ಬೆಂಗಳೂರು :ಪಂಚ ರಾಜ್ಯಗಳ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಲಾಗಿದೆ. ಕೇಂದ್ರ ಸರ್ಕಾರ ಅಂತಿಮವಾಗಿ ರೈತರ ಹೋರಾಟಕ್ಕೆ ಮಣಿದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಪಕ್ಷದ ಕಚೇರಿ ಜೆ ಪಿ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಏಕಾಏಕಿ ತೆಗೆದುಕೊಂಡಿರುವ ನಿರ್ಧಾರದಲ್ಲಿ ವಿಶ್ವಾಸದ ಕೊರತೆಯಿದೆ. ಚುನಾವಣೆಗಳ ಲಾಭ, ನಷ್ಟ ಇಟ್ಟುಕೊಂಡು ಕೇಂದ್ರ ತೀರ್ಮಾನ ಮಾಡಿದೆ. ಆದರೂ ಪ್ರತಿಭಟನೆ ಹಿಂಪಡೆಯಲ್ಲ ಎಂದು ರೈತರು ಹೇಳಿದ್ದಾರೆ ಎಂದು ದೂರಿದರು.
ಕಳೆದೊಂದು ವರ್ಷದಿಂದ ದೆಹಲಿ ಗಡಿಯಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಕೃಷಿ ಕಾಯ್ದೆಗಳನ್ನು ವಿರೋಧಸಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಇಂದು ಪ್ರಧಾನಿ ನರೇಂದ್ರ ಮೋದಿ ಯವರು ಘೋಷಣೆ ಹೊರಡಿಸುವ ಮೂಲಕ ಕಾಯ್ದೆಗಳನ್ನು ವಾಪಸ್ ಪಡೆದಿದ್ದಾರೆ. ರೈತ ಮುಖಂಡರನ್ನು ಮಾತುಕತೆಗೆ ಕರೆಯದೆ, ತಜ್ಞರ ಬಳಿ ಚರ್ಚಿಸದೆ ನಿರ್ಧಾರ ಮಾಡಿದ್ದಾರೆ. ಹೀಗಾಗಿ ರೈತರಲ್ಲಿ ಅನುಮಾನ ಮೂಡಿದೆ.
ಒಂದು ವರ್ಷದಲ್ಲಿ ನಡೆದ ರೈತ ಹೋರಾಟದ ಬಗ್ಗೆ ರಾಜಕೀಯ ನಾಯಕರು ಹಗುರವಾಗಿ ಮಾತನಾಡಿದ್ದಾರೆ. ಕೇಂದ್ರ ಸರ್ಕಾರದ ನಡವಳಿಕೆ ಬಗ್ಗೆ ಟೀಕೆಗಳು ಪ್ರಾರಂಭವಾಗಿವೆ. ಪಂಚ ರಾಜ್ಯಗಳ ಚುನಾವಣೆ ಕೈತಪ್ಪಿ ಹೋಗುವ ಪರಿಸ್ಥಿತಿ ಇದೆ. ಹೀಗಾಗಿ ಕೃಷಿ ಕಾಯ್ದೆಗಳನ್ನು ಹಿಂದೆ ಪಡೆದಿದ್ದಾರೆ ಎಂದು ವ್ಯಂಗ್ಯವಾಡಿದರು.
ಕಾಯ್ದೆಗಳ ವಿರುದ್ಧ ಉತ್ತರ ಪ್ರದೇಶ, ಪಂಜಾಬಿನಲ್ಲಿ ದೊಡ್ಡಮಟ್ಟದ ಪ್ರತಿಭಟನೆಗಳು ನಡೆದವು. ಆಗ ಮೋದಿಯವರು ಮನವೊಲಿಕೆ ಸಭೆ ಮಾಡಬೇಕಿತ್ತು. ಮನವೊಲಿಕೆ ಮಾಡಿದ್ದರೆ ಅನಾಹುತಗಳು ಆಗ್ತಿರಲಿಲ್ಲ. ಕೇಂದ್ರ ಸಚಿವರ ಪುತ್ರ ಕಾರು ಹರಿಸಿ ಅನಾಹುತ ಉಂಟು ಮಾಡಿದ್ದರು. ಪ್ರತಿಭಟನೆ ನಡೆದಾಗಲೇ ಸರ್ಕಾರ ಗೌರವಯುತವಾಗಿ ಸ್ಪಂದಿಸಬೇಕಿತ್ತು. ಸರ್ಕಾರಕ್ಕೆ ಮುಜುಗರಕ್ಕೆ ಒಳಗಾಗುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಟೀಕಿಸಿದರು.