ಬೆಂಗಳೂರು: ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ನಡೆಯುತ್ತಿರುವ ಪಾದಯಾತ್ರೆಯಲ್ಲಿ ಸರ್ವ ಜನ, ಸರ್ವಪಕ್ಷಗಳಿಗೆ ಹೆಜ್ಜೆ ಹಾಕಲು ಕಾಂಗ್ರೆಸ್ ಅವಕಾಶ ಕೊಟ್ಟಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ತಿಳಿಸಿದರು.
ನಗರದ ಬಿಟಿಎಂ ಲೇಔಟ್ ಬಿಬಿಎಂಪಿ ಕ್ರೀಡಾಂಗಣದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿ, ರಾಜ್ಯದ ಮೂಲೆಮೂಲೆಯಿಂದ ಜನರು ಬರುತ್ತಿದ್ದಾರೆ. ನಾಳೆ (ಗುರುವಾರ) ಅಂತಿಮ ದಿನದ ಪಾದಯಾತ್ರೆ ಇದ್ದು, ನ್ಯಾಷನಲ್ ಕಾಲೇಜಿನಲ್ಲಿ ಮುಕ್ತಾಯವಾಗಲಿದೆ. ಎಲ್ಲ ವರ್ಗದ ಜನರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಪಕ್ಷಾತೀತವಾಗಿ ಹೆಜ್ಜೆ ಹಾಕಿದ್ದಾರೆ ಎಂದರು.
ಅಂತಿಮ ದಿನದ ಪಾದಯಾತ್ರೆಯಲ್ಲಿನ ಹೆಜ್ಜೆಗೆ ಬಹಳ ಬೆಲೆ. ಇದಕ್ಕೆ ಹೆಜ್ಜೆ ಹಾಕಿದರೆ ಇತಿಹಾಸ ಪುಟ ಸೇರುತ್ತೆ. ಇದರ ನೇತೃತ್ವವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ, ಪರಿಷತ್ ಪ್ರತಿಪಕ್ಷ ನಾಯಕ ಹರಿಪ್ರಸಾದ, ಬಿ.ಕೆ.ಶ್ರೀನಿವಾಸ್ ವಹಿಸಿಕೊಳ್ಳುತ್ತಾರೆ. ಎಲ್ಲ ಜನರು ಭಾಗವಹಿಸಬೇಕು. ಎಲ್ಲರಿಗೂ ಒಂದು ಭಾಗ್ಯ ಸಿಗಲಿದೆ. ಹೋರಾಟದಲ್ಲಿ ಎಲ್ಲ ಸಂಘಟನೆಗಳು ಭಾಗವಹಿಸುವ ಮೂಲಕ ಪಾದಯಾತ್ರೆ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.