ಬೆಂಗಳೂರು:ಕೆಆರ್ಎಸ್ ರಕ್ಷಣೆ ವಿಚಾರವಾಗಿ ಮಾತನಾಡಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಮಂಡ್ಯಕ್ಕೆ ಇಂಥ ಸಂಸದರು ಹಿಂದೆ ಸಿಕ್ಕಿಲ್ಲ, ಮುಂದೆ ಸಿಗುವುದೂ ಇಲ್ಲ. ಮೊನ್ನೆ ನಡೆದ ಸಭೆಯಲ್ಲಿ ಇವರು ಮಾತನಾಡಿದ್ದನ್ನು ನೋಡಿದ್ದೇನೆ. ಕೆಆರ್ಎಸ್ಅನ್ನು ಇವರೇ ರಕ್ಷಣೆ ಮಾಡುತ್ತಾರಂತೆ. ಕೆಆರ್ಎಸ್ ರಕ್ಷಣೆಗಾಗಿ ಇವರನ್ನೇ ಜಲಾಶಯದ ಗೇಟ್ ಬಳಿ ಮಲಗಿಸಿದರೆ ಎಲ್ಲವೂ ಸರಿಯಾಗಲಿದೆ ಎಂದು ಪರೋಕ್ಷವಾಗಿ ಸಂಸದೆ ಸುಮಲತಾ ವಿರುದ್ಧ ಕುಹುಕವಾಡಿದ್ದಾರೆ.
ಮಾಜಿ ಸಿಎಂ ಹೆಚ್ಡಿಕೆ- ಸಂಸದೆ ಸುಮಲತಾ ವಾಕ್ಸಮರ ನಗರದಲ್ಲಿಂದು ಮೈ ಶುಗರ್ ಕಾರ್ಖಾನೆ ವಿಚಾರವಾಗಿ ಸಿಎಂ ಭೇಟಿ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲಸ ಎಲ್ಲಿ ಮಾಡಬೇಕು ಎನ್ನುವ ಮಾಹಿತಿ ಇರದೆ, ಯಾರದ್ದೋ ವೈಯಕ್ತಿಕ ದ್ವೇಷದ ಮೇಲೆ ಹೇಳಿಕೆ ಕೊಡುವುದು ಬಹಳ ದಿನ ನಡೆಯಲ್ಲ. ಯಾವುದೋ ಅನುಕಂಪದಲ್ಲಿ ಗೆದ್ದು ಬಂದಿದ್ದಾರೆ. ಅದಕ್ಕಾಗಿ ಇವರು ಜನತೆಯ ಋಣ ತೀರಿಸುವ ಕೆಲಸ ಮಾಡಬೇಕು. ಪದೇಪದೆ ಅಂತಹ ಅವಕಾಶಗಳು ದೊರಕುವುದಿಲ್ಲ. ದೊರಕಿದ ಅನುಕಂಪವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಜನರೇ ಮುಂದೆ ಪಾಠ ಕಲಿಸಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಮೈ ಶುಗರ್ ಕಾರ್ಖಾನೆ ಖಾಸಗೀಕರಣ ವಿವಾದ: ಹೆಚ್ಡಿಕೆ ನಿಯೋಗಕ್ಕೆ ಸಿಎಂ ನೀಡಿದ್ರು ಈ ಅಭಯ
ಈ ಮಾತಿಗೆ ತಿರುಗೇಟು ಕೊಟ್ಟಿರುವ ಸಂಸದೆ ಸುಮಲತಾ, ಹೀಗೆ ಹಗುರವಾಗಿ ವೈಯಕ್ತಿಕ ಟೀಕೆ ಮಾಡೋದು ಯಾವ ಸಂಸ್ಕಾರ. ಮಾಜಿ ಸಿಎಂ ಆದವರಿಗೆ ಭಾಷೆ ಮೇಲೆ ಹಿಡಿತ ಇಲ್ವಾ? ಎಂದು ಕಿಡಿಕಾರಿದ್ದಾರೆ.
‘ಐ ಡೋಂಟ್ ಕೇರ್’
ವಿಧಾನಸೌಧದಲ್ಲಿ ಮಾತನಾಡಿದ ಅವರು, ಯಾವ ಮಾತು ಆಡಬೇಕು, ಯಾವ ಮಾತು ಆಡಬಾರದು ಅನ್ನೋ ಜ್ಞಾನ ಅವರಿಗೆ ಇಲ್ವಾ? ಈ ರೀತಿಯ ಮಾತು ಒಪ್ಪುವಂಥದ್ದ. ಇಂತಹ ವೈಯಕ್ತಿಕ ಟೀಕೆಗಳು ನನ್ನ ಮೇಲೆ ಪರಿಣಾಮ ಬಿರೋದಿಲ್ಲ. ಐ ಡೋಂಟ್ ಕೇರ್, ನಾನು ಯಾವತ್ತು ಅಂತಹ ಲೆವೆಲ್ಗೆ ಹೋಗಿ ಪ್ರತಿಕ್ರಿಯೆ ನೀಡಿಲ್ಲ ಎಂದು ಹೆಚ್ಡಿಕೆಗೆ ತಿರುಗೇಟು ಕೊಟ್ಟರು.
ಮೈಶುಗರ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಸಿಎಂ ಆಗಿದ್ದಾಗ ಏನು ಮಾಡಿದ್ರು? ಅವರು ಸಿಎಂ ಆಗಿದ್ದಾಗ ಯಾಕೆ ಮೈ ಶುಗರ್ ಪ್ರಾರಂಭ ಮಾಡಿಲ್ಲ ಎಂದು ಪ್ರಶ್ನಿಸಿದ್ರು. ನನ್ನ ಸಲಹೆ ಪಡೆದು ಸರ್ಕಾರ ನಿರ್ಧಾರ ತೆಗೆದುಕೊಂಡಿದೆ ಅನ್ನೋವಷ್ಟು ಪವರ್ ನನಗಿಲ್ಲ. ಎಲ್ಲರ ಜೊತೆ ಮಾತಾಡಿ ನಾನು ಕಾರ್ಖಾನೆ ಪ್ರಾರಂಭ ಮಾಡಿ ಅಂತ ಮನವಿ ಮಾಡಿದ್ದೇನೆ. ಈ ಬಗ್ಗೆ ಸರ್ಕಾರ ತೀರ್ಮಾನ ಮಾಡಲಿ ಎಂದರು.
ಯಾವುದಾದರೂ ಒಂದು ಮಾದರಿಯಲ್ಲಿ ಕಾರ್ಖಾನೆ ಓಪನ್ ಮಾಡಲಿ. ಮೈಶುಗರ್ ನಲ್ಲಿ 400 ಕೋಟಿ ಅಕ್ರಮ ಆಗಿದೆ ಅಂತ ಹೇಳಿದ್ರು. ರೈತರ ಪರವಾಗಿ ಆ ಕಾರ್ಖಾನೆ ಪ್ರಾರಂಭ ಆಗಬೇಕು ಅಷ್ಟೇ. ನಾನು ಖಾಸಗೀಕರಣ ಮಾಡಿ ಅಂತ ಹೇಳಿಲ್ಲ. ಅಂಥ ಮೂರ್ಖ ಕೆಲಸ ನಾನು ಮಾಡೋದು ಇಲ್ಲ ಎಂದು ಟಾಂಗ್ ಕೊಟ್ಟರು.
‘ಈಗಾಗಲೇ ಜನ ಪಾಠ ಕಲಿಸಿದ್ದಾರೆ’
ಜನ ಈಗಾಗಲೇ ಯಾರಿಗೆ ಬುದ್ಧಿ ಕಲಿಸಿದ್ದಾರೆ ಅಂತಾ ನಮ್ಮ ಮುಂದೆ ಸಾಕ್ಷಿಯಿದೆ. ಈ ರೀತಿ ಮಾತುಗಳಿಂದ ಜನರಿಗೆ ಎಷ್ಟು ನೋವಾಗಿದೆ ಅಂತಾ ಅವರಿಗೆ ಇನ್ನೂ ಅರ್ಥವಾಗಿಲ್ಲ ಅನ್ಸುತ್ತೆ. ಸಂಸದರು ಅನ್ನೋದು ಬಿಡಿ, ಒಂದು ಹೆಣ್ಣಿನ ಬಗ್ಗೆ ಹೇಗೆ ಮಾತಾಡಬೇಕು ಅಂತಾ ಅವರು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
‘ಬೇರೆಯವರಿಗೆ ಯಾಕೆ ಆತಂಕ’
ಕೆಆರ್ ಎಸ್ ಬಿರುಕು ವಿಚಾರವಾಗಿ ಮಾತನಾಡಿದ ಅವರು, ತನಿಖೆ ಮಾಡಬೇಕು ಅಂತ ನಾನು ಒತ್ತಾಯ ಮಾಡ್ತೀನಿ. ಅಲ್ಲಿನ ಅಕ್ರಮ ಗಣಿಗಾರಿಕೆ ಬಗ್ಗೆ ರೈತರು ನನಗೆ ಮನವಿ ಮಾಡಿದ್ದರು. ಮೊದಲ ದಿನದಿಂದ ನಾನು ಡ್ಯಾಮ್ ಅಕ್ರಮ ಗಣಿಗಾರಿಕೆ ಬಗ್ಗೆ ಮಾತಾಡಿದ್ದೆ. ನಾನು ಯಾರ ಬಗ್ಗೆಯೂ ವೈಯಕ್ತಿಕವಾಗಿ ಟೀಕೆ ಮಾಡಿಲ್ಲ. ಯಾರ ವಿರುದ್ಧ ಬೊಟ್ಟು ಮಾಡಿಲ್ಲ. ನಿರಾಣಿ ಅವ್ರನ್ನ ಖುದ್ದಾಗಿ ಕರೆದುಕೊಂಡು ಹೋಗಿ ಸ್ಥಳ ತೋರಿಸಿದ್ದೆ. ಅಕ್ರಮ ಆಗಿದ್ದಕ್ಕೆ 100 ಕೋಟಿ ದಂಡ ಹಾಕಿದ್ದಾರೆ. ದಂಡವನ್ನು ಸುಮ್ಮನೆ ಹಾಕೋದಕ್ಕೆ ಆಗುತ್ತಾ? ಅಕ್ರಮ ಗಣಿಗಾರಿಕೆ ತಡೆದ್ರೆ ಮಂಡ್ಯದ ಖಜಾನೆಗೆ ಸಾವಿರಾರು ಕೋಟಿ ಬರಲಿದೆ. ಇದರಿಂದ ಯಾರಿಗೆ ಪ್ರಯೋಜನ, ಯಾರಿಗೆ ನಷ್ಟ ಅಂತ ತಿಳುವಳಿಕೆ ಇರೋರು ಅರ್ಥ ಮಾಡಿಕೊಳ್ಳಬೇಕು. ಇದರಲ್ಲಿ ಬೇರೆಯವರು ಯಾಕೆ ಆತಂಕ ಪಡುತ್ತಿದ್ದಾರೆ ಗೊತ್ತಿಲ್ಲ ಎಂದು ಹೆಚ್ಡಿಕೆಗೆ ಕುಟುಕಿದರು.