ಬೆಂಗಳೂರು:ಚುನಾವಣಾ ಕಣ ರಂಗೇರುತ್ತಿರುವುದರ ಜೊತೆಗೆ ರಾಜಕೀಯ ಮುಖಂಡರ ಪರಸ್ಪರ ವಾಗ್ದಾಳಿಯೂ ಮುಂದುವರಿದಿದೆ. ಚುನಾವಣಾ ಪ್ರಚಾರದ ವೇಳೆ ಮಹಾಲಕ್ಷ್ಮಿ ಲೇಔಟ್ ನಲ್ಲಿ ಕೇಂದ್ರ ಸಚಿವ ಡಿ ವಿ ಸದಾನಂದಗೌಡ ಅವರು ಈವರೆಗೆ ಹಾವು ಮುಂಗುಸಿಯಂತೆ ಇದ್ದ ಮಾಜಿ ಸಿಎಂಗಳಾದ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಈಗ ಪ್ಲೇಟ್ ತಿರುಗಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದರು. ಇದಕ್ಕೆ ಟ್ವಿಟ್ಟರ್ ಮೂಲಕವೇ ತಿರುಗೇಟು ನೀಡಿದ್ದಾರೆ ಸಿದ್ದರಾಮಯ್ಯ.
ಡಿವಿಎಸ್ ವಿರುದ್ಧ ಕೆರಳಿದ ಟಗರು... ಸರಣಿ ಟ್ವೀಟ್ ಮೂಲಕ ಸಿದ್ದು ತಿರುಗೇಟು - ಸಿಎಂ ಸಿದ್ದರಾಮಯ್ಯ ಸರಣಿ ಟ್ವೀಟ್
ಚುನಾವಣಾ ಪ್ರಚಾರದ ವೇಳೆ ಮಹಾಲಕ್ಷ್ಮಿ ಲೇಔಟ್ ನಲ್ಲಿ ಕೇಂದ್ರ ಸಚಿವ ಡಿ ವಿ ಸದಾನಂದಗೌಡ ನೀಡಿದ್ದ ಹೇಳಿಕೆಗಳಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರಣಿ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
"ನನ್ನ ಮಾನಸಿಕ ಸ್ಥಿತಿ ಬಗ್ಗೆ ಬಡಬಡಿಸುತ್ತಿರುವ @DVSadanandGowda ಬಗ್ಗೆ ಅನುಕಂಪ ಇದೆ. ಮೊದಲು ಮುಖ್ಯಮಂತ್ರಿ ಸ್ಥಾನದಿಂದ ನಂತರ ರೈಲ್ವೆ, ಕಾನೂನು, ಅಂಕಿ ಅಂಶ ಹೀಗೆ ಎಲ್ಲ ಕಡೆಗಳಲ್ಲಿಯೂ ತಿರಸ್ಕೃತಗೊಂಡ ಗೌಡರು ಈಗ ಪಕ್ಷದಲ್ಲಿ 'ಗೊಬ್ಬರ'ವಾಗಿ ಹೋಗಿದ್ದಾರೆ. ಈ ಹತಾಶೆ ಅವರಿಂದ ಇಂತಹ ಹೇಳಿಕೆಗಳನ್ನು ಹೊರಡಿಸುತ್ತಿದೆ" ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಡಿವಿಎಸ್ ಅವರನ್ನು ರಾಜ್ಯ ಬಿಜೆಪಿಯಲ್ಲಿ ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹಾಗಾಗಿ ತಮ್ಮ ಜೋಕುಗಳಿಗೆ ತಾವೇ ನಕ್ಕು ರಾಜ್ಯದ ಜನರಿಗೆ ಮನರಂಜನೆ ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಅಷ್ಟೇ ಅಲ್ಲದೆ, ಉಪಚುನಾವಣಾ ಕ್ಷೇತ್ರಗಳಲ್ಲಿ ಎಲ್ಲಾ ಮುಖಂಡರು, ನನ್ನ ವಿರುದ್ಧ ಮುಗಿಬೀಳುವುದು ನೋಡಿದರೆ, ಅತಿಹಚ್ಚು ಟೀಕಿಸಿದವರಿಗೆ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಬಹುಮಾನ ನೀಡುವ ಭರವಸೆ ನೀಡಿರಬೇಕು ಎಂದು ಕಾಲೆಳೆದಿದ್ದಾರೆ.