ಬೆಂಗಳೂರು:ಎಂಎಲ್‌ಎ, ಎಂಪಿ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಸಾಯುವವರಿಗೂ ಪಿಂಚಣಿ ನೀಡಲಾಗುತ್ತದೆ. ಆದರೆ, ದೇಶಕ್ಕಾಗಿ ಪ್ರಾಣ ನೀಡಿದ ಅದೆಷ್ಟೋ ಅರೆಸೇನಾ ಯೋಧರಿಗೆ ಈವರೆಗೂ ಪಿಂಚಣಿ ಸೌಕರ್ಯ ನೀಡಲಾಗುತ್ತಿಲ್ಲ ಎಂದು ಸಿಪಿಎಂಎಫ್ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಹನುಮಂತರಾಜು ಬೇಸರ ಹೊರಹಾಕಿದರು.
ಕೇಂದ್ರೀಯ ಅರೆಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮಂಗಳವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ಸಾಂವಿಧಾನಿಕ ಹಕ್ಕಿಗಾಗಿ ಹೋರಾಟದಲ್ಲಿ ಮಾತನಾಡಿದ ಅವರು, ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಹೋರಾಟ ನೆಡೆಸಲಾಗುತ್ತಿದೆ. ರಾಜ್ಯಾದ್ಯಂತ ಸುಮಾರು 2,500 ಸಾವಿರ ಮಾಜಿ ಯೋಧರು ಈ ಹೋರಾಟದಲ್ಲಿ ಪಾಲ್ಕೊಂಡಿದ್ದಾರೆ.
150ಕ್ಕೂ ಹೆಚ್ಚು ಯೋಧರು ಪ್ರತಿ ತಾಲೂಕಿನಿಂದ ಪಾಲ್ಗೊಂಡಿದ್ದಾರೆ. 2004ರಿಂದ ಮಾಜಿ ಯೋಧರಿಗೆ ಸರ್ಕಾರ ಪಿಂಚಣಿ ನಿಲ್ಲಿಸಿದ್ದು, ಸರ್ಕಾರದ ಈ ಧೋರಣೆ ಖಂಡಿಸಿ ನಾವು ಬೀದಿಗಿಳಿದು ಹೋರಾಟ ಮಾಡುವಂತಾಗಿದೆ ಎಂದರು. ಈ ಹಿಂದೆ ಯೋಧರು ಮತ್ತು ಅರೆಸೇನಾ ಯೋಧರ ಕಲ್ಯಾಣ ಸಮಿತಿ ಒಟ್ಟಿಗೆ ರಚಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಮಗೆ ನ್ಯಾಯ ಒದಗಿಸಿದ್ದರು.
ಆದರೆ, ಆನಂತರ ಅಧಿಕಾರಕ್ಕೆ ಬಂದ ಕುಮಾರಸ್ವಾಮಿ ಕಿತ್ತು ಹಾಕಿದ್ದರು. ಹೀಗಾಗಿ ನಮಗೆಲ್ಲಾ ತುಂಬಾ ಆನ್ಯಾಯವಾಗಿದ್ದು, ಈ ಅನ್ಯಾಯದ ಬಗ್ಗೆ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಆದರೆ, ದೇಶಕ್ಕಾಗಿ ಪ್ರಾಣ ನೀಡಿದ ಅದೆಷ್ಟೋ ಅರೆಸೇನಾ ಯೋಧರಿಗೆ ಮಾತ್ರ ಈವರೆಗೂ ಪಿಂಚಣಿ ಸೌಕರ್ಯ ನೀಡುತ್ತಿಲ್ಲ ಎಂದು ದೂರಿದರು.