ಬೆಂಗಳೂರು :ಪ್ರಧಾನಿ ಮೋದಿ ಅವರ ಪ್ರಚಾರ ವೈಭವದ ಲಸಿಕೋತ್ಸವ ಮುಗಿದ ನಂತರದ ದಿನಗಳಲ್ಲಿ ಲಸಿಕೆ ಪಡೆದವರ ಸಂಖ್ಯೆ ಕುಸಿಯುತ್ತಾ ಈಗ ಅರ್ಧಕ್ಕಿಳಿದಿದೆ. ಹಲವು ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಲ್ಲಿ ಲಸಿಕೆ ಪೂರೈಕೆ ಇಲ್ಲದೆ ಹಾಹಾಕಾರ ಎದ್ದಿದೆ ಎಂದು ಲಿಸಿಕಾಕರಣದ ಪ್ರಗತಿ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇದನ್ನೂ ಓದಿ: 'ನಮ್ಮ ಪಕ್ಷದಲ್ಲಿನ ಬೆಳವಣಿಗೆ ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿದಂತೆ': ಎಸ್.ಆರ್. ಪಾಟೀಲ್
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸಿಎಂ ಅವರೇ ನಿಮ್ಮ ಕುರ್ಚಿ ರಕ್ಷಣೆಯ ಕಸರತ್ತು ಮುಗಿದಿದ್ದರೆ ಸ್ವಲ್ಪ ಈ ಕಡೆ ಗಮನಹರಿಸಿ. ಜೂನ್ 21ರಂದು ರಾಜ್ಯದಲ್ಲಿ ನೀಡಿರುವ ಕೊರೊನಾ ಲಸಿಕೆಯ ಸಂಖ್ಯೆ-5,78,841. ಈ ಸಂಖ್ಯೆ ಕಡಿಮೆಯಾಗುತ್ತಾ ಬಂದು ಜೂನ್ 24ರಂದು 2,89,581ಕ್ಕೆ ಇಳಿದಿದೆ. ಜಿಲ್ಲೆಗಳಿಂದ ಲಭ್ಯವಾಗುತ್ತಿರುವ ಮಾಹಿತಿ ಪ್ರಕಾರ ಕೆಲವು ತಾಲೂಕು ಮತ್ತು ಹೋಬಳಿ ಕೇಂದ್ರಗಳಿಗೆ ಕಳೆದೆರಡು ದಿನಗಳಿಂದ ಲಸಿಕೆ ಪೂರೈಕೆಯಾಗಿಲ್ಲ ಎಂದು ಆರೋಪಿಸಿದ್ದಾರೆ.
ಸದ್ಯ ಕೊರೊನಾಗೆ ಲಸಿಕೆಯೇ ಸಂಜೀವಿನಿ. ಲಸಿಕೆ ನೀಡಿಕೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ ಸಿದ್ದರಾಯ್ಯ, ಕೇಂದ್ರ ಸರ್ಕಾರವೇ ಜವಾಬ್ದಾರಿ ವಹಿಸಿಕೊಂಡಿತ್ತು. ಈಗ ಅದು ಕೂಡ ವಿಫಲವಾಗಿದೆ. ಆದರೆ, ಪ್ರಧಾನಿ ಅವರ ಲಸಿಕೋತ್ಸವದ ಪ್ರಚಾರ ವೈಭವ ಮಾತ್ರ ನಿಂತಿಲ್ಲ. ಅವರನ್ನು ಪ್ರಶ್ನಿಸುವ ಧೈರ್ಯ ರಾಜ್ಯದ ಬಿಜೆಪಿ ಸರ್ಕಾರಕ್ಕೂ ಇಲ್ಲ.
ಕಾರ್ಯಕ್ರಮಗಳ ಘೋಷಣೆ, ಜನತೆಗೆ ಬೋಧನೆಗಾಗಿ ಮಾತ್ರ ಟಿವಿ ಪರದೆ ಮೇಲೆ ಕಾಣಿಸಿಕೊಳ್ಳುವ ಪ್ರಧಾನಿ ಅವರು ತಕ್ಷಣ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿ, ಲಸಿಕೆ ನೀಡಿಕೆಯ ಕಾರ್ಯಕ್ರಮದ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ತುರ್ತು ಪರಿಸ್ಥಿತಿ ಕರಾಳ ದಿನ, ಕಾಂಗ್ರೆಸ್ನಲ್ಲಿ ಇಂದು ಆಂತರಿಕ ಪ್ರಜಾಪ್ರಭುತ್ವ ಇಲ್ಲ.. ಮಾಜಿ ಸಚಿವ ಸಿ ಟಿ ರವಿ
ಸಿಎಂ ಅವರು ತಕ್ಷಣ ಜಿಲ್ಲಾಧಿಕಾರಿಗಳ ಸಭೆ ಕರೆದು ಲಸಿಕೆ ನೀಡಿಕೆಯಲ್ಲಿನ ಸಮಸ್ಯೆ ಬಗ್ಗೆ ಚರ್ಚಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರನ್ನು ಜಿಲ್ಲೆಗಳಿಗೆ ಕಳಿಸಿ ಅಲ್ಲಿಂದ ಮಾಹಿತಿಯನ್ನು ಪಡೆದುಕೊಳ್ಳಬೇಕು. ಲಸಿಕೆ ಕೊರತೆಗೆ ಕಾರಣ ಪೂರೈಕೆಯಲ್ಲಿನ ಸಮಸ್ಯೆಯೇ, ಇಲ್ಲವೇ ವಿತರಣೆಯಲ್ಲಿನ ಅವ್ಯವಸ್ಥೆಯೇ ಎನ್ನುವುದನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.