ಕರ್ನಾಟಕ

karnataka

ETV Bharat / state

ಕಾಂಗ್ರೆಸ್​​ ದಲಿತರಿಗೆ ಸಿಎಂ ಆಗುವ ಅವಕಾಶ ಕೊಡುತ್ತೆ: ಸಿದ್ದರಾಮಯ್ಯ ಭೇಟಿ ಬಳಿಕ ಪರಮೇಶ್ವರ್​ ಆಶಾಭಾವ

ಸಿಎಂ ಕನಸು ಕಾಣುವ ದಲಿತರು ಹುಚ್ಚರು ಎಂಬ‌ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿಕೆಗೆ ತಿರುಗೇಟು ಕೊಟ್ಟ ಪರಮೇಶ್ವರ್​, ಇದರಿಂದ ಬಿಜೆಪಿಯವರು ದಲಿತರನ್ನು ಸಿಎಂ ಮಾಡುವುದಿಲ್ಲ ಎಂಬುವುದು ಸ್ಪಷ್ಟವಾಗಿದೆ ಎಂದು ಕುಟುಕಿದರು.

Parameshwar meet ex CM siddaramaiah
ಸಿದ್ದರಾಮಯ್ಯ ಭೇಟಿ ಮಾಡಿದ ಜಿ ಪರಮೇಶ್ವರ್​

By

Published : May 29, 2022, 2:04 PM IST

ಬೆಂಗಳೂರು: ಕಾಂಗ್ರೆಸ್ ಪಕ್ಷದ ಚಟುವಟಿಕೆಯಿಂದ ದೂರವಿದ್ದು ಕ್ಷೇತ್ರಕ್ಕೆ ಸೀಮಿತವಾಗಿರುವ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿಯಾಗಿ ಚರ್ಚಿಸಿದರು. ನಗರದ ಶಿವಾನಂದ ವೃತ್ತ ಸಮೀಪವಿರುವ ಸಿದ್ದರಾಮಯ್ಯನವರ ಸರ್ಕಾರಿ ನಿವಾಸಕ್ಕೆ ಭೇಟಿ ಕೊಟ್ಟು ಸುದೀರ್ಘ ಸಮಾಲೋಚನೆ ನಡೆಸಿದರು.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಕ್ಷದ ಕಾರ್ಯಕ್ರಮಗಳಿಂದ ದೂರು ಉಳಿದಿಲ್ಲ. ನನಗೆ ಪಕ್ಷದ ಮೇಲಾಗಲಿ ನಾಯಕರ ಮೇಲಾಗಲಿ ಸಿಟ್ಟಿಲ್ಲ. ವೈಯಕ್ತಿಕ ಕಾರಣಗಳಿಂದ ಎರಡ್ಮೂರು ಕಾರ್ಯಗಳಿಗೆ ಹೋಗಿಲ್ಲ ಅಷ್ಟೇ. ಅದನ್ನು ಬಿಟ್ಟು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೊನ್ನೆ ನಡೆದ ಸ್ಥಳೀಯ ಸಂಸ್ಥೆಗಳಿಂದ ನಡೆದ ಎಂಎಲ್​ಸಿ ಚುನಾವಣೆಯಲ್ಲಿ ಜಿಲ್ಲೆಯನ್ನು ಸುತ್ತಾಡಿ ಅಭ್ಯರ್ಥಿ ಗೆಲ್ಲಿಸಿದ್ದೇವೆ ಎಂದರು.

ಸಿದ್ದರಾಮಯ್ಯ-ನನ್ನ ಸಂಬಂಧ ಹಳೇದು:ರಾಜ್ಯಮಟ್ಟದ ಕಾರ್ಯಕ್ರಮ ಇದ್ದಾಗ ಬರುತ್ತೇವೆ‌. ಕಾರ್ಯಕ್ರಮ ಇಲ್ಲದೆ ಇದ್ದಾಗ ಕ್ಷೇತ್ರ, ಜಿಲ್ಲೆಯಲ್ಲಿ ಇರುತ್ತೇನೆ. ಅದನ್ನು ಬಿಟ್ಟರೆ ಏನಿಲ್ಲ. ರಾಜಣ್ಣನವರ ಮೇಲೆ ಕೋಪ‌ ಮಾಡಿಕೊಳ್ಳೋಕೆ ಏನಿದೆ?. ಸಿದ್ದರಾಮಯ್ಯ ಭೇಟಿಯಲ್ಲೂ ವಿಶೇಷತೆ ಏನೂ ಇಲ್ಲ. ಪಕ್ಷ ವಿಚಾರಗಳು, ನನ್ನ ಮತ್ತು ಅವರ ಸಂಬಂಧ ಹಳೇದು. ಇತ್ತೀಚಿಗೆ ನಡೆದ ಚಟುವಟಿಕೆಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ರಾಜ್ಯಸಭೆ ಚುನಾವಣೆ ಬಗ್ಗೆ ಹೈಕಮಾಂಡ್ ಬಿಟ್ಟಿದ್ದೇವೆ. ಕಾಂಗ್ರೆಸ್ ಅಧ್ಯಕ್ಷರಿಗೆ ಜವಾಬ್ದಾರಿ ಕೊಡುವುದು ನಮ್ಮ ಸಂಪ್ರದಾಯ. ಹೆಚ್ಚುವರಿ ಅಭ್ಯರ್ಥಿ ಹಾಕುವ ಬಗ್ಗೆ ವಿಪಕ್ಷ ನಾಯಕರು ಹಾಗೂ ಪಕ್ಷದ ಅಧ್ಯಕ್ಷರ ತೀರ್ಮಾನ ಮಾಡುತ್ತಾರೆ ಎಂದು ಪರಮೇಶ್ವರ್ ಅಭಿಪ್ರಾಯಪಟ್ಟರು.

ದಲಿತ ಸಿಎಂಗೆ ಅವಕಾಶ ಕೊಡ್ತಾರೆ:ಇದೇ ವೇಳೆ ದಲಿತ ಸಿಎಂ ಆಯ್ಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ್​, ಬಿಜೆಪಿಯಲ್ಲಿ ದಲಿತರನ್ನು ಸಿಎಂ ಮಾಡಲ್ಲ ಎಂದು ಸ್ಪಷ್ಟವಾಗಿ ಹೇಳಿದಂಗೆ ಆಗಿದೆ‌. ನಮ್ಮ ಪಕ್ಷದ ವಿದ್ಯಮಾನಗಳ ಬಗ್ಗೆ ಅವರಿಗೆ ಗೊತ್ತಿಲ್ಲ. ಅವರಿಗೆ ಗೊತ್ತಿರುವುದು ಬಿಜೆಪಿ ಬಗ್ಗೆ ಮಾತ್ರ. ಕಾಂಗ್ರೆಸ್ ಪಕ್ಷದಲ್ಲಿ ದಲಿತ ಸಿಎಂಗೆ ಅವಕಾಶ ಕೊಡುತ್ತಾರೆ ಎಂಬುದು ಅನಿಸಿಕೆ ನನ್ನದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿಎಂ ಕನಸು ಕಾಣುವ ದಲಿತರು ಹುಚ್ಚರು ಎಂಬ‌ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿಕೆಗೆ ತಿರುಗೇಟು ಕೊಟ್ಟ ಅವರು, ಇದರಿಂದ ಬಿಜೆಪಿಯವರು ದಲಿತರನ್ನು ಸಿಎಂ ಮಾಡುವುದಿಲ್ಲ ಎಂಬುವುದು ಸ್ಪಷ್ಟವಾಗಿದೆ. ನನ್ನ ಹೆಸರು ಮತ್ತು ಮಲ್ಲಿಕಾರ್ಜುನ ಖರ್ಗೆ ಹೆಸರನ್ನು ನಾರಾಯಣಸ್ವಾಮಿ ಹೇಳಿದ್ದಾರೆ. ನಮ್ಮ ಕಾಂಗ್ರೆಸ್​​ ಪಕ್ಷದ ಬಗ್ಗೆ ಅವರಿಗೇನು ಗೊತ್ತು. ನಮ್ಮ ಪಕ್ಷದಲ್ಲಿ ಎಲ್ಲರಿಗೂ ಅವಕಾಶವಿದೆ ಎಂದು ಹೇಳಿದರು.

ಹೆಡಗೆವಾರ್ ಹೋರಾಟ ಯಾವತ್ತೂ ನೋಡಿಲ್ಲ:ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರ ಮತ್ತು ಆರ್ಯ, ದ್ರಾವಿಡ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಯಾವುದೇ ವಿಚಾರಗಳನ್ನು ಲಘುವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ನಮ್ಮ ಇತಿಹಾಸ, ಸ್ವಾತಂತ್ರ್ಯ ಹೋರಾಟಗಾರರು ಯಾರು ಎಂದು ಪ್ರಪಂಚಕ್ಕೆ ಗೊತ್ತು. ಇತಿಹಾಸ ಬದಲಾಯಿಸುವ ಅವಶ್ಯಕತೆ ಇಲ್ಲ. ಇತಿಹಾಸ ತಿರುಚುವಂತದ್ದು ನಡೆಯುತ್ತಿದೆ. ಹೆಡಗೆವಾರ್ ಸ್ವಾತಂತ್ರ್ಯದಲ್ಲಿ ಹೋರಾಟ ಮಾಡಿದ್ದನ್ನು ಇತಿಹಾಸದಲ್ಲಿ ನಾವು ಯಾವತ್ತೂ ನೋಡಿಲ್ಲ, ಓದಿಲ್ಲ ಎಂದು ಕುಟುಕಿದರು.

ಇದೇ ವೇಳೆ ಹಿರಿಯ ಮುಖಂಡ ಕೆ.ಬಿ.ಕೋಳಿವಾಡ ಕೂಡ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿದರು. ಈ ವೇಳೆ ಮಾತನಾಡಿದ ಅವರು, ರಾಜ್ಯಸಭೆ ಒಂದು ಸೀಟು ಕಾಂಗ್ರೆಸ್​ಗೆ ಬಂದೇ ಬರುತ್ತೆ. ಹೆಚ್ಚುವರಿ ಸೀಟಿನ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ರಾಜ್ಯಸಭೆ ರಾಜ್ಯದವರಿಗೆ ನೀಡಬೇಕು ಎಂಬುದು ವಿ.ಆರ್.ಸುದರ್ಶನ ವೈಯಕ್ತಿಕ ಅಭಿಪ್ರಾಯ. ರಾಜ್ಯಸಭೆ ಕೇವಲ ರಾಜ್ಯಕ್ಕೆ ಸಂಬಂಧಿಸಿದ್ದಲ್ಲ. ಇಡೀ ದೇಶಕ್ಕೆ ಸಂಬಂಧಿಸಿದ್ದು. ಯಾರು ಯೋಗ್ಯ ಎಂಬುದನ್ನು ಪಕ್ಷದ ಹಿತದೃಷ್ಟಿಯಿಂದ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.

ಇದನ್ನೂ ಓದಿ:ನಕಲಿ ಕಾಂಗ್ರೆಸ್​ನ ನಕಲಿ ನಾಯಕ ಸಿದ್ದರಾಮಯ್ಯ: ಪ್ರಲ್ಹಾದ್ ಜೋಶಿ

ABOUT THE AUTHOR

...view details