ಬೆಂಗಳೂರು: ಜೆಡಿಎಸ್ ಪಕ್ಷದ ಸುದ್ದಿಗೆ ಬರಬೇಡಿ. ನನ್ನ ಸುದ್ದಿಗೆ ಬಂದರೆ ಸರಿ ಇರುವುದಿಲ್ಲ. ಹೇಗೋ ಸುಭದ್ರವಾಗಿದ್ದೀರಿ. ನಾನು ಕೈ ಹಾಕಿದರೆ ಸರಿ ಇರಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಯಡಿಯೂರಪ್ಪ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಕೋರ್ ಕಮಿಟಿ ರಚನೆ ಕುರಿತ ಸಭೆಗೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜೆಡಿಎಸ್ ಮುಗಿಸಲು ಯಡಿಯೂರಪ್ಪ ಇನ್ನೊಂದು ಜನ್ಮ ಹುಟ್ಟಿ ಬಂದರೂ ಆಗುವುದಿಲ್ಲ. ಇದೂವರೆಗೂ ನನ್ನ ಪಕ್ಷದ ತಂಟೆಗೆ ಬಂದಿಲ್ಲ. ಹಾಗಾಗಿ ಯಡಿಯೂರಪ್ಪ ಸುರಕ್ಷಿತವಾಗಿದ್ದಾರೆ. ನನ್ನ ತಂಟೆಗೆ ಬಂದರೆ ಹುಷಾರ್. ನಿಮ್ಮ ಬಂಡವಾಳ ನನ್ನ ಕೈಯಲ್ಲಿದೆ ಎಂದು ಗುಡುಗಿದ್ದಾರೆ.
ನಾನು ವೈಯಕ್ತಿಕ ಬದುಕಿನ ಸಿಡಿ ಇಟ್ಟುಕೊಂಡು ಆಟ ಆಡೋದಿಲ್ಲ:
ನಾನು ವೈಯಕ್ತಿಕ ಸಿಡಿಗಳನ್ನು ಇಟ್ಕೊಂಡು ರಾಜಕಾರಣ ಮಾಡೋದಿಲ್ಲ. ನಾನು ರಾಜಕೀಯವಾಗಿ ಬಳಸಿಕೊಳ್ಳುವ ದಾಖಲೆಗಳೇ ಬೇರೆ ಎಂದರು. ಯಡಿಯೂರಪ್ಪ ಅವರು ಕಳ್ಳರು, ದರೋಡೆಕೋರರನ್ನು ಸೇರಿಸಿಕೊಂಡಿದ್ದಾರೋ ಗೊತ್ತಿಲ್ಲ. ಇದೂವರೆಗೂ ಮೌನವಾಗಿದ್ದೆ. ಜೆಡಿಎಸ್ ನಿರ್ನಾಮ ಮಾಡುವವರು ಎಲ್ಲೆಲ್ಲಿಗೋ ಹೋಗಿದ್ದಾರೆ ಎಂದು ಹೇಳಿದ್ರು.
ಈಗ ಬಿ ಟೀಂ ಯಾರು?
ಕಳೆದ 2008 ರಲ್ಲಿ ಅಪ್ಪ, ಮಕ್ಕಳನ್ನು ಮುಗಿಸುತ್ತೇವೆ ಅಂತಾ ಹೇಳಿದ್ದರು. ಬಳಿಕ ರಾಜಕಾರಣದಲ್ಲಿ ಏನಾಯ್ತು ಗೊತ್ತಿದೆಯಾ ?. ಮೂರು ಜನ ಮುಖ್ಯಮಂತ್ರಿಗಳು ಬದಲಾದರು. ಜೆಡಿಎಸ್ ನಿರ್ನಾಮ ಮಾಡುತ್ತೇವೆಂದು ಹೇಳಿದವರು ಎಲ್ಲೆಲ್ಲೋ ಹೋಗಿದ್ದಾರೆ. ಜೆಡಿಎಸ್ ಪಕ್ಷದ ಸುದ್ದಿಗೆ ಬರಬೇಡಿ. ನನ್ನ ಪಕ್ಷದ ಬಗ್ಗೆ ಲಘುವಾಗಿ ಮಾತನಾಡಬೇಡಿ. ಅಧಿಕಾರದ ಮದದಿಂದ ಮಾತನಾಡುತ್ತಿದ್ದಾರೆ. ಮುಂದಿನ ಬಾರಿಯೂ ನಾವೇ ಅಂತಾ ಬೀಗುತ್ತಿದ್ದಾರೆ. ಈ ಹಿಂದೆ ಇದೇ ಯಡಿಯೂರಪ್ಪ ಹತ್ತು ವರ್ಷ ನಾವೇ ಅಧಿಕಾರದಲ್ಲಿ ಇರುತ್ತೇವೆಂದು ಹೇಳಿದ್ದರು. ಆಮೇಲೆ ಇವರು ಎಲ್ಲಿ ಹೋದರು ಎಂದು ವ್ಯಂಗ್ಯವಾಡಿದರು.
ಈ ಹಿಂದೆ ಕಾಂಗ್ರೆಸ್ ನಾಯಕರೊಬ್ಬರು ಜೆಡಿಎಸ್, ಬಿಜೆಪಿಯ 'ಬಿ' ಟೀಂ ಎಂದಿದ್ದರು. ಇದೀಗ ಆರ್‌ಎಸ್‌ಎಸ್ ಮೂಲಗಳ ಪ್ರಕಾರ ಏಪ್ರಿಲ್ಗೆ ಯಡಿಯೂರಪ್ಪ ಬದಲಾಗಲಿದ್ದಾರೆ ಎಂದು ಹೇಳಿದ್ದಾರೆ. ಹಾಗಾದರೆ ಇವರು ಆರ್‌ಎಸ್‌ಎಸ್ ನ ಬಿ ಟೀಮ್ ಇರಬೇಕು. ಇವರಿಗೆ ಆರ್‌ಎಸ್‌ಎಸ್ ಮೂಲಗಳಿಂದಲೇ ಗೊತ್ತಾಗುತ್ತಾ? ಎಂದು ಸಿದ್ದರಾಮಯ್ಯ ಅವರ ಹೆಸರೇಳದೆ ಕುಟುಕಿದರು.
ಈಗ ಐಟಿ ಇಲಾಖೆ ಏನ್ ಮಾಡ್ತಿದೆಯೋ
ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ಡಿಕೆ, ನೀರಾವರಿ ಸಚಿವ ಮಾತನಾಡಿದ್ದಾರೆ. ಸಿಪಿ ಯೋಗೇಶ್ವರ್ ಒಂಬತ್ತು ಕೋಟಿ ಖರ್ಚು ಮಾಡಿದ್ದಾರೆ ಅಂತಾರೆ. ಮನೆ ಮಾರಿ ಸಾಲ ಮಾಡಿ ಖರ್ಚು ಮಾಡಿದ್ದಾರಂತೆ. ನನ್ನ ಅವಧಿಯಲ್ಲಿ ಐಟಿ ಅಧಿಕಾರಿಗಳು ದಾಳಿ ಮಾಡುತ್ತಿದ್ದರು. ಈಗ ಇವರೆಲ್ಲಾ ಎಲ್ಲಿ ಹೋದರು. ಐಟಿ ಇಲಾಖೆಗೆ ಮಾನ ಮರ್ಯಾದೆ ಇದ್ದರೆ ಇವರ ವಿರುದ್ಧ ಕ್ರಮಕೈಗೊಳ್ಳಲಿ ಎಂದು ಕಿಡಿಕಾರಿದರು.
ಸಿಡಿ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ ಎಂದ ಹೆಚ್ಡಿಕೆ, ಯಾವ ಅಳತೆಗೋಲಿನ ಆಧಾರದಲ್ಲಿ ಮಂತ್ರಿ ಮಾಡಿದ್ದಿರೋ ತಮಗೆ ಬಿಟ್ಟದ್ದು, ಈಗಲಾದರೂ ಅಭಿವೃದ್ಧಿ ಕಡೆ ಗಮನ ಹರಿಸಲಿ. ಈ ಬಗ್ಗೆ ಜನ ಗಮನ ಹರಿಸಲಿ. ಆಡಳಿತದ ವೈಫಲ್ಯ ಮುಂದುವರಿದಿದೆ ಎಂದು ಸಿಎಂ ಬಿಎಸ್ವೈ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.