ಕರ್ನಾಟಕ

karnataka

ETV Bharat / state

ಕೊರೊನಾ ನಿಯಂತ್ರಣಕ್ಕೆ ಸಿಎಂಗೆ ಮಾಜಿ ಸಚಿವ ಆರ್​ವಿಡಿ ಸುದೀರ್ಘ ಸಲಹೆ - ಸಿಎಂಗೆ ಪತ್ರ ಬರೆದ ದೇಶಪಾಂಡೆ

ಕೊರೊನಾ ನಿಯಂತ್ರಣಕ್ಕೆ ಬೇಕಾದ ಕೆಲವು ಸಲಹೆಗಳನ್ನ ನೀಡಿ ಮಾಜಿ ಸಚಿವ ಆರ್.ವಿ. ದೇಶಪಾಂಡೆ ಸಿಎಂಗೆ ಪತ್ರ ಬರೆದಿದ್ದಾರೆ.

Deshapande
ಆರ್.ವಿ. ದೇಶಪಾಂಡೆ

By

Published : Mar 30, 2020, 2:04 PM IST

ಬೆಂಗಳೂರು: ಮಾರಕ ಕೊರೊನಾ ವೈರಸ್​ ನಿಯಂತ್ರಣಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪಗೆ ಮಾಜಿ ಸಚಿವ ಆರ್.ವಿ. ದೇಶಪಾಂಡೆ ಕೆಲ ಸಲಹೆ ನೀಡಿದ್ದಾರೆ.

ಈ ಬಗ್ಗೆ ಸಿಎಂಗೆ ಪತ್ರ ಬರೆದಿರುವ ದೇಶಪಾಂಡೆ ಅದರಲ್ಲಿ, ಉತ್ತರಕನ್ನಡ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ನಿಯಂತ್ರಣ ಕ್ರಮಗಳ ಕುರಿತಂತೆ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆ ಕುರಿತು ನನಗೆ ನಿನ್ನೆ ಮಾಹಿತಿ ಬಂದಿದೆ. ಈ ಕರೋನಾ ಸಾಂಕ್ರಾಮಿಕ ರೋಗ ಹರಡದಂತೆ ಹಾಗೂ ಏನೇನು ಕ್ರಮ ಕೈಗೊಳ್ಳಬೇಕು ಎನ್ನುವುದರ ಕುರಿತು ನಾನು ಜಿಲ್ಲಾಡಳಿತ ಹಾಗೂ ನಮ್ಮ ತಾಲೂಕಿನ ಎಲ್ಲ ಅಧಿಕಾರಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇನೆ ಹಾಗೂ ಕಾಲಕಾಲಕ್ಕೆ ಅಗತ್ಯ ಸಲಹೆ ಹಾಗೂ ಸೂಚನೆಗಳನ್ನು ನೀಡುತ್ತಿದ್ದೇನೆ. ಈಗ ತಮ್ಮ ನೇತೃತ್ವದ ಸಭೆಗೆ ಹಲವು ಸಲಹೆಗಳನ್ನು ನೀಡುತ್ತಿದ್ದು, ಈ ವಿಷಯಗಳನ್ನು ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿನಂತಿಸುತ್ತೇನೆ ಎಂದಿದ್ದಾರೆ.

1. ಕೋವಿಡ್ 19 ರೋಗದ ಪತ್ತೆ ತಪಾಸಣಾ ಪ್ರಯೋಗಾಲಯದ ಸ್ಥಾಪನೆ ಕುರಿತಂತೆ ಈಗಾಗಲೇ ವೈದ್ಯಕೀಯ ಸಚಿವರಾದ ಡಾ.ಸುಧಾಕರ್ ಅವರನ್ನು ವಿನಂತಿಸಿದ್ದೆ ಅವರು ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ. ಈಗ ತಾವು ಮತ್ತೊಮ್ಮೆ ಈ ವಿಷಯದ ಕುರಿತು ಸೂಕ್ತ ಕ್ರಮ ಕೈಗೊಳ್ಳುವದು.

2. ಜಿಲ್ಲೆಯಿಂದ ಕೂಲಿ ಕಾರ್ಮಿಕರು ಬೇರೆ ಬೇರೆ ರಾಜ್ಯಗಳಿಗೆ ಹಾಗೂ ಬೇರೆಬೇರೆ ನಗರಗಳಿಗೆ ವಲಸೆ ಹೋಗಿದ್ದಾರೆ ಅವರನ್ನ ಪುನಹ ಜಿಲ್ಲೆಗೆ ಕರೆತರುವುದು ಅಥವಾ ಬೇರೆಬೇರೆ ನಗರಗಳಿಗೆ ಸಂಬಂಧಿಸಿದ ಜಿಲ್ಲಾ ಆಡಳಿತ ಜೊತೆಗೆ ಚರ್ಚಿಸಿ ಅವರಿಗೆ ಸೂಕ್ತ ವಸತಿ ಹಾಗೂ ಆಹಾರ ವ್ಯವಸ್ಥೆ ಮಾಡುವುದು.

3.ಜಿಲ್ಲೆಯಲ್ಲಿ ಕೆಲವು ಖಾಸಗಿ ವೈದ್ಯರು ಹಲವು ಕಡೆ ಚಿಕಿತ್ಸೆ ನೀಡುತ್ತಿದ್ದಾರೆ, ಕೆಲವು ಸಮಸ್ಯೆ ಆಗುತ್ತಿದೆ. ಖಾಸಗಿ ಕ್ಲಿನಿಕ್ ಗಳನ್ನು ವಶಕ್ಕೆ ಪಡೆದು ಅವರ ಸೇವೆಯನ್ನು ಬಳಸಿಕೊಳ್ಳುವದು. ಸರ್ಕಾರದಿಂದ ಇವರಿಗೂ ಸಾರ್ವಜನಿಕರಿಗೆ ವಿತರಿಸಲು ಮಾಸ್ಕ್ ಹಾಗೂ ಸ್ಯಾನಿಟೈಸರ್ ಒದಗಿಸುವುದು.

4. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರು, ಪ್ಯಾರಾಮೆಡಿಕಲ್ ಸಿಬ್ಬಂದಿ ಹಾಗೂ ಕೋವಿಡ್ 19 ನಿಯಂತ್ರಣ ಕಾರ್ಯದಲ್ಲಿ ತೊಡಗಿರುವ ಇತರೆ ಸರ್ಕಾರಿ ಸಿಬ್ಬಂದಿಗಳಿಗೆ ಮಾನ್ಯ ಪ್ರಧಾನಿಯವರು ಘೋಷಣೆ ಮಾಡಿರುವ 50 ಲಕ್ಷದ ವಿಮೆಯನ್ನು ಖಾಸಗಿ ವೈದ್ಯರಿಗೂ ಹಾಗೂ ವೈದ್ಯಕೀಯ ಸಂಬಂಧಿಗಳಿಗೂ ವಿಸ್ತರಿಸುವುದು.

5. ಜಿಲ್ಲಾಡಳಿತ ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆ ವಾರ್ಡುಗಳನ್ನು ತೆರೆಯಲು ಈಗಾಗಲೇ ಕ್ರಮ ಕೈಗೊಂಡಿದೆ.ಜೊತೆಗೆ ಜಿಲ್ಲೆಯಲ್ಲಿ ಸರ್ಕಾರಕ್ಕೆ ಹಾಗೂ ಸಂಬಂಧಿಸಿದ ಇಲಾಖೆಗಳಿಗೆ ಹಸ್ತಾಂತರಿಸದೇ ಇರುವ ಹಲವಾರು ಯಾತ್ರಿ ನಿವಾಸಗಳು ಹಾಗೂ ಹೋಟೆಲ್ ಕಟ್ಟಡಗಳು ಪೂರ್ಣಗೊಂಡಿದ್ದು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿಲ್ಲ ಕೂಡಲೇ ಅವುಗಳನ್ನು ಬಳಸಿಕೊಂಡು ಅವುಗಳಿಗೆ ಮಂಚ, ಬೆಡ್, ಔಷಧಗಳು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ತಾತ್ಕಾಲಿಕವಾಗಿ ಆಸ್ಪತ್ರೆಗಳಾಗಿ ಬಳಸಿಕೊಳ್ಳುವುದು.

6.ಕೆಲವು ಜನರು ತಮ್ಮ ಬೇರೆ ಬೇರೆ ಕಾಯಿಲೆಗಳ ಚಿಕಿತ್ಸೆಗಾಗಿ (ಉದಾಹರಣೆಗೆ:ಡಯಾಲಿಸಿಸ್, ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು ) ಬೇರೆ ಜಿಲ್ಲೆಗಳಿಗೆ ಹೋಗಬೇಕಾಗಿದೆ ಅಂಥವರಿಗೆ ಜಿಲ್ಲಾಡಳಿತದಿಂದ ಪಾಸ್ ನೀಡಿ ಅನುಕೂಲ ಮಾಡಿಕೊಡುವದು.

7.ಜೋಯಿಡಾ ಹಾಗೂ ಜಿಲ್ಲೆಯ ಹಲವು ತಾಲೂಕಿನಿಂದ ಗೋವಾ ಹಾಗೂ ಮಹಾರಾಷ್ಟ್ರಕ್ಕೆ ಅನೇಕ ಕಟ್ಟಡ ಕಾರ್ಮಿಕರು ದುಡಿಯಲು ಹೋಗಿದ್ದು, ಅವರು ಜಿಲ್ಲೆಗೆ ವಾಪಸ್ ಮರಳಲು ಆಗದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಅವರಿಗೆ ವಸತಿ ಹಾಗೂ ಆಹಾರ ಸೇರಿದಂತೆ ಸೂಕ್ತ ವ್ಯವಸ್ಥೆ ಮಾಡಲು ಮಾನ್ಯ ಸಚಿವರು ನಮ್ಮ ರಾಜ್ಯದ ಮುಖ್ಯ ಕಾರ್ಯದರ್ಶಿಗಳ ನೆರವಿನಿಂದ ಆಯಾ ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಜೊತೆಗೆ ಮಾತನಾಡಿ ಅಗತ್ಯ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳುವದು. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ರಾಜ್ಯ ಸರ್ಕಾರವೇ ಮದ್ಯಪ್ರವೇಶ ಮಾಡಿ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವದು. ಒಂದು ವೇಳೆ ಅವರು ಮರಳಿ ಜಿಲ್ಲೆಗೆ ಬರುವದಾದರೆ ಅವರ ಆರೋಗ್ಯದ ತಪಾಸಣೆ ನಡೆಸಿ ಜಿಲ್ಲೆಗೆ ಪ್ರವೇಶ ನೀಡುವದು. ಆಶಾ ಕಾರ್ಯಕರ್ತೆಯರ ನೆರವಿನೊಂದಿಗೆ ಪತ್ತೆ ಹಚ್ಚಿ ಅವರ ಆರೋಗ್ಯದ ಬಗ್ಗೆ ತಿಳಿದುಕೊಂಡು ಸೂಕ್ತ ಚಿಕಿತ್ಸೆ ನೀಡುವದು.

8. ವ್ಯವಸಾಯದ ಚಟುವಟಿಕೆಗಳಿಗೆ ರೈತರಿಗೆ ಸೂಕ್ತ ಗೊಬ್ಬರ ಹಾಗೂ ಕೀಟನಾಶಕ ಸಿಗುವಂತೆ ಮಾಡಲು ದಿನಸಿ ಅಂಗಡಿ ತರಹ ಅಂಗಡಿಯನ್ನು ತೆರೆಯಲು ಅನುಮತಿ ನೀಡುವದು. ಮತ್ತು ಖರೀದಿಸಲು ನಿರ್ದಿಷ್ಟ ದಿನಗಳು ಹಾಗೂ ಸಮಯ ನಿಗದಿಪಡಿಸುವುದು.

9.ಜಿಲ್ಲೆಯಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ಕೊರತೆ ಕಂಡುಬರುತ್ತಿದ್ದು ಸರ್ಕಾರ ಎಂ.ಆರ್.ಪಿ ದರದಲ್ಲಿ ಸಾರ್ವಜನಿಕರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ದೊರೆಯುವಂತೆ ಮಾಡಲು ಕ್ರಮ ಕೈಗೊಳ್ಳುವದು.

10. ಪ್ರಸ್ತುತ ಬಿಪಿಎಲ್ ಕಾರ್ಡನಿಂದ ರೇಷನ್ ತಗೆದುಕೊಳ್ಳಲು ಓಟಿಪಿ ಅಗತ್ಯವಾಗಿದೆ. ಈ ಸಂದರ್ಭದಲ್ಲಿ ಗ್ರಾಹಕರು ಓಟಿಪಿ ಒದಗಿಸಲು ಸಾಧ್ಯವಾಗುತ್ತಿಲ್ಲ, ಇದರಿಂದ ರೇಷನ್ ಕೂಡ ಸಿಗುತ್ತಿಲ್ಲ. ಈ ಓಟಿಪಿ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ತಗೆದುಹಾಕಿ ರೇಷನ್ ಅಂಗಡಿಯವರೆ ದಿನಸಿಗಳನ್ನು ನೇರವಾಗಿ ಗ್ರಾಹಕರ ಮನೆಗೆ ತಲುಪಿಸಲು ಅನುಕೂಲ ಮಾಡಿಕೊಡಬೇಕು.

11.ಈಗ ಬೇಸಿಗೆ ಬರುತ್ತಿರುವುದರಿಂದ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗುವ ಸಾಧ್ಯತೆಗಳಿವೆ. ಜಿಲ್ಲಾಡಳಿತ ಕುಡಿಯುವ ನೀರಿನ ಅಭಾವ ಆಗದಂತೆ ನಿರಂತರವಾಗಿ ನೀರು ಪೂರೈಸಲು ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಳ್ಳುವುದು.

12. ಈ ಬೇಸಿಗೆಯಲ್ಲಿ ಜಾನುವಾರಗಳಿಗೆ ಮೇವು, ಮಾತ್ರೆಗಳು, ಔಷಧಿಗಳ ಕೊರತೆ ಉಂಟಾಗದಂತೆ ಸೂಕ್ತ ಹಾಗೂ ಅಗತ್ಯ ದಾಸ್ತಾನು ಇರುವಂತೆ ನೋಡಿಕೊಳ್ಳುವದಕ್ಕೆ ಜಿಲ್ಲಾಡಳಿತಕ್ಕೆ ಸೂಚಿಸುವದು.

13.ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಅಗತ್ಯ ಚರಂಡಿಗಳ ಸ್ವಚ್ಛತೆ ಕಾಪಾಡಿಕೊಳ್ಳುವದು ಈ ಮೂಲಕ ಸಾಂಕ್ರಾಮಿಕ ರೋಗಗಳು ಹರಡದಂತೆ ನೈರ್ಮಲ್ಯ ಕಾಪಾಡುವುದು.

14. ಬೆಳಗಾವಿ ಹಾಗೂ ಹುಬ್ಬಳ್ಳಿಯಿಂದ ಹಾಗೂ ಜಿಲ್ಲೆಯ ವಿವಿಧ ಗ್ರಾಮಾಂತರ ಪ್ರದೇಶಗಳಿಂದ ದಿನನಿತ್ಯದ ತರಕಾರಿ ಹಾಗೂ ದಿನಸಿಗಳು ಪೂರೈಕೆ ಆಗುತ್ತಿದೆ. ಇದನ್ನು ಪುರೈಸುವ ಸಾರಿಗೆ ವಾಹನಗಳಿಗೆ ಅಗತ್ಯ ಅನುಮತಿ ನೀಡುವದು ಹಾಗೂ ಇದು ಸಮರ್ಪಕ ಹಾಗೂ ನಿರಂತರವಾಗಿ ಪೂರೈಕೆಯಾಗುವಂತೆ ನೋಡಿಕೊಳ್ಳುವಂತೆ ಸೂಚನೆ ನೀಡುವುದು.

15. ಬೇರೆ ರಾಜ್ಯದಿಂದ ಹಲವು ಕೂಲಿ ಕಾರ್ಮಿಕರು ಕಟ್ಟಡ ನಿರ್ಮಾಣ ಕೆಲಸಕ್ಕೆ ವಲಸೆ ಬಂದಿದ್ದಾರೆ. ಅದರಲ್ಲೂ ಜೋಯಿಡಾದ ಡಿಗ್ಗಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಬಂದ ಕಾರ್ಮಿಕರಿಗೆ ಗುತ್ತಿಗೆದಾರರು ಸೂಕ್ತ ಆರೋಗ್ಯ ಚಿಕಿತ್ಸೆ ಹಾಗೂ ಔಷಧೋಪಚಾರ ನೀಡುತ್ತಿಲ್ಲ. ಅಂತವರನ್ನು ಗುರಿತಿಸಿ ಸೂಕ್ತ ಚಿಕಿತ್ಸೆ ನೀಡುವುದು.

16. ಜಿಲ್ಲೆಯ ಕೇಸಲ್ ರಾಕ್ ಹಾಗೂ ಡಿಗ್ಗಿ ಗ್ರಾಮಗಳು ಕಾಡಿನ ಮದ್ಯದಲ್ಲಿದ್ದು ಇಲ್ಲಿ ಸರ್ಕಾರಿ ಆಸ್ಪತ್ರೆಯನ್ನು ಆರೋಗ್ಯ ಬಂಧು ಯೋಜನೆಯಡಿ ಖಾಸಗಿ ಎನ್​ಜಿಓ ಸಂಸ್ಥೆ ನಡೆಸುತ್ತಿದ್ದು ಅವರ ಗುತ್ತಿಗೆ ಅವಧಿ 31-03-2020ಕ್ಕೆ ಮುಗಿಯಲಿದೆ. ಅಲ್ಲಿಯ ಜನರಿಗೆ ಇದೊಂದೇ ಆಸ್ಪತ್ರೆಯಾಗಿದ್ದು ಕೂಡಲೇ ಆ ಆಸ್ಪತ್ರೆಗೆ ಅಗತ್ಯ ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಯನ್ನು ನೇಮಕ ಮಾಡಿ ಚಿಕಿತ್ಸೆ ದೊರೆಯುವಂತೆ ಮಾಡುವುದು.

17.ಮುಖ್ಯವಾಗಿ ಭಟ್ಕಳದಲ್ಲಿ ದಿನಸಿ ಪೂರೈಕೆ ಹಾಗೂ ಹೋಂ ಕ್ವಾರೆಂಟೆನ್ ನಲ್ಲಿರುವವರಿಗೆ ಉತ್ತಮ ಆಹಾರ ಪೂರೈಸಲು ನಿರ್ದಿಷ್ಟ ಕ್ರಮಗಳ ಮೂಲಕ ತಲುಪಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚಿಸುವುದು.

18. ಶಿರಸಿಯ ಟಿ ಎಸ್ ಎಸ್ ಸಂಸ್ಥೆಯವರಿಗೆ ಈ ಭಾಗದ ಸಹಕಾರಿ ಸಂಘಗಳೊಡನೆ ಉತ್ತಮ ಬಾಂಧವ್ಯ ಹೊಂದಿದ್ದೇ ಆದ್ರೆ ಸರ್ಕಾರ ಗ್ರಾಮ ಪಂಚಾಯಿತಿ ಮೂಲಕ ದಿನಸಿಗಳನ್ನು ಹಾಗೂ ತರಕಾರಿಗಳನ್ನು ಪೂರೈಕೆ ಮಾಡಲು ಸೂಚಿಸಿರುತ್ತದೆ. ಈಗಾಗ್ಲೇ ಗ್ರಾಮ ಪಂಚಾಯಿತಿಗಳಿಗೆ ಸಾಕಷ್ಟು ಕೆಲಸವಿದ್ದು ಇದನ್ನು ನಿರ್ವಹಣೆ ಮಾಡಲು ಕಷ್ಟ.ಹೀಗಾಗಿ ಟಿಎಸ್​ಎಸ್​ ಸಂಸ್ಥೆಯ ಮೂಲಕ ನಿರ್ವಹಣೆ ಮಾಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚಿಸುವುದು.

ಕೊನೆಯದಾಗಿ ಈಗಾಗಲೇ ಜಿಲ್ಲಾಡಳಿತ, ವೈದ್ಯಕೀಯ ಸೇವೆ ನೀಡುವವರು ಹಾಗು ಇತರೆ ಅಗತ್ಯ ಸೇವೆ ನೀಡುವವರು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು ಎಲ್ಲರಿಗೂ ಅಭಿನಂದನೆಗಳು. ಎಲ್ಲರೂ ಒಗ್ಗಟ್ಟಾಗಿ ಕೋವಿಡ್ ಮಹಾಮಾರಿಯ ವಿರುದ್ಧ ಹೋರಾಡೋಣ, ಆರೋಗ್ಯವಂತ ದೇಶವನ್ನು ಕಟ್ಟೋಣ ಎಂದು ಪತ್ರದಲ್ಲಿ ಬರೆದಿದ್ದಾರೆ.

ABOUT THE AUTHOR

...view details