ಲಾಬಿಯಂತಹ ಚಟುವಟಿಕೆ ನಡೆಸಿಲ್ಲ, ಸಚಿವರು ಕರೆದು ಮಾತನಾಡಿದ್ದಾರೆ. ಸಿಎಂ ಹಾಗು ಸರ್ಕಾರ ಸಹಕಾರ ನೀಡುತ್ತಿದ್ದಾರೆ. ಏಕಾಏಕಿ ಇದನ್ನೆಲ್ಲಾ ಮಾಡಲು ಸಾಧ್ಯವಿಲ್ಲ, ಇದು ವಿಪತ್ತು ಕಾಯ್ದೆ ಅಡಿಯಲ್ಲಿ ಬರಲಿದೆ. ಹಾಗಾಗಿ ಯಾರು ಬೇಕಾದರೂ ಟ್ರಯಲ್ ಮಾಡುವಂತಿಲ್ಲ. ಹಾಗಾಗಿ ಸಮಯ ತೆಗೆದುಕೊಳ್ಳುತ್ತಿದೆ. ಆದರೆ, ಜನರಿಗೆ ಬೇಗ ಔಷಧಿ ಸಿಗಲಿ ಎನ್ನುವ ಆತುರ ಇದೆ. ಹಾಗಾಗಿ ಇಂತಹ ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರಬಹುದು ಎಂದು ಮೆಡಿಸಿನ್ ಲಾಬಿಯನ್ನು ಅಲ್ಲಗಳೆದರು.