ಬೆಂಗಳೂರು: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಅಬಕಾರಿ ಇಲಾಖೆಗೆ 29 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹದ ಗುರಿ ನೀಡಲಾಗಿದ್ದು, ಈ ಗುರಿ ಮೀರಿ ಇನ್ನು 1 ಸಾವಿರ ಕೋಟಿ ರೂ. ಹೆಚ್ಚು ತೆರಿಗೆ ಸಂಗ್ರಹವಾಗುವ ನಿರೀಕ್ಷೆ ಇದೆ ಎಂದು ಅಬಕಾರಿ ಸಚಿವ ಕೆ ಗೋಪಾಲಯ್ಯ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈಗಾಗಲೇ 19,244 ಕೋಟಿ ರೂ. ತೆರಿಗೆ ಸಂಗ್ರಹವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 20,603 ಕೋಟಿ ರೂ. ತೆರಿಗೆ ಸಂಗ್ರಹ ಮಾಡಿದಂತಾಗಿದೆ ಎಂದರು.
ಪರವಾನಗಿ ನೀಡುವ ಪ್ರಸ್ತಾವನೆ ಇಲ್ಲ: ಪ್ರಸ್ತುತ ಬಾರ್ ಪರವಾನಗಿ ನೀಡುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ. ಚುನಾವಣಾ ವರ್ಷವಾಗಿರುವುದರಿಂದ ಯಾವುದೇ ಹೊಸ ವೈನ್ ಸ್ಟೋರ್‌ಗಳಿಗೆ ಅನುಮತಿ ನೀಡುವುದಿಲ್ಲ. 1992ರಲ್ಲಿ ಸಿಎಲ್2, ಸಿಎಲ್ ಕೊಟ್ಟಿರುವುದನ್ನು ಬಿಟ್ಟರೆ ನಂತರ ಪರವಾನಗಿ ನೀಡಿಲ್ಲ ಎಂದು ಹೇಳಿದರು.
24 ಅಬಕಾರಿ ತನಿಖಾ ಠಾಣೆ ಆರಂಭ : ಹೊರ ರಾಜ್ಯಗಳಿಂದ ಅಕ್ರಮವಾಗಿ ರಾಜ್ಯಕ್ಕೆ ಬರುವ ಮದ್ಯವನ್ನು ತಡೆಯಲು ಹೊಸದಾಗಿ 24 ಅಬಕಾರಿ ತನಿಖಾ ಠಾಣೆ (ಚೆಕ್ ಪೋಸ್ಟ್ ) ಗಳನ್ನು ಶೀಘ್ರದಲ್ಲೇ ಸ್ಥಾಪಿಸಲಾಗುವುದು ಎಂದು ಸಚಿವರು ತಿಳಿಸಿದರು.
ಪ್ರಸ್ತುತ 16 ತನಿಖಾ ಠಾಣೆಗಳು ನಮ್ಮ ಇಲಾಖೆಯಲ್ಲಿದ್ದು, ಹೊಸದಾಗಿ 24 ತನಿಖಾ ಠಾಣೆಗಳನ್ನು ಶೀಘ್ರವೇ ಆರಂಭಿಸಲಾಗುವುದು. ಆಗ ರಾಜ್ಯದಲ್ಲಿ 40 ತನಿಖಾ ಠಾಣೆಗಳಾಗಲಿವೆ. ವಾಣಿಜ್ಯ ಇಲಾಖೆ ತನಿಖಾ ಠಾಣೆಗಳನ್ನು ಮಾರ್ಪಡಿಸಿ ಅಬಕಾರಿ ಇಲಾಖೆಯ ತನಿಖಾ ಠಾಣೆಗಳನ್ನಾಗಿ ಪರಿವರ್ತಿಸಲಾಗುವುದು. ಹೊಸ ತನಿಖಾ ಠಾಣೆಗಳಿಗೆ 24 ಅಬಕಾರಿ ಇನ್ಸ್‌ಪೆಕ್ಟರ್, 24 ಸಬ್ ಇನ್ಸ್‌ಪೆಕ್ಟರ್, 163 ಕಾನ್ಸ್ ಟೇಬಲ್‌ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ಠಾಣೆಗಳಿಂದ ಗೋವಾ, ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯದಿಂದ ರಾಜ್ಯಕ್ಕೆ ಬರುವ ಮದ್ಯವನ್ನು ತಡೆಯಲು ಸಹಕಾರಿಯಾಗಲಿದೆ. ಇದರಿಂದ ರಾಜ್ಯದ ಅಬಕಾರಿ ಆದಾಯವು ಹೆಚ್ಚಾಗಲಿದೆ ಎಂದರು.
2023 ರ ವಿಧಾನಸಭ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ:ನಂತರ ಮಾತನಾಡಿದ ಅವರು ಮಂಡ್ಯ ಮತ್ತು ಹಾಸನ ಜಿಲ್ಲೆಯಲ್ಲಿ ಬಿಜೆಪಿ ಬಲಿಷ್ಠವಾಗಿದ್ದು, ಎರಡೂ ಜಿಲ್ಲೆಗಳಲ್ಲಿ ಬಿಜೆಪಿ ಗೆಲ್ಲುವ ಅವಕಾಶ ಹೆಚ್ಚಿದೆ. ಮಂಡ್ಯ ಜಿಲ್ಲೆಯಲ್ಲಿ ಅನೇಕ ಮುಖಂಡರು ಬಿಜೆಪಿ ಸೇರಲಿದ್ದಾರೆ ಎಂದು ಹೇಳಿದರು.
ಮುಂಬರುವ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡುವುದಷ್ಟೇ ಅಲ್ಲ, ಬಿಜೆಪಿ ಅಭ್ಯರ್ಥಿಗಳು ಜಯ ಸಾದಿಸುವ ಅವಕಾಶವೂ ಹೆಚ್ಚಾಗಿದೆ. ಸಂಸದೆ ಸುಮಲತಾ ಸೇರಿದಂತೆ ಕೆಲವು ಮುಖಂಡರ ಸೇರ್ಪಡೆ ವಿಚಾರದಲ್ಲಿ ಪಕ್ಷದ ವರಿಷ್ಠರು ನಿರ್ಧಾರ ಮಾಡುತ್ತಾರೆ. 2023 ರ ವಿಧಾನಸಭ ಚುನಾವಣೆಯಲ್ಲಿ ಅಚ್ಚರಿ ಫಲಿತಾಂಶ ಬರಲಿದೆ ಎಂದು ಸಚಿವ ಕೆ.ಗೋಪಾಲಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಸರ್ಕಾರದ ಗೋಮಾತೆ ಮೇಲಿನ ಪ್ರೀತಿ ಕೇವಲ ಕಾನೂನು ಜಾರಿಗೆ ಸೀಮಿತ: ಪ್ರಿಯಾಂಕ್ ಖರ್ಗೆ ಆರೋಪ