ಬೆಂಗಳೂರು: ಮಾಜಿ ಸಿಎಂ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರ 75ನೇ ವರ್ಷದ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಆಗಸ್ಟ್ 3 ರಂದು ದಾವಣಗೆರೆಯಲ್ಲಿ ಅಮೃತ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸಿದ್ದರಾಮಯ್ಯ ಅಮೃತ ಮಹೋತ್ಸವ ಅಭಿನಂದನಾ ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ನಾಲ್ಕು ದಶಕದಿಂದ ರಾಜಕೀಯದಲ್ಲಿದ್ದಾರೆ. ರೈತ ಕುಟುಂಬದಲ್ಲಿ ಹುಟ್ಟಿ ಬಹಳ ಕಷ್ಟಪಟ್ಟಿದ್ದಾರೆ. ತಂದೆ-ತಾಯಿಗಳ ಆಶೀರ್ವಾದದಿಂದ ವಕೀಲರಾದವರು. ಜೀವನದ ಕಷ್ಟ ನೋಡಿದರು.
ಸಾಮಾಜಿಕ ನ್ಯಾಯದ ಪರವಾಗಿ ಹಲವಾರು ಹೋರಾಟದಲ್ಲಿ ಸಿದ್ದರಾಮಯ್ಯ ಭಾಗಿಯಾಗಿ ಪ್ರೊ.ನಂಜುಂಡಸ್ವಾಮಿ ಜೊತೆ ಗುರುತಿಸಿಕೊಂಡವರು. ರಾಜಕೀಯ ಕ್ಷೇತ್ರದಲ್ಲಿ ಏಳು ಬೀಳು ಕಂಡಿದ್ದಾರೆ. ಈಗ ಅವರಿಗೆ 75 ವರ್ಷ ತುಂಬುತ್ತಿದೆ. ಹಾಗಾಗಿ, ಅಭಿಮಾನಿಗಳು, ಹಿತೈಷಿಗಳ ಒತ್ತಾಸೆಯಿಂದ ಅಮೃತ ಮಹೋತ್ಸವ ಮಾಡಲಾಗುತ್ತಿದೆ ಎಂದರು.
ರಾಜಕಾರಣದಲ್ಲಿ ಪ್ರಾಮಾಣಿಕವಾಗಿ ಉಳಿಯುವುದು ಕಷ್ಟ. ಆದರೆ, ಸಿದ್ದರಾಮಯ್ಯ ಪ್ರಾಮಾಣಿಕವಾಗಿ ಉಳಿದಿದ್ದಾರೆ. ಸಾಮಾಜಿಕ ನ್ಯಾಯದ ಪರವಾಗಿ ಇದ್ದಾರೆ. 1983ರಲ್ಲಿ ಮೊದಲ ಬಾರಿಗೆ ಶಾಸಕರಾದರು. ಜೆ.ಹೆಚ್.ಪಟೇಲ್ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದರು.
2013ರಲ್ಲಿ ಎಲ್ಲರ ಶ್ರಮದಿಂದ ಕಾಂಗ್ರೆಸ್ಗೆ ಬಹುಮತ ಬಂತು. ಆಗ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಅವರು ತಂದ ಕಾರ್ಯಕ್ರಮಗಳು ಯಾರೂ ಸಹ ಯೋಚನೆ ಮಾಡಲು ಸಾಧ್ಯವಿಲ್ಲ. ಅದಕ್ಕೆ ಕಾರಣ ಸಿದ್ದರಾಮಯ್ಯ ಕಂಡ ಬಡತನ. ಅನ್ನಭಾಗ್ಯ, ವಿದ್ಯಾಸಿರಿ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ ಎಂದರು.
ನಾನೂ ಕೂಡ 1983ರಿಂದ ಅವರ ಸ್ನೇಹಿತನಾದೆ. ಯಾವುದೇ ಮುಚ್ಚುಮರೆ ಇಲ್ಲದೇ ಸಿದ್ದರಾಮಯ್ಯ ಮಾತನಾಡುತ್ತಾರೆ. ಅವರ ಆಡಳಿತವನ್ನು ಈ ನಾಡಿನ ಜನತೆ ಮೆಚ್ಚಿಕೊಂಡಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಪ್ರಣಾಳಿಕೆಯಲ್ಲಿದ್ದ 165 ಭರವಸೆಗಳನ್ನು ಈಡೇರಿಸಿದ್ದಾರೆ ಎಂದು ಹೇಳಿದರು.