ಬೆಂಗಳೂರು : ತೀವ್ರ ಜ್ವರದಿಂದ ಬಳಲುತ್ತಿರುವ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಜಯನಗರದಲ್ಲಿರುವ ಅಪೊಲೋ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಸ್ತು ಹಾಗೂ ತೀವ್ರ ಜ್ವರದಿಂದಾಗಿ ಇಂದು ಬೆಳಗಿನಜಾವ 3.40ರ ಸುಮಾರಿಗೆ ಕುಮಾರಸ್ವಾಮಿ ಅವರು ಆಸ್ಪತ್ರೆಗೆ ದಾಖಲಾಗಿದ್ದು, ತಕ್ಷಣ ಅವರನ್ನು ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಗಿದೆ. ಕುಮಾರಸ್ವಾಮಿ ಅವರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಅವರ ಆರೋಗ್ಯದ ಮೇಲೆ ತೀವ್ರ ನಿಗಾ ಇಡಲಾಗಿದೆ ಎಂದು ಪ್ರಕಟಣೆಯಲ್ಲಿ ಆಸ್ಪತ್ರೆ ತಿಳಿಸಿದೆ. ಪ್ರಸ್ತುತ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಕುಮಾರಸ್ವಾಮಿ ಅವರ ಆರೋಗ್ಯದ ಬಗ್ಗೆ ಕಾಲ ಕಾಲಕ್ಕೆ ಮಾಹಿತಿ ನೀಡಲಾಗುವುದು ಎಂದು ಹೇಳಿದೆ.
''ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಆರಾಮಾಗಿದ್ದಾರೆ. ರಾಜ್ಯದ ಜನತೆ ಗಾಬರಿಯಾಗಬೇಡಿ'' ಎಂದು ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ. ''ವೈದ್ಯರು ಗುರುವಾರ ಡಿಸ್ಚಾರ್ಜ್ ಮಾಡ್ತೀವಿ ಅಂದ್ರು. ನಾನೇ ಬೇಡ ಅಂದಿದ್ದೇನೆ. ಶುಕ್ರವಾರದಂದು ಕುಮಾರಸ್ವಾಮಿ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಅಗಲಿದ್ದಾರೆ'' ಎಂದು ತಿಳಿಸಿದರು. ''ಅಲ್ಲದೇ ಯಾರೂ ಸಹ ಆತಂಕಕ್ಕೆ ಒಳಗಾಗಬೇಡಿ. ಊಹಾಪೋಹದ ಸುದ್ದಿಗಳನ್ನು ಹರಡಿಸಬೇಡಿ'' ಎಂದು ಸಹ ಅವರು ಇದೇ ವೇಳೆ ಮನವಿ ಮಾಡಿದರು.
ಅಪೋಲೋ ಆಸ್ಪತ್ರೆಯ ಡಾ. ಸತೀಶ್ ಚಂದ್ರ ಮಾತನಾಡಿ, ''ಕುಮಾರಸ್ವಾಮಿ ಅವರು ಮುಂಜಾನೆ 3 ಗಂಟೆ ಸುಮಾರಿಗೆ ನಮ್ಮ ಆಸ್ಪತ್ರೆಗೆ ಬಂದ್ರು. ಅವರು ಬಂದಾಗ ಮಾತಿನಲ್ಲಿ ತೊದಲು ಇತ್ತು. ಕೈ ನಲ್ಲಿ ವೀಕ್ನೆಸ್ ಇತ್ತು. ಅದಕ್ಕೆ ನಮ್ಮ ಆಸ್ಪತ್ರೆಗೆ ಕರೆದುಕೊಂಡು ಬಂದ್ರು. ಅವರಿಗೆ ತಕ್ಷಣವೇ ಪರಿಶೀಲನೆ ನಡೆಸಲಾಯಿತು. ಎಂಆರ್ಐ ಸ್ಕ್ಯಾನ್ ಮಾಡಿ ಚಿಕಿತ್ಸೆಯನ್ನು ನೀಡಿದ್ದೇವೆ. ತಕ್ಷಣವೇ ಚಿಕಿತ್ಸೆ ನೀಡಿರುವುದರಿಂದ ಗುಣಮುಖರಾಗಿದ್ದಾರೆ. ಈಗ ಎಲ್ಲರ ಜೊತೆಗೆ ಚೆನ್ನಾಗಿ ಮಾತನಾಡುತ್ತಿದ್ದಾರೆ'' ಎಂದು ಮಾಹಿತಿ ನೀಡಿದರು.
''ಅವರ ಹಾರ್ಟ್ಗೆ ಸಮಸ್ಯೆ ಇಲ್ಲ. ರಕ್ತ ಚಲನೆ ಕಡಿಮೆ ಆಗಿ ವೀಕ್ನೆಸ್ ಆಗಿತ್ತು. ಇವತ್ತು ನೋಡಿ ನಾಳೆ ವಾರ್ಡ್ಗೆ ಶಿಫ್ಟ್ ಮಾಡ್ತೀವಿ. ಮುಂದೆ ಯಾವುದೇ ತೊಂದರೆ ಇಲ್ಲ. ವಿಶ್ರಾಂತಿ ಏನು ಬೇಡ, ಎರಡು ಮೂರು ದಿನಗಳ ಬಳಿಕ ಅವರು ಕೆಲಸ ಮಾಡಬಹುದು'' ಎಂದು ಹೇಳಿದರು.