ಬೆಂಗಳೂರು:ಸ್ಕೂಟರ್‌ಗಳು, ಕಾರುಗಳು ಸೇರಿದಂತೆ ವಿವಿಧ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ನ್ನು ನಗರದಲ್ಲಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಕುಮಾರಸ್ವಾಮಿ ಲೇಔಟ್ ಪೊಲೀಸರಿಗೆ ಕೆಲವರು ಸಿಕ್ಕಿಬಿದ್ದಿದ್ದರೆ ಮತ್ತೆ ಇದೇ ಗ್ಯಾಂಗ್ನ ಉಳಿದ ಕೆಲವರು ಬೆಂಗಳೂರು ದಕ್ಷಿಣ ವಿಭಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಈ ಕುರಿತು ಮಾಹಿತಿ ನೀಡಿದ ದಕ್ಷಿಣ ವಿಭಾಗ ಡಿಸಿಪಿ ಅಣ್ಣಾಮಲೈ ಅವರು, ಚೇತನ್, ಪ್ರವೀಣ್, ಸೈಯದ್, ಸಲೀಮ್, ನವಾಜ್, ನಯಾಜ್ ಸೇರಿ 8 ಮಂದಿ ಇದ್ದ ಈ ಗ್ಯಾಂಗ್ ವಾಹನ ಕದಿಯೋದ್ರಲ್ಲಿ ಚಾಲಾಕಿಗಳಾಗಿದ್ದಾರೆ. ಇವರು ಕ್ಷಣಮಾತ್ರದಲ್ಲಿ ಬೈಕ್‌ಗಳನ್ನು ಕದ್ದು ಬಳಿಕ ಅವುಗಳನ್ನು ಟೊಮೆಟೊ ಲಾರಿಯಲ್ಲಿ ಸಾಗಿಸುತ್ತಿದ್ದರು ಎಂದು ಮಾಹಿತಿ ನೀಡಿದರು.
ಬೆಂಗಳೂರು ದಕ್ಷಿಣ ವಿಭಾಗ ಪೊಲೀಸರು ಕೊನೆಗೂ ಈ ಗ್ಯಾಂಗ್ ಪತ್ತೆಹಚ್ಚಿದ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸರು 1 ಸ್ಕಾರ್ಪಿಯೋ, 1 ಆಟೋ, 25 ಬೈಕ್ ಮತ್ತು 1ಕೆಜಿ ಗಾಂಜಾ ಹಾಗೂ 1.5 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ. ಹಾಗೆಯೇ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಗ್ಯಾಂಗ್ ವಾಹನ ಕಳ್ಳತನ ಮಾಡುತ್ತಿರೋದನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಇದಲ್ಲದೇ ಪುಟ್ಟೇನಹಳ್ಳಿ ಪೊಲೀಸರು ನಟೋರಿಯಸ್ ಬೈಕ್ ಕಳ್ಳರಾದ ಜಯವರ್ಧನ ಹಾಗೂ ಕಲ್ಯಾಣ್ ಎಂಬುವರನ್ನು ಬಂಧಿಸಿದ್ದಾರೆ. ಇದರ ಜೊತೆ ಹಲವು ಪ್ರಕರಣಗಳು ಸೇರಿ ದಕ್ಷಿಣ ವಿಭಾಗದ ಪೊಲೀಸ್ ಠಾಣೆಗಳ ಕಾರ್ಯಾಚರಣೆಯಿಂದಾಗಿ 64 ಪ್ರಕರಣಗಳು ಪತ್ತೆಯಾಗಿವೆ. 61 ಲಕ್ಷ ರೂಪಾಯಿ ಬೆಲೆ ಬಾಳುವ ವಸ್ತುಗಳ ಜೊತೆ 22 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.