ಬೆಂಗಳೂರು:ನಾನು ಆರೋಗ್ಯ ಸಚಿವನಾಗಿದ್ದಾಗ ದೆಹಲಿಗೆ ಹೋದಾಗ ಅಲ್ಲಿನ ಮೊಹಲ್ಲಾ ಕ್ಲಿನಿಕ್, ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಆಶ್ಚರ್ಯಗೊಂಡೆ. ಅರವಿಂದ್ ಕೇಜ್ರಿವಾಲ್ ಅವರ ಕ್ರಾಂತಿಕಾರಕ ಬದಲಾವಣೆಗಳನ್ನು ನೋಡಿ ಅವರ ದೊಡ್ಡ ಅಭಿಮಾನಿಯಾದೆ ಎಂದು ಶಾಸಕ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.
ಶಾಂತಿನಗರದ ಬಸಪ್ಪ ರಸ್ತೆಯಲ್ಲಿ ಇರುವ ಆಮ್ ಆದ್ಮಿ ಕ್ಲಿನಿಕ್ ವೀಕ್ಷಣೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅರವಿಂದ್ ಕೇಜ್ರಿವಾಲ್ ಅವರಿಗೆ ದೆಹಲಿ ಜನತೆ ಒಂದೇ ಒಂದು ಬಾರಿ ಅವಕಾಶ ಕೊಟ್ಟರು. ಈ ಅವಕಾಶ ಬಳಸಿಕೊಂಡ ಅವರು ಜನಪರ ಸೇವೆ ಮಾಡಿದ್ದಾರೆ. ಕೇಜ್ರಿವಾಲ್ ಅವರು ಬದಲಾವಣೆ ತಂದಿರುವ ಆರೋಗ್ಯ, ಶಿಕ್ಷಣ, ಉಚಿತ ನೀರು, ವಿದ್ಯುತ್, ಅಗತ್ಯ ಮೂಲ ಸೌಕರ್ಯಗಳು ಎಲ್ಲಾ ರಾಜ್ಯಗಳಲ್ಲೂ ಆಗಬೇಕು ಎಂದರು.
ಆಮ್ ಆದ್ಮಿ ಪಕ್ಷ ಸೇರುತ್ತೀರಾ ಎನ್ನುವ ಪ್ರಶ್ನೆಗೆ "ನಾನೂ ಒಬ್ಬ ಆಮ್ ಆದ್ಮಿ, ಅಂದರೆ ಜನ ಸಾಮಾನ್ಯ. ಜನಸಾಮಾನ್ಯರಿಗೆ ಯಾರು ಒಳ್ಳೆಯದನ್ನು ಮಾಡುತ್ತಾರೋ ಅವರ ಜೊತೆ ನಾನು ಸದಾ ಇರುತ್ತೇನೆ." ಎಂದು ಮಾರ್ಮಿಕವಾಗಿ ಉತ್ತರಿಸಿದರು.