ಬೆಂಗಳೂರು: ರಾಜ್ಯದಲ್ಲಿ ಬರಗಾಲದಿಂದ ರೈತರ ತತ್ತರಿಸಿದ್ದು, ಕೃಷಿಕರ ನೆರವಿಗೆ ಸರ್ಕಾರ ಧಾವಿಸಿಲ್ಲ, ಉದ್ಯಮಿಗಳು ರಾಜ್ಯದಿಂದ ಕಾಲ್ಕೀಳುತ್ತಿವೆ, ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಕೇವಲ ತಮ್ಮ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳುವ ರಾಜಕಾರಣದಲ್ಲಿ ಮುಳುಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ನಗರದ ಹೊರವಲಯದ ರಮಾಡ ರೆಸಾರ್ಟ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಿಂದ ಹೂಡಿಕೆದಾರರು ಹೊರರಾಜ್ಯಗಳಿಗೆ ಹೋಗುತ್ತಿದ್ದಾರೆ. ಈ ಸರ್ಕಾರ ಬಂದ ಕೂಡಲೇ ಬಂಡವಾಳ ಹೂಡಿಕೆದಾರರು ಹೊರಗೆ ಹೋಗುವಂತ ವಾತಾವರಣ ಸೃಷ್ಟಿ ಮಾಡಿದ್ದಾರೆ. ನಮ್ಮ ಕಾಲದಲ್ಲಿ ಹೂಡಿಕೆ ಮಾಡಲು ಬಂದವರು ಈಗ ವಾಪಸ್ ಹೋಗುತ್ತಿದ್ದಾರೆ. ಬಂಡವಾಳ ಹೂಡಿಕೆ ಆಕರ್ಷಣೆ ಆಗುತ್ತಿಲ್ಲ. ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಶೇ. 30ರಷ್ಟು ಕಡಿತ ಆಗಿದೆ. ಮುಖ್ಯಮಂತ್ರಿಗಳು ತಮ್ಮ ಸ್ಥಾನ ಉಳಿಸಿಕೊಳ್ಳುವ ರಾಜಕಾರಣದಲ್ಲಿ ಮಗ್ನರಾಗಿದ್ದಾರೆ. ರೈತರಿಗೆ ಬರ ಪರಿಹಾರ ನೀಡಿಲ್ಲ. ಅಭಿವೃದ್ಧಿಗೆ ನಯಾ ಪೈಸೆ ಹಣ ಬಿಡುಗಡೆ ಆಗಿಲ್ಲ. ಬಂಡವಾಳ ಹೂಡಿಕೆಗೆ ಯಾರೂ ಬರುತ್ತಿಲ್ಲ. ಸಿಎಂ ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಎಂದರು.
ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ರಚಿಸಿರುವ ಸಮಿತಿಗೆ ಕ್ಯಾಬಿನೆಟ್ ದರ್ಜೆ ನೀಡುವ ವಿಚಾರಕ್ಕೆ ಪ್ರತಿಕ್ರಿಯಸಿದ ಅವರು, ಸಿಎಂ ಸಲಹೆಗಾರರನ್ನು ತೆಗೆದುಕೊಳ್ಳಬೇಕು ನಿಜ. ಅದು ಸದಸ್ಯರ ಶೇ 15ರಷ್ಟನ್ನು ಮೀರದಂತೆ ಕ್ಯಾಬಿನೆಟ್ ದರ್ಜೆ ಕೊಡಬೇಕು. ಅದಕ್ಕಿಂತ ಹೆಚ್ಚು ಕ್ಯಾಬಿನೆಟ್ ದರ್ಜೆ ಕೊಡುವಂತಿಲ್ಲ. ಆ ರೀತಿ ಮಾಡಬಾರದು ಎಂದು ಆದೇಶ ಇದೆ. ಆದರೂ ಸಂವಿಧಾನ ವಿರುದ್ಧ ಮಾಡಿ ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆಗಳ ಲಾಭ ಪಡೆದವರಲ್ಲಿ ಮುಸ್ಲಿಂ ಮಹಿಳೆಯರು ಹೆಚ್ಚಿದ್ದಾರೆ. ಮುದ್ರಾ, ಆಯುಷ್ಮಾನ್, ಪ್ರಧಾನಮಂತ್ರಿ ಆವಾಸ್ ಯೋಜನೆ ಸೇರಿದಂತೆ ಹಲವು ಯೋಜನೆಯ ಫಲಾನುಭವಿಗಳಾಗಿದ್ದು, ಅವರು ಸುಕ್ರಿಯಾ ಮೋದಿ ಭಾಯ್ ಜಾನ್ ಕಾರ್ಯಕ್ರಮ ಮಾಡುತ್ತಿದ್ದು, ಅದು ಅತ್ಯಂತ ಯಶಸ್ವಿಯಾಗಲಿದೆ. ಇದು ಬದಲಾವಣೆ ಸಂಕೇತವಾಗಿದೆ ಎಂದರು.