ಬೆಂಗಳೂರು: ಮುಂದಿನವಾರ ಡಿ. 19ರಿಂದ ಬೆಳಗಾವಿಯಲ್ಲಿ ಆರಂಭವಾಗುವ ವಿಧಾನಸಭೆಯ ಚಳಿಗಾಲದ ಅಧಿವೇಶನದೊಳಗೆ ಸಚಿವ ಸಂಪುಟ ವಿಸ್ತರಣೆ ನಡೆಸಿ ತಮ್ಮನ್ನು ಕ್ಯಾಬಿನೆಟ್ಗೆ ಸೇರಿಸಿಕೊಳ್ಳಲೇಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮಾಜಿ ಸಚಿವರಾದ ರಮೇಶ ಜಾರಕಿಹೊಳಿ ಮತ್ತು ಬಿಜೆಪಿ ಹಿರಿಯ ಮುಖಂಡರಾದ ಕೆ ಎಸ್ ಈಶ್ವರಪ್ಪ ಬಿಗಿ ಪಟ್ಟು ಹಿಡಿದಿದ್ದಾರೆ.
ಒಂದೊಮ್ಮೆ ಅಧಿವೇಶನದ ಮುನ್ನ ಕ್ಯಾಬಿನೆಟ್ ವಿಸ್ತರಣೆ ನಡೆಸದಿದ್ದರೆ ಬೆಳಗಾವಿ ಅಧಿವೇಶನಕ್ಕೆ ಬಹಿಷ್ಕಾರ ಹಾಕಲಾಗುವುದು ಎಂದು ಇಬ್ಬರೂ ಮುಖಂಡರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕಠಿಣವಾದ ಸಂದೇಶ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಸಚಿವ ಸಂಪುಟ ವಿಸ್ತರಣೆ ಸಂಬಂಧ ಇತ್ತೀಚೆಗೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ ಮಾಜಿ ಸಚಿವ ರಮೇಶ ಜಾರಕಿಹೊಳಿ ಮತ್ತು ಈಶ್ವರಪ್ಪ ಇಬ್ಬರಿಗೂ ಪ್ರತ್ಯೇಕ ಪ್ರಕರಣದಲ್ಲಿ ಎಸ್ಐಟಿ ಕ್ಲೀನ್ಚಿಟ್ ನೀಡಿ ಹಲವಾರು ತಿಂಗಳುಗಳೇ ಕಳೆದಿವೆ. ಆದರೂ ಇದುವರೆಗೂ ಸಂಪುಟಕ್ಕೆ ಸೇರಿಸಿಕೊಳ್ಳದೇ ವಿಳಂಬ ಮಾಡುತ್ತಿರುವುದಕ್ಕೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಗುಡ್ ಬೈ ಹೇಳುವ ಮುನ್ಸೂಚನೆ:ಬೆಳಗಾವಿ ಅಧಿವೇಶನಕ್ಕೆ ಮುಂಚೆ ತಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳದಿದ್ದರೆ ''ತಮ್ಮ ದಾರಿ ತಾವು ನೋಡಿಕೊಳ್ಳುವುದಾಗಿಯೂ'' ರಮೇಶ್ ಜಾರಕಿಹೊಳಿ ಸಿಎಂಗೆ ಎಚ್ಚರಿಕೆ ನೀಡಿದ್ದಾರೆಂದು ಹೇಳಲಾಗಿದೆ. ಸಚಿವ ಸ್ಥಾನ ನೀಡದಿದ್ದರೆ ಪರೋಕ್ಷವಾಗಿ ಬಿಜೆಪಿಗೆ ಗುಡ್ ಬೈ ಹೇಳುವ ಮುನ್ಸೂಚನೆಯನ್ನು ರಮೇಶ ಜಾರಕೊಹೊಳಿ ನೀಡಿದ್ದು, ಅಧಿವೇಶನಕ್ಕೆ ಗೈರಾಗುವ ಇಂಗಿತವನ್ನೂ ಸಿಎಂ ಬಳಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಕೂಡ ಮುಖ್ಯಮಂತ್ರಿ ಭೇಟಿ ಮಾಡಿ ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ತಮ್ಮ ಪಾತ್ರ ಇಲ್ಲ ಎಂದು ಎಸ್ಐಟಿ ಕ್ಲೀನ್ಚಿಟ್ ನೀಡಿದ ಬಳಿಕವೂ ಸಚಿವ ಸಂಪುಟ ವಿಸ್ತರಣೆ ನಡೆಸದೇ ಅನಗತ್ಯ ವಿಳಂಬ ಮಾಡುತ್ತಿರುವ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಕಳಂಕದ ಆರೋಪದ ಮೇಲೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ತಮಗೆ ತನಿಖಾ ಸಂಸ್ಥೆ ಕ್ಲೀನ್ಚಿಟ್ ನೀಡಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ ಬಳಿಕವೂ ಸಚಿವರನ್ನಾಗಿ ನೇಮಕ ಮಾಡದಿದ್ದರೆ ತಮ್ಮ ಮೇಲಿನ ಕಳಂಕ ಆರೋಪ ನಿವಾರಿಸಿಕೊಳ್ಳುವುದು ಹೇಗೆ ...? ಎಂದು ಪ್ರಶ್ನಿಸಿದ್ದಾರೆ ಎಂದು ಗೊತ್ತಾಗಿದೆ. ಚುನಾವಣೆ ವೇಳೆ ಜನತೆ ಹತ್ತಿರ ಮತ ನೀಡುವಂತೆ ಯಾವ ಮುಖವಿಟ್ಟುಕೊಂಡು ಪ್ರಚಾರ ನಡೆಸಬೇಕು..?. ವಿರೋಧ ಪಕ್ಷಗಳ ಟೀಕೆಗೆ ಏನು ಉತ್ತರ ನೀಡಬೇಕೆಂದು ಇಬ್ಬರೂ ಮುಖಂಡರು ಸಿಎಂ ಬಳಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.
ಅಮಿತ್ ಶಾ ಜೊತೆಗೂ ಚರ್ಚೆ: ಇಬ್ಬರೂ ಮುಖಂಡರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಾಧಾನ ಪಡಿಸಿ ಈ ಬಾರಿ ದೆಹಲಿ ಭೇಟಿ ವೇಳೆ ಬಿಜೆಪಿ ಹೈಕಮಾಂಡ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಳಿ ಚರ್ಚಿಸಿ ಸಚಿವ ಸಂಪುಟಕ್ಕೆ ತಮ್ಮನ್ನು ಸೇರಿಸಿಕೊಳ್ಳಲು ಗ್ರೀನ್ ಸಿಗ್ನಲ್ ಪಡೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಇಂದು ಬುಧವಾರ ಬೆಳಗಾವಿ ಗಡಿ ವಿವಾದದ ಬಗ್ಗೆ ಅಮಿತ್ ಶಾ ಕರೆದಿರುವ ಕರ್ನಾಟಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ತೆರಳಿದ ಸಂದರ್ಭದಲ್ಲಿ ಸಚಿವ ಸಂಪುಟ ವಿಸ್ತರಣೆ ಕುರಿತು ಸಮಾಲೋಚಿಸಿ ಬಿಜೆಪಿ ಹೈಕಮಾಂಡ್ ಒಪ್ಪಿಗೆ ಪಡೆದು ಬರುವುದಾಗಿ ಭರವಸೆ ನೀಡಿದ್ದಾರೆ. ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲು ಸಿದ್ಧರಾಗಿರುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.
ಸಚಿವ ಸಂಪುಟ ವಿಸ್ತರಣೆ ನಡೆಯದಿದ್ದರೆ ಅಧಿವೆಶನಕ್ಕೆ ಗೈರು: ಸಚಿವ ಸಂಪುಟಕ್ಕೆ ತಮ್ಮನ್ನು ಸೇರಿಸಿಕೊಳ್ಳದಿರುವುದನ್ನು ಪ್ರತಿಭಟಿಸಿ ಮಾಜಿ ಸಚಿವರಾದ ರಮೇಶ ಜಾರಕಿಹೊಳಿ ಮತ್ತು ಕೆ ಎಸ್ ಈಶ್ವರಪ್ಪನವರು ಕಳೆದ ಅಕ್ಟೋಬರ್ನಲ್ಲಿ ನಡೆದ ಮಳೆಗಾಲದ ಅಧಿವೇಶನಕ್ಕೆ ಹಾಜರಾಗದೇ ಕಾರ್ಯಕಲಾಪದಿಂದ ದೂರುಳಿದು ಅಸಮಾಧಾನದ ಸಂದೇಶವನ್ನು ಪಕ್ಷದ ಮುಖಂಡರಿಗೆ ರವಾನಿಸಿದ್ದರು. ಈ ಬಾರಿಯೂ ಸಚಿವ ಸಂಪುಟ ವಿಸ್ತರಣೆ ನಡೆಯದಿದ್ದರೆ ಬೆಳಗಾವಿ ಅಧಿವೆಶನಕ್ಕೆ ಗೈರಾಗುವ ಸಾಧ್ಯತೆಗಳು ಹೆಚ್ಚಾಗಿವೆ.
ಇದನ್ನೂ ಓದಿ:ಈ ತಿಂಗಳಿಂದಲೇ ಚುನಾವಣಾ ಪ್ರಕ್ರಿಯೆಗಳು ಆರಂಭ: ದಿನೇಶ್ ಗುಂಡೂರಾವ್