ಬೆಂಗಳೂರು: ಜಗತ್ತಿನ ಸಮಸ್ತ ಕನ್ನಡಿಗರಿಗೆ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ನಮ್ಮೆಲ್ಲರ ತನು ಕನ್ನಡ, ಮನ ಕನ್ನಡ, ನುಡಿ ಕನ್ನಡವಾಗಲಿ. ಉಸಿರಿನ ಪ್ರತಿ ಕಣಕಣದಲ್ಲೂ ಕನ್ನಡವಿರಲಿ. ನಮ್ಮ ಆಶಯವೇ ಇದಾಗಿರಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, 1,500 ವರ್ಷಗಳಿಗೂ ಹೆಚ್ಚು ಘನ ಇತಿಹಾಸವುಳ್ಳ ಕನ್ನಡ, ಶಾಸ್ತ್ರೀಯ ಸ್ಥಾನ ಅಲಂಕರಿಸಿದ ಅಭಿಜಾತ ಕನ್ನಡ, ಅಷ್ಟ ಜ್ಞಾನಪೀಠಗಳ ಮೇರುಗನ್ನಡ, ನಮ್ಮ ಬದುಕು-ಬಾಳ್ವೆಯ ತಾಯಿ ಕನ್ನಡ. ಕನ್ನಡವೆಂದರೆ ಬರೀ ಭಾಷೆಯಲ್ಲ, ನಮ್ಮ ಪಾಲಿನ ದೇವಭಾಷೆ. ನಮ್ಮ ಮನಸು-ಕನಸುಗಳನ್ನು ಅರಳಿಸಿ ಭವಿಷ್ಯದ ರೆಕ್ಕೆಕೊಟ್ಟು ಹಾರಲು ಶಕ್ತಿ ತುಂಬುವ ಜೀವಭಾಷೆ ಎಂದಿದ್ದಾರೆ.
ಕನ್ನಡಿಗರ ಮನೆ-ಮನದಲ್ಲೂ ಕನ್ನಡ ಬೆಳಗುತ್ತಿದೆ, ನಿಜ. ಆದರೆ, ನಮ್ಮ ಕಣ್ಮಣಿಯಾಗಿದ್ದ ಅಕ್ಕರೆಯ ಅಪ್ಪು, ಅಣ್ಣಾವ್ರ ಮುದ್ದಿನ ಕುಡಿ ಪುನೀತ್ ರಾಜಕುಮಾರ್ ಅವರು ಕನ್ನಡ ಹಬ್ಬಕ್ಕೆ ಮುನ್ನ ನಮ್ಮನ್ನಗಲಿದ್ದಾರೆ. ನಮ್ಮೊಳಗೆ ಕನ್ನಡ ದೀಪವನ್ನು ಬೆಳಗುತ್ತಲೇ ಕಳೆದುಹೋದ ಯುವರತ್ನನ ಆದರ್ಶಗಳಿಗೆ ಅಗ್ರಪೀಠ ಹಾಕಿ ನಮಿಸೋಣ. ಆ ಮೂಲಕ ಪುನೀತರಾಗೋಣ ಎಂದು ಹೇಳಿದ್ದಾರೆ.