ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಬರದಿಂದ ರೈತರ ಆತ್ಮಹತ್ಯೆಗಳು ಆರಂಭವಾಗಿವೆ: ಕುಮಾರಸ್ವಾಮಿ ಆತಂಕ

ರಾಜ್ಯ ಸರ್ಕಾರದ 7 ತಿಂಗಳ ಸಾಧನೆಯ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು. ರಾಜ್ಯಕ್ಕೆ ಅಭಿವೃದ್ಧಿ ಯೋಜನೆಗಳನ್ನು ಸರ್ಕಾರ ನೀಡಿಲ್ಲ ಎಂದು ಆರೋಪಿಸಿದರು.

ಮಾಜಿ ಸಿಎಂ ಕುಮಾರಸ್ವಾಮಿ
ಮಾಜಿ ಸಿಎಂ ಕುಮಾರಸ್ವಾಮಿ

By ETV Bharat Karnataka Team

Published : Dec 30, 2023, 12:13 PM IST

Updated : Dec 30, 2023, 12:22 PM IST

ಬೆಂಗಳೂರು:ರಾಜ್ಯದಲ್ಲಿನ ಬರಗಾಲಕ್ಕೆ ಪರಿಹಾರವಾಗಿ ರೈತರಿಗೆ ತಲಾ 2 ಸಾವಿರ ರೂಪಾಯಿ ನೀಡುತ್ತೇವೆ ಎಂದು ಸರ್ಕಾರ ಹೇಳಿಯೇ ಮೂರು ತಿಂಗಳಾಯಿತು. ಇನ್ನೂ ಪರಿಹಾರ ನೀಡಿಲ್ಲ. ರೈತರ ಆತ್ಮಹತ್ಯೆ ಸರಣಿಗಳು ಆರಂಭವಾಗಿವೆ. ಸರ್ಕಾರ ಮಾತ್ರ ಉಚಿತ ಯೋಜನೆಗಳ ಜಪ ಮಾಡುತ್ತಲೇ ಇದೆ ಎಂದು ಮಾಜಿ ಸಿಎಂ ಹೆಚ್​​ಡಿ ಕುಮಾರಸ್ವಾಮಿ ತಿವಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬರಗಾಲಕ್ಕೆ ಸರ್ಕಾರ ಏನು ಕೊಟ್ಟಿದೆ. ಸಿಎಂ, ಮಂತ್ರಿಗಳು ಕೇವಲ ಹೇಳಿಕೆಗಳಿಗೆ ಸೀಮಿತವಾಗಿದ್ದಾರೆ. ಸರ್ಕಾರವು ಹೊಸ ಜನಪರ ಕಾರ್ಯಕ್ರಮ ರೂಪಿಸಿಲ್ಲ. ಪದೇ ಪದೆ ಕೇಂದ್ರ ಸರ್ಕಾರವನ್ನು ದೂರುತ್ತಿದ್ದಾರೆ. ಬರಗಾಲ ಪರಿಹಾರವಾಗಿ 2 ಸಾವಿರ ರೂ. ಕೊಡುತ್ತೇವೆ ಎಂದು ಹೇಳಿ ಮೂರು ತಿಂಗಳಾಯ್ತು, ಇನ್ನೂ ಕೊಟ್ಟಿಲ್ಲ. ಇದೇ ಸರ್ಕಾರದ ಏಳು ತಿಂಗಳ ಸಾಧನೆಯಾಗಿದೆ ಎಂದು ಹೆಚ್​ಡಿಕೆ ವ್ಯಂಗ್ಯವಾಡಿದರು.

ಉಚಿತಗಳ ಬಡಾಯಿ:ಸರ್ಕಾರದ ಕೈಯ್ಯಲ್ಲಿ ಎರಡು ಸಾವಿರ ಕೊಡೋಕೂ ಸಾಧ್ಯವಾಗಿಲ್ಲ. ನುಡಿದಂತೆ ನಡೆದಿದ್ದೇವೆ ಎಂದು ಕೇವಲ ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಜಾಹೀರಾತುಗಳ ಮೂಲಕ ಗ್ಯಾರಂಟಿ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಜನ ಎಲ್ಲಿ ಮರೆತು ಬಿಡುತ್ತಾರೆ ಎಂದು ನುಡಿದಂತೆ ನಡೆಯತ್ತಿದ್ದೇವೆ ಎಂದು ನೆನಪು ಮಾಡಲು ಹರಸಾಹಸಪಡುತ್ತಿದ್ದಾರೆ. ಸರ್ಕಾರದ ಬಗ್ಗೆ ನನಗೆ ಅನುಕಂಪ ಮೂಡುತ್ತಿದೆ. ಈ ಗ್ಯಾರಂಟಿಗಳು ಜನರಿಗೆ ವಿಶ್ವಾಸ ಮೂಡಿಸಲು ಯಶಸ್ವಿಯಾಗಿದ್ದರೆ, ಪ್ರತಿನಿತ್ಯ ನುಡಿದಂತೆ ನಡೆದಿದ್ದೇನೆ ಎಂದು ಹೇಳುವ ಅವಶ್ಯಕತೆ ಏನಿದೆ ಎಂದು ಅವರು ಪ್ರಶ್ನಿಸಿದರು.

ನನ್ನ ಅವಧಿಯ ಸರ್ಕಾರದಲ್ಲಿ ಸಾಲ ಮನ್ನಾ ಮಾಡಿದಾಗ, ಅದರ ಪ್ರಚಾರಕ್ಕಾಗಿ ಸರ್ಕಾರದ ಹಣವನ್ನು ದುಂದು ವೆಚ್ಚ ಮಾಡಲಿಲ್ಲ. ಈ ಸರ್ಕಾರ ಐದು ಗ್ಯಾರಂಟಿ ಯೋಜನೆಗಳಿಗಾಗಿ ಲಕ್ಷಾಂತರ ರೂಪಾಯಿ ಜಾಹೀರಾತಿಗೆ ವೆಚ್ಚ ಮಾಡುತ್ತಿದೆ. ಅದರ ಭಜನೆ ಬಿಟ್ಟರೆ ಬೇರೆ ಯಾವುದರಲ್ಲೂ ಅಭಿವೃದ್ಧಿ ಸಾಧ್ಯವಾಗಿಲ್ಲ ಎಂದು ಕುಮಾರಸ್ವಾಮಿ ಆರೋಪಿಸಿದರು.

ಜಂಟಿ ಅಧಿವೇಶನದಲ್ಲಿ ಚರ್ಚೆ:ಬೆಳಗಾವಿ ಅಧಿವೇಶನದಲ್ಲಿ ನನ್ನ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಅಲ್ಲಿನ ನೀರಸ ಕಲಾಪದಿಂದ ಜನರಿಗೆ ನಿರಾಸೆ ಅಗಿರುವುದು ನಿಜ. ಜಂಟಿ ಅಧಿವೇಶನದಲ್ಲಿ ನಾನು ನಿಮ್ಮ ನಿರಾಸೆಯನ್ನು ಸರಿಪಡಿಸುವ ಕೆಲಸ ಮಾಡುತ್ತೇನೆ. ನಾನು ಪಲಾಯನ ವಾದ ಮಾಡಲ್ಲ. 900 ಕೋಟಿ ರೂಪಾಯಿ ಕುಡಿಯುವ ನೀರು ಹಾಗೂ ಮೇವು ಖರೀದಿಗೆ ಹಣ ಇಟ್ಟಿದ್ದು ಬಿಟ್ಟರೆ ಬೇರೆ ಯಾವುದಕ್ಕೂ ಹಣ ಇಟ್ಟಿಲ್ಲ ಎಂದರು.

ಸರ್ಕಾರ ಬ್ರಾಂಡ್ ಬೆಂಗಳೂರು ಮಾಡುವ ಉದ್ದೇಶ ಸಾರುತ್ತಿದೆ. ಆದರೆ, ಬೆಂಗಳೂರಿನಲ್ಲಿ ಟನಲ್ ರಸ್ತೆ ಮಾಡುವ ಬಗ್ಗೆ ಇಬ್ಬರು ಮಂತ್ರಿಗಳ ನಡುವೆ ಜಟಾಪಟಿ ನಡೆಯುತ್ತಿದೆ. 2006-07ರಲ್ಲಿ ನಾನು ಸಿಎಂ ಆಗಿದ್ದಾಗ ಮೀನ್ ಸ್ಕ್ವೇರ್​ನಿಂದ ಹೆಬ್ಬಾಳವರೆಗೆ ಟನಲ್ ರಸ್ತೆ ಮಾಡಲು ಕೋರಿಯನ್ ಸಂಸ್ಥೆಯೊಂದು ಮುಂದೆ ಬಂದಿತ್ತು. ಬಳಿಕ ನಮ್ಮ ಸರ್ಕಾರ ಹೋಯಿತು‌. ಈಗ 2024. ಆದರೆ, ಆ ಯೋಜನೆ ಇನ್ನೂ ಆರಂಭವಾಗಿಲ್ಲ. ಟನಲ್ ರಸ್ತೆ ನಿರ್ಮಿಸಿಕೊಡುವಷ್ಟು ಸಮಯ ಸರ್ಕಾರಕ್ಕೆ ಇದೆಯಾ? ಎಂದು ಕೇಳಿದರು.

ಇದನ್ನೂ ಓದಿ:ಚೆಕ್ ಬೌನ್ಸ್ ಪ್ರಕರಣ ಹಳೆಯದು, ಇತ್ಯರ್ಥ ಆಗಲಿದೆ: ಸಚಿವ ಮಧು ಬಂಗಾರಪ್ಪ

Last Updated : Dec 30, 2023, 12:22 PM IST

ABOUT THE AUTHOR

...view details