ಕರ್ನಾಟಕ

karnataka

By

Published : Oct 10, 2020, 7:08 PM IST

ETV Bharat / state

ಪಕ್ಷ ತೊರೆಯುವವರಿಗೆ ಮೈಸೂರು ಪೇಟ ತೊಡಿಸಿ ನಾನೇ ಸನ್ಮಾನ ಮಾಡುವೆ: HDK ಖಡಕ್ ಮಾತು

ಬರುವವರು ಬರುತ್ತಿರುತ್ತಾರೆ. ಹೋಗುವವರು ಹೋಗುತ್ತಿರುತ್ತಾರೆ. ಆದರೆ, ಜೆಡಿಎಸ್ ಪಕ್ಷವನ್ನು ಮುಳುಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅಸಮಾಧಾನಗೊಂಡಿರುವ ಶಾಸಕರ ಹೆಸರು ಹೇಳದೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಟಾಂಗ್​ ಕೊಟ್ಟಿದ್ದಾರೆ.

Kumaraswamy response about those who left JDS
ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ

ಬೆಂಗಳೂರು :'ಪಕ್ಷ ಬಿಡುವವರು ಈಗಲೇ ಬಿಟ್ಟು ಹೋಗಲಿ. ನಾನೇ ಸನ್ಮಾನ ಮಾಡಿ, ಮೈಸೂರು ಪೇಟ ತೊಡಿಸಿ ಕಳಿಸಿಕೊಡುವೆ' ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಖಾರವಾಗಿ ಹೇಳಿದ್ದಾರೆ.

ಜೆಪಿ ನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡ್ಮೂರು ಬಾರಿ ಶಾಸಕರಾದವರಿಗೆ ಬಲೆ ಬೀಸಿದ್ದಾರೆ ಎಂಬುದು ಗೊತ್ತಿದೆ. ಮೂರು ಜನ ಪಕ್ಷ ಬಿಟ್ಟು ಹೋದರು, ಏನಾಯ್ತು? ಅವರೆಲ್ಲಾ ನನ್ನ ಮುಖ್ಯಮಂತ್ರಿ ಮಾಡಿದವರು. ನನ್ನ ಕಾರ್ಯಕರ್ತರು ದೇಣಿಗೆ ಕೊಡದಿದ್ದರೆ, ನಾನು ಸಿಎಂ ಆಗಲು ಕೈ ಎತ್ತಲು ಶಕ್ತಿ ಎಲ್ಲಿ ಬರುತಿತ್ತು? ನಾನು ಆರಾಮಾಗಿ ಇರುವೆ. ರಾಜಕೀಯದಲ್ಲಿ ಗೂಟ ಹೊಡೆದುಕೊಂಡು ಇರಲು ಸಾಧ್ಯವಿಲ್ಲ ಎಂದರು.

ಬರುವವರು ಬರುತ್ತಿರುತ್ತಾರೆ. ಹೋಗುವವರು ಹೋಗುತ್ತಿರುತ್ತಾರೆ. ಆದರೆ, ಜೆಡಿಎಸ್ ಪಕ್ಷವನ್ನು ಮುಳುಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅಸಮಾಧಾನಗೊಂಡಿರುವ ಪಕ್ಷದ ಶಾಸಕರಿಗೆ ಹೆಸರು ಹೇಳದೇ ಮಾರ್ಮಿಕವಾಗಿ ನುಡಿದರು.

ನಾನು ಮಹಾಭಾರತ, ಅಶೋಕ ಚಕ್ರವರ್ತಿ, ರಾಮಾಯಣ ಎಲ್ಲವನ್ನೂ ನಾನು ನೋಡುತ್ತಿದ್ದೇನೆ. (ಧಾರಾವಾಹಿಗಳನ್ನು) ರಾಜಕಾರಣ ಅನ್ನೋದು ಈಗಿನಿಂದ ಆರಂಭವಾಗಿರೋದಲ್ಲ. ಆಗಿನ ಕಾಲದಿಂದಲೂ ಇದೆ. ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು ಎಂದ ಕುಮಾರಸ್ವಾಮಿ ಅವರು, ಮಹಾಭಾರತದ ಪ್ರಸಂಗವೊಂದನ್ನು ಬಿಚ್ಚಿಟ್ಟರು.

ನಿನ್ನೆ ರಾತ್ರಿ ಟಿವಿಯಲ್ಲಿ ಮಹಾಭಾರತ ಧಾರಾವಾಹಿ ನೋಡುತ್ತಿದ್ದೆ. ಕರ್ಣ ಕಣ್ಣೀರು ಹಾಕುತ್ತಾ ಕೃಷ್ಣನನ್ನು ಕೇಳುತ್ತಾನೆ, ಈ ಯುದ್ಧ ಬೇಕಿತ್ತಾ ಅಂತಾ ಅಳಲು ತೋಡಿಕೊಳ್ಳುತ್ತಾನೆ. ಆಗಿನ ಕಾಲದಲ್ಲೇ ಜಾತಿ ಪ್ರಸ್ತಾಪ ಆಗುತ್ತದೆ. ಯಾರು ಸ್ವಾರ್ಥಕ್ಕೆ ಮುಂದಾಗುತ್ತಾರೋ ಅವರನ್ನು ಧರ್ಮ ಕೈ ಹಿಡಿಯಲ್ಲ ಅಂತಾ ಹೇಳುತ್ತಾನೆ ಕೃಷ್ಣ. ಇದಕ್ಕಿಂತ ನಮಗೆ ಬುದ್ಧಿ ಕಲಿಯಲು ಇನ್ನೇನು ಬೇಕು? ಎಂದು ಮಹಾಭಾರತ ಪ್ರಸಂಗವನ್ನು ಈಗಿನ ಕಾಲದ ರಾಜಕಾರಣಿಗಳಿಗೆ ಹೋಲಿಸಿ ಉದಾಹರಣೆ ಕೊಟ್ಟರು.

ನನಗೆ ರಾಜಕೀಯ ಮಾಡುವುದು ಮುಖ್ಯವಲ್ಲ. ಅದಕ್ಕೆ ಎಲ್ಲವನ್ನೂ ಸೈಲೆಂಟ್ ಆಗಿ ನೋಡುತ್ತಿದ್ದೇನೆ. ಪ್ರತಿದಿನ ರಾಜಕೀಯ ಬೇಡ. ಎಲ್ಲೆಲ್ಲಿ ಸರ್ಕಾರವನ್ನು ಎಚ್ಚರಿಸಬೇಕೋ ಅಲ್ಲಿ ಎಚ್ಚರಿಸುತ್ತೇನೆ. ಎಲ್ಲಿ ರಾಜಕೀಯ ಮಾಡಬೇಕೊ ಅಲ್ಲಿ ಮಾಡಬೇಕಾಗುತ್ತದೆ. ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು. 20-30 ವರ್ಷದ ರಾಜಕೀಯ ಅನುಭವ ಇದೆ. ರಾಜಕೀಯದಲ್ಲಿ ನನಗಿಂತ ಸೀನಿಯರ್. ಅವರು ಅವರ ಪಕ್ಷದ ರಾಜಕಾರಣ ಮಾಡುತ್ತಾರೆ. ನಾನು ನನ್ನ ಪಕ್ಷದ ರಾಜಕಾರಣ ಮಾಡುತ್ತೇನೆ. ಪ್ರತಿ ದಿನ ರಾಜಕೀಯ ಬೇಡ. ರಾಜಕೀಯ ಮಾಡುವಾಗ ಮಾಡೋಣ ಎಂದು ಕುಟುಕಿದರು.

ABOUT THE AUTHOR

...view details