ಬೆಂಗಳೂರು:ನನಗೆಕೊರೊನಾ ಸೋಂಕು ಲಕ್ಷಣ ಕಂಡುಬಂದ ಕಾರಣ ಪರೀಕ್ಷೆಗೆ ಒಳಗಾಗಿದ್ದೆ. ಜುಲೈ 10ರಂದು ಸೋಂಕು ತಗುಲಿರುವುದು ದೃಢವಾಗಿತ್ತು. ತದ ನಂತರ ಬಿಬಿಎಂಪಿ ಸಿಬ್ಬಂದಿಯೊಬ್ಬರು ನನಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸುವುದಾಗಿ ತಿಳಿಸಿದ್ರು. ಅದಕ್ಕೆ ನಾನು ನಮ್ಮ ಮನೆಯಲ್ಲೇ ವೈದ್ಯರಿದ್ದಾರೆ, ಹೋಂ ಐಸೊಲೇಷನ್ ಆಗುವುದಾಗಿಯೂ ತಿಳಿಸಿದೆ. ಜೊತೆಗೆ ನಾನು ಸದ್ಯ ಫಿಟ್ ಆಗಿದ್ದೇನೆ, ಅಗತ್ಯತೆ ಕಂಡು ಬಂದರೆ ಆಸ್ಪತ್ರೆಗೆ ಬರುವುದಾಗಿ ಹೇಳಿದೆ.
ಸೋಂಕಿತನೊಂದಿಗಿನ ನಮ್ಮ ಪ್ರತಿನಿಧಿ ನಡೆಸಿದ ಫೋನ್ ಸಂಭಾಷಣೆ ಈ ವೇಳೆ ಬಿಬಿಎಂಪಿ ಅಧಿಕಾರಿಗಳು ಕೂಡ ಕೋವಿಡ್ ನಿಯಮ ಪಾಲನೆ ಮಾಡಿ ಮನೆಯಲ್ಲಿಯೇ ಇರಿ ಎಂದಿದ್ದರು. ಆದರೆ ಸ್ವಲ್ಪ ಹೊತ್ತಿನ ನಂತರ ಮತ್ತೆ ನನಗೆ ಕರೆ ಬಂತು. ನಿಮಗೆ ಕೊರೊನಾ ಪಾಸಿಟಿವ್ ಬಂದಿದೆ ಅಲ್ವಾ?, ನಿಮ್ಮನ್ನು ಆಸ್ಪತ್ರೆಗೆ ದಾಖಲಿಸಲು ನಾವು ನಿಮ್ಮ ಮನೆಯ ಬಳಿ ಆ್ಯಂಬ್ಯುಲೆನ್ಸ್ ಕಳುಹಿಸುತ್ತೇವೆ ರೆಡಿಯಾಗಿರಿ ಎಂದರು.
ಈ ವೇಳೆ ನೀವು ಯಾರು? ಎಂದು ಅವರಲ್ಲಿ ನಾನು ಪ್ರಶ್ನೆ ಮಾಡಿದೆ. ಅದಕ್ಕವರು, ನಾವು ಖಾಸಗಿ ಎನ್.ಜಿ.ಓ ದವರು. ಬಿಬಿಎಂಪಿ ಹಾಗೂ ಸರ್ಕಾರಕ್ಕೆ ಸಹಾಯ ಮಾಡುತ್ತಿದ್ದೇವೆ ಎಂದು ಹೇಳಿದ್ರು. ಅದಕ್ಕೆ ನಾನು, ಈಗಾಗಲೇ ಬಿಬಿಎಂಪಿಯವರ ಜೊತೆ ಮಾತನಾಡಿದ್ದೀನಿ ಎಂದೆ. ಆದರೂ ಕೂಡ ನನಗೆ ಪದೇ ಪದೇ ಕರೆ ಮಾಡಿ ಮಾನಸಿಕ ಹಿಂಸೆ ನೀಡೋಕೆ ಶುರು ಮಾಡಿದ್ರು. ಇದು ಇಷ್ಟಕ್ಕೆ ನಿಲ್ಲಲಿಲ್ಲ.
ಇದಾದ ಮೇಲೆ ನನಗೆ ಅನುಮಾನ ಮೂಡಲು ಶುರುವಾಯ್ತು. ಸತ್ಯ ಸಂಗತಿ ತಿಳಿಯುವ ಉದ್ದೇಶದಿಂದ ಪರಿಶೀಲನೆ ಮಾಡಿದಾಗ ಆಘಾತಕಾರಿ ವಿಚಾರ ಗೊತ್ತಾಯ್ತು. ಕೊರೊನಾ ಹೆಸರಿನಲ್ಲಿ ಮಾಫಿಯಾ ನಡೆಯುತ್ತಿದೆ ಅನ್ನೋದನ್ನು ನನ್ನ ಅನುಭವದಲ್ಲೇ ಕಂಡುಕೊಂಡೆ!.
ಅಸಲಿಯತ್ತೇನು ಗೊತ್ತೇ?
ಮೊದಲಿಗೆ ಬಿಬಿಎಂಪಿ, ಸರ್ಕಾರದ ಜೊತೆ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ. ಸೋಂಕಿತ ವ್ಯಕ್ತಿಗಳ ಸಂಪರ್ಕ ಮಾಡಿದ ನಂತರ ಖಾಸಗಿ ಆಸ್ಪತ್ರೆ ಜೊತೆ ಕೈಜೋಡಿಸಿ ಮನೆಯ ಬಳಿ ಆ್ಯಂಬುಲೆನ್ಸ್ ಕಳುಹಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸುತ್ತಾರೆ. ಈ ಮೂಲಕ ಕೊರೊನಾ ಸೋಂಕಿತರಿಂದ ಲಕ್ಷ ಲಕ್ಷ ಹಣ ಲೂಟಿ ಮಾಡುವ ಜಾಲದ ಅಸಲಿಯತ್ತಿದು.
ಅಮಾಯಕ ಸಾಮಾನ್ಯ ಜನರು ಬಿಬಿಎಂಪಿಯವರೇ ಆ್ಯಂಬುಲೆನ್ಸ್ ಕಳುಹಿಸಿದ್ದಾರೆಂದು ನಂಬಿಕೊಂಡು ಆಸ್ಪತ್ರೆಗೆ ಚಿಕಿತ್ಸೆಗಾಗಿ ಒಳಗಾಗುತ್ತಾರೆ. ಆದರೆ ಆಸ್ಪತ್ರೆ ಬಿಲ್ ನೋಡಿದಾಗ ಬಂಡವಾಳ ಬಯಲಾಗುತ್ತದೆ.
ನೀವು ಮಾಡಬೇಕಾದ್ದೇನು?
ಬಿಬಿಎಂಪಿಯವರು ಕರೆ ಮಾಡಿದಾಗ ಯಾವ ಆಸ್ಪತ್ರೆ, ಅದರ ಲೊಕೇಷನ್ ತಿಳಿದುಕೊಂಡ ನಂತರ ಹೋಗಿ ಇಲ್ಲದಿದ್ದರೆ, ನಿಮ್ಮನ್ನು ಮೋಸ ಮಾಡುವ ಜಾಲ ಇದೆ, ನೀವು ಎಚ್ಚರದಿಂದಿರಿ.
ಇದು ಕೊರೊನಾ ರೋಗಿ ಈಟಿವಿ ಭಾರತದ ಜೊತೆ ಬಿಚ್ಚಿಟ್ಟ ಭಯಾನಕ ಸಂಗತಿ. ಒಂದೆಡೆ ಬೆಂಗಳೂರಲ್ಲಿ ಕೊರೊನಾ ಸೊಂಕು ದಿನೇ ದಿನೇ ವ್ಯಾಪಕವಾಗಿ ಹರಡುತ್ತಿದೆ. ಇದರ ಜೊತೆ ಸಿಲಿಕಾನ್ ಸಿಟಿಯಲ್ಲಿ ಇದನ್ನೆ ಬಂಡವಾಳ ಮಾಡಿಕೊಂಡು ರೋಗಿಗಳ ಜೀವದ ಜೊತೆ ಆಟವಾಡುವ ತಂಡವೊಂದು ಸೈಲೆಂಟಾಗಿ ಚುರುಕಿನಿಂದ ಕೆಲಸ ಮಾಡ್ತಿದೆ.
ಸದ್ಯ ಈ ರೋಗಿಯ ಸಮಯಪ್ರಜ್ಞೆಯಿಂದಾಗಿ ಬಹುದೊಡ್ಡ ಮಾಫಿಯಾ ಗ್ಯಾಂಗ್ ಕುರಿತ ಮಾಹಿತಿ ಬಯಲಿಗೆ ಬಂದಿದೆ. ಇಂತಹ ಆಪತ್ಕಾಲದಲ್ಲೂ ಮಾಫಿಯಾ ಗ್ಯಾಂಗ್ಗಳು ಹಣ ಮಾಡುವ ಅಡ್ಡದಾರಿ ಹಿಡಿದಿರುವುದು ಮಾತ್ರ ದುರಂತ. ಸರ್ಕಾರ ಈ ನಿಟ್ಟಿನಲ್ಲಿ ತಕ್ಷಣ ಕಾರ್ಯ ಪ್ರವೃತ್ತರಾಗಿ ದುಷ್ಕರ್ಮಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು. ಈ ಮೂಲಕ ಅಮಾಯಕ ಜನರ ರಕ್ಷಣೆಗೆ ಧಾವಿಸಬೇಕಿದೆ.