ಬೆಂಗಳೂರು :ನಮ್ಮ ಮೆಟ್ರೋ ಓಡಾಟದ ಅವಧಿಯನ್ನು ವಿಸ್ತರಣೆ ಮಾಡುವಂತೆ ಒತ್ತಾಯಿಸಿ ಮಾಜಿ ಸಚಿವ ಹಾಗೂ ಶಾಸಕ ಸುರೇಶ್‌ಕುಮಾರ್ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಸರ್ಕಾರವೂ ಲಾಕ್ಡೌನ್ ತೆರವು ಮಾಡಿದೆ.
ಆದರೆ, ನೈಟ್ ಕರ್ಫ್ಯೂ ಜಾರಿಯಲ್ಲಿರುವುದರಿಂದ ಮೆಟ್ರೋ ಓಡಾಟದ ಸಮಯವನ್ನು ಬದಲಾವಣೆ ಮಾಡಲಾಗಿತ್ತು. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಜನರ ಅಗತ್ಯತೆ ಅರ್ಥ ಮಾಡಿಕೊಂಡು ನಮ್ಮ ಮೆಟ್ರೋ ಸೇವಾ ವೇಳೆಯನ್ನು ರಾತ್ರಿ 10:00 ರವರೆಗೂ ವಿಸ್ತರಿಸಲು ಸಂಬಂಧಪಟ್ಟವರಿಗೆ ಸೂಚನೆ ನೀಡಬೇಕು. ಜೊತೆಗೆ ರಾತ್ರಿ ಕರ್ಫ್ಯೂವನ್ನು 10ರ ನಂತರ ವಿಧಿಸುವ ಬಗ್ಗೆ ಪಲಶೀಲನೆ ಮಾಡಬೇಕೆಂದು ಪತ್ರದಲ್ಲಿ ತಿಳಿಸಿದ್ದಾರೆ.
ಮೆಟ್ರೋ ದ್ವಾರಗಳು ಕ್ಲೋಸ್ :ಮೆಟ್ರೋ ರೈಲ್ವೆ ನಿಲ್ದಾಣಗಳಲ್ಲಿ ಲಾಕ್‌ಡೌನ್‌ಗೆ ಮುನ್ನ ಎರಡೂ ಕಡೆ ಪ್ರವೇಶ ದ್ವಾರಗಳು ಕಾರ್ಯ ನಿರ್ವಹಿಸುತ್ತಿದ್ದವು. ಇದರಿಂದ ರಸ್ತೆ ದಾಟುವ ಸಮಸ್ಯೆ ಎದುರಾಗುತ್ತಿರಲಿಲ್ಲ. ಇದೀಗ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಒಂದೇ ಕಡೆ ಪ್ರವೇಶ ದ್ವಾರ ತೆರೆಯಲಾಗಿದೆ. ಇದರಿಂದ ಹಿರಿಯ ನಾಗರಿಕರು ಮತ್ತು ಮಹಿಳೆಯರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ ಎಂದಿದ್ದಾರೆ.