ಬೆಂಗಳೂರು: ಲಾಕ್‌ಡೌನ್ ಅವಧಿಯಲ್ಲಿ ಲಸಿಕೆ ವಿತರಣೆಗೆ ಹೆಚ್ಚಿನ ಒತ್ತು ಕೊಡಬೇಕು ಎಂದು ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ಸರ್ಕಾರಕ್ಕೆ ಸಲಹೆ ಕೊಟ್ಟಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಲಾಕ್‌ಡೌನ್ ಮಾಡುವುದೆಂದರೆ ಕೆಲಸ ಮಾಡುವ ನೌಕರರು ಹಾಗೂ ದಿನಗೂಲಿ ಕಾರ್ಮಿಕರಿಗೆ ಮತ್ತು ಶಾಲೆಗೆ ಹೋಗುವ ಮಕ್ಕಳಿಗೆ ಬೇಸಿಗೆ ರಜೆ ಘೋಷಣೆ ಮಾಡಿದಂತಲ್ಲ. ಈಗಾಗಲೇ ಹತ್ತಾರು ಬಾರಿ ಹೇಳಲಾದಂತೆ ಲಾಕ್‌ಡೌನ್ ಎಂಬುದು ಸೋಂಕು ಹರಡದಂತೆ ಸೋಂಕಿನ ಸರಪಳಿಯನ್ನು ಕತ್ತರಿಸುವ ಒಂದು ಮಾರ್ಗ ಎಂದು ಹೇಳಿದ್ದಾರೆ.
ಲಾಕ್‌ಡೌನ್ ಮಾಡಿದ ವೇಳೆ ಸರ್ಕಾರ ಕನಿಷ್ಠ ಶೇ.80 ರಿಂದ 90 ಜನರಿಗೆ ಲಸಿಕೆ ನೀಡುವ ಕೆಲಸ ಮಾಡಬೇಕು. ಹೀಗೆ ಮಾಡಿದಾಗ ಮಾತ್ರವೇ ಸಾಮೂಹಿಕ ರೋಗನಿರೋಧಕ ಶಕ್ತಿ ಬೆಳೆದು ಸೋಂಕು ಹರಡುವ ಪ್ರಮಾಣವು ಗಣನೀಯವಾಗಿ ಕಡಿಮೆಗೊಂಡು ಲಾಕ್‌ಡೌನ್ ಮುಗಿದ ಬಳಿಕ ಜನಸಾಮಾನ್ಯರು ಮತ್ತೆ ವಿಶ್ವಾಸದಿಂದ ತಮ್ಮ ಕೆಲಸಗಳಿಗೆ ತೆರಳಿ ಬದುಕು ನಡೆಸಲು ಸಾಧ್ಯವಾಗುತ್ತದೆ. ಆದರೆ ಸರ್ಕಾರ ನೋಡಿದರೆ ತನ್ನ ಬಳಿ ಅಗತ್ಯ ಪ್ರಮಾಣದಲ್ಲಿ ಲಸಿಕೆಯಿಲ್ಲ ಎಂಬ ಸಂಗತಿಯನ್ನು ಹೇಳಿಕೊಳ್ಳುವ ಮೂಲಕ ಜನ ಸಾಮಾನ್ಯರ ಭಯವನ್ನು ಮತ್ತಷ್ಟು ಹೆಚ್ಚಿಸುವ ಕೆಲಸವನ್ನು ಮಾಡುತ್ತಿದೆ. ಲಸಿಕೆಯಿಲ್ಲದ ಲಾಕ್‌ಡೌನ್ ಮಾಡುವುದೆಂದರೆ ಕೊರೊನಾವನ್ನು ಮುಂದೆ ಹಾಕಿದಂತೆಯೇ ವಿನಃ ಸೋಂಕು ನಿಯಂತ್ರಣ ಮಾಡಿದಂತೆ ಅಲ್ಲ ಎಂದಿದ್ದಾರೆ.
ಸರ್ಕಾರದಿಂದ ಪ್ರಾಣ ರಕ್ಷಣೆ ಸಾಧ್ಯವಿಲ್ಲ:ಕೊರೊನಾ ಸಂಕಷ್ಟದ ಈ ವೇಳೆ ದಿನಕ್ಕೊಂದು ಹೇಳಿಕೆಯನ್ನು ನೀಡುವ ಸಚಿವ ಡಾ.ಸುಧಾಕರ್ ಹಾಗೂ ಏನು ಮಾಡುವುದೆಂದು ದಿಕ್ಕು ತೋಚದೆ ಕುಳಿತಿರುವ ರಾಜ್ಯ ಬಿಜೆಪಿ ಸರ್ಕಾರದಿಂದ ರಾಜ್ಯದ ಪ್ರಾಣ ರಕ್ಷಣೆ ಸಾಧ್ಯವಿಲ್ಲ. ಹಾಗಾಗಿ ನಿಮ್ಮ ಪ್ರಾಣ ಕಾಪಾಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲೆಯೇ ಹೆಚ್ಚಾಗಿದ್ದು, ಆದಷ್ಟು ಸ್ವಯಂ ಜಾಗೃತಿ ವಹಿಸಿ ಜನರಿಗೆ ತಿಳಿಸಿದ್ದಾರೆ.
ಗೊಂದಲಕ್ಕೆ ಕಾರಣ:ಅಗತ್ಯ ವಸ್ತುಗಳ ಖರೀದಿಗೆ ನಡೆದುಕೊಂಡೇ ಹೋಗಬೇಕೆಂಬ ನಿಯಮವನ್ನು ಜಿಲ್ಲಾಡಳಿತಗಳ ಮೂಲಕ ಬಿಜೆಪಿ ಸರ್ಕಾರ ಜನರಿಗೆ ಆದೇಶ ಹೊರಡಿಸಿದೆ. ಇದು ಮೂಲತಃ ಮನೆಯ ಅಥವಾ ಅಪಾರ್ಟ್ಮೆಂಟ್ಗಳ ಪಕ್ಕದಲ್ಲೇ ಶಾಪಿಂಗ್ ಮಾರ್ಟ್‌ಗಳನ್ನು ಹೊಂದಿರುವ ಕುಟುಂಬಗಳನ್ನು ಗಮನದಲ್ಲಿ ಇಟ್ಟುಕೊಂಡು ಮಾಡಿದಂತಹ ನಿಯಮಾವಳಿ. ನಡೆದುಕೊಂಡು ಬರಬೇಕೆಂದು ಹೇಳುತ್ತಿರುವ ಸರ್ಕಾರವು ಜನರಿಗೆ ಸರಿಯಾಗಿ ಅಗತ್ಯ ವಸ್ತುಗಳು ಲಭ್ಯವಾಗುವಂತೆ ವ್ಯವಸ್ಥೆಯನ್ನು ರೂಪಿಸದಿರುವುದು ಈ ಗೊಂದಲಗಳು ಏಳಲು ಕಾರಣ. ಇದರಿಂದ ಪಟ್ಟಣಗಳನ್ನು ಆಶ್ರಯಿಸಿದ ಹಳ್ಳಿಗಾಡಿನ ಜನರು ತೀವ್ರ ತೊಂದರೆ ಅನುಭವಿಸುತ್ತಾರೆ. ಹೀಗಾಗಿ, ಒಂಬತ್ತು ಗಂಟೆಯ ನಂತರ ಸರ್ಕಾರ ಯಥಾಸ್ಥಿತಿಯಲ್ಲಿ ತಮ್ಮ ಕಠಿಣ ನಿಯಮಾವಳಿಗಳನ್ನು ಜಾರಿಗೊಳಿಸುವ ಮೂಲಕ ಸೋಂಕು ತಡೆ ಕ್ರಮಗಳನ್ನು ಕೈಗೊಳ್ಳಲಿ ಮತ್ತು ಜನ ಸಾಮಾನ್ಯರೂ ಕೂಡಾ ಸರ್ಕಾರದ ಪ್ರಯತ್ನಗಳಿಗೆ ಬೆಂಬಲ ನೀಡಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ ಎಂದು ಮಹದೇವಪ್ಪ ಟ್ವೀಟ್ ಮಾಡಿದ್ದಾರೆ.
ಇದನ್ನೂಓದಿ :ವ್ಯಾಕ್ಸಿನ್ ಕೊರತೆ: ಸರ್ಕಾರಕ್ಕೆ ಕಾಂಗ್ರೆಸ್ ನಾಯಕರಿಂದ ತರಾಟೆ