ಬೆಂಗಳೂರು:ರಾಜ್ಯದಲ್ಲಿನ ಭಾರತೀಯ ಜನತಾ ಪಕ್ಷದಲ್ಲಿ ಪ್ರಜಾಪ್ರಭುತ್ವವೇ ಇಲ್ಲ. ಶಾಸಕರಿಂದ ಆಯ್ಕೆಯಾಗಿದ್ದ ಯಡಿಯೂರಪ್ಪರನ್ನು ಇದ್ದಕ್ಕಿದ್ದಂತೆ ತೆಗೆದುಹಾಕಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಟ್ವೀಟ್ ಮಾಡುವ ಮೂಲಕ ಆಡಳಿತಾರೂಢ ಬಿಜೆಪಿ ಪಕ್ಷವನ್ನು ತರಾಟೆ ತೆಗೆದುಕೊಂಡಿರುವ ಸಿದ್ದರಾಮಯ್ಯ, ಯಡಿಯೂರಪ್ಪರನ್ನು ಸಿಎಂ ಸ್ಥಾನದಿಂದ ಕಿತ್ತು ಹಾಕಿದ್ದಾರೆ. ಮುಂದಿನ ಮುಖ್ಯಮಂತ್ರಿ ಆಯ್ಕೆಯ ಹಕ್ಕು ಕೂಡ ಶಾಸಕರಿಗಿಲ್ಲ. ಬಿಜೆಪಿ ಶಾಸಕರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲಿದೆ? ದೆಹಲಿಯಲ್ಲಿ ಕುಳಿತಿರುವ ಹೈಕಮಾಂಡ್ ಮಾತಿಗೆ ಎಲ್ಲರೂ ಸುಮ್ಮನೆ ತಲೆಯಾಡಿಸಬೇಕು ಎಂದು ಲೇವಡಿ ಮಾಡಿದ್ದಾರೆ.
ಇನ್ನೊಂದೆಡೆ, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ಟ್ವೀಟ್ ಮಾಡಿ ಬಿಜೆಪಿ ಪಕ್ಷದ ನಾಯಕರ ವಿರುದ್ಧ ಗುಡುಗಿದ್ದಾರೆ. ಬಿಜೆಪಿ ಹೈಕಮಾಂಡ್ ಪಾಲಿಗೆ ರಾಜ್ಯದ ಜನರೇನು ಪ್ರಯೋಗ ಪಶುಗಳೇ ಎಂದು ಪ್ರಶ್ನಿಸಿರುವ ಅವರು, ಈ ಹಿಂದೆ ನೆರೆ ಬಂದಾಗ ಸಂಪುಟ ರಚನೆಗೆ ಅವಕಾಶ ಮಾಡಿ ಕೊಡದೇ ಪ್ರವಾಹದಲ್ಲಿ ಜನ ನರಳುವಂತೆ ಮಾಡಿತ್ತು. ಈಗ ಮತ್ತೆ ನೆರೆ ಬಂದಿದೆ. ಈ ಸಂದರ್ಭದಲ್ಲಿಯೂ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡಿ ಸರ್ಕಾರವನ್ನೇ ಇಲ್ಲದಂತೆ ಮಾಡಿದೆ. ಜನರ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿರುವ ರಾಜ್ಯ ಸರ್ಕಾರಕ್ಕೆ ರಾಜ್ಯದ ಜನರೇ ಬುದ್ಧಿ ಕಲಿಸಬೇಕು ಎಂದಿದ್ದಾರೆ.
ಸದ್ಯ ಬೆಳಗಾವಿ ಜಿಲ್ಲೆಯ ನೆರೆಪೀಡಿತ ಪ್ರದೇಶಕ್ಕೆ ಭೇಟಿ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ವಿವಿಧೆಡೆ ತೆರಳಿ ಸಂತ್ರಸ್ತರ ಅಳಲು ಆಲಿಸುತ್ತಿದ್ದಾರೆ. ಜಿಲ್ಲೆ ಸೇರಿದಂತೆ ಭಾರಿ ಪ್ರಮಾಣದಲ್ಲಿ ಪ್ರವಾಹ ಬಂದಿದ್ದು ಅಧಿವೇಶನದಲ್ಲಿ ನೆರೆ ಪರಿಹಾರ ಬಗ್ಗೆ ಚರ್ಚಿಸಲು ಒತ್ತಾಯ ಮಾಡುವೆ. ಪರಿಹಾರ ಕೊಡಿಸುವಂತೆ ಸರ್ಕಾರಕ್ಕೆ ಆಗ್ರಹಿಸುತ್ತೇನೆ ಎಂದು ಸಾಂತ್ವನ ಹೇಳಿದ್ದಾರೆ.