ಕರ್ನಾಟಕ

karnataka

By

Published : Apr 20, 2021, 11:38 AM IST

ETV Bharat / state

ಪ್ರತಿ ಕೊರೊನಾ ಸಾವು ಕೂಡ ಸರ್ಕಾರಿ ಪ್ರಾಯೋಜಿತ ಕೊಲೆ: ಎಸ್.ಆರ್. ಪಾಟೀಲ್ ಆರೋಪ

ಕೊರೊನಾ ನಿಯಂತ್ರಣ ಸಂಬಂಧ ಬಿಜೆಪಿ ಸರ್ಕಾರ ಇದುವರೆಗೂ ತೆಗೆದುಕೊಂಡಿರುವ ಯಾವ ಕ್ರಮಗಳೂ ಸಮರ್ಪಕವಾಗಿಲ್ಲ. ಪರಿಸ್ಥಿತಿ ನಿರ್ವಹಣೆಯಲ್ಲಿ ಸರ್ಕಾರ ಖಚಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಂಪೂರ್ಣ ವಿಫಲವಾಗಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ದೂರಿದ್ದಾರೆ.

S.R patil
ಎಸ್.ಆರ್. ಪಾಟೀಲ್

ಬೆಂಗಳೂರು:ಕೊರೊನಾ ರೋಗಿಗಳಿಗೆ ಸೂಕ್ತ ಔಷಧೋಪಚಾರ ಒದಗಿಸದೆ ಸರ್ಕಾರ ಜನರ ಸಾವಿಗೆ ಕಾರಣವಾಗುತ್ತಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ರಾಜ್ಯದಲ್ಲಿ ಕೊರೊನಾದಿಂದ ಸಂಭವಿಸುತ್ತಿರುವ ಪ್ರತಿ ಸಾವೂ ಕೂಡ ಸರ್ಕಾರಿ ಪ್ರಾಯೋಜಿತ ಕೊಲೆ. ಆಸ್ಪತ್ರೆಗಳಲ್ಲಿ ರೆಮಿ ಡೆಸಿವರ್ ಇಲ್ಲ, ಬೆಡ್ ಇಲ್ಲ, ಆ್ಯಕ್ಸಿಜನ್ ಇಲ್ಲ, ವೆಂಟಿಲೇಟರ್ ಇಲ್ಲ. ವ್ಯಾಕ್ಸಿನ್ ಕೊರತೆಯ ಸ್ಥಿತಿ ನಿರ್ಮಾಣವಾಗಿದೆ. ಜನರಿಗೆ ಕನಿಷ್ಠ ಚಿಕಿತ್ಸೆಯನ್ನೂ ನೀಡಲಾಗದ ಈ ಸರ್ಕಾರ ಯಾವ ಪುರುಷಾರ್ಥಕ್ಕೆ ಬೇಕು.? ಕೋವಿಡ್ ನಿರ್ವಹಣೆಯಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಕೊರೊನಾ 2ನೇ ಅಲೆ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ ನಂತರವೂ ಸರ್ಕಾರ ಎಚ್ಚೆತ್ತುಕೊಳ್ಳದ ಪರಿಣಾಮ ಇಂದು ರಾಜ್ಯದ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ, ಆ್ಯಕ್ಸಿಜನ್ ಇಲ್ಲದೇ ಜನ ಸಾಯುವಂತಹ ಪರಿಸ್ಥಿತಿ ನಿರ್ಮಾಣಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿದ್ದಾರೆ.

ಮೇ ತಿಂಗಳ ಅಂತ್ಯದ ವೇಳೆಗೆ ರಾಜ್ಯದಲ್ಲಿ ಕೊರೊನಾ ವೈರಸ್​ನ ತೀವ್ರತೆ ಇನ್ನಷ್ಟು ಹೆಚ್ಚಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಮುಂದೆ ಎದುರಾಗಲಿರುವ ಭೀಕರ ಪರಿಸ್ಥಿತಿಗೆ ಸಜ್ಜಾಗಬೇಕಾದ ಸರ್ಕಾರ ಆಸ್ಪತ್ರೆಗಳಲ್ಲಿ ಬೆಡ್ ಹೆಚ್ಚಳ, ಆ್ಯಕ್ಸಿಜನ್ , ವೆಂಟಿಲೇಟರ್ ವ್ಯವಸ್ಥೆ ಮಾಡುವುದು ಬಿಟ್ಟು ಜನರ ಜೀವಗಳ ಜತೆ ಚೆಲ್ಲಾಟವಾಡುತ್ತಿದೆ. ಬೆಂಗಳೂರು ನಗರದಲ್ಲಂತೂ ಪರಿಸ್ಥಿತಿ ಕೈ ಮೀರಿ ಹೋಗಿದೆ. ರೋಗಿಗಳು ಬೆಡ್ ಇಲ್ಲದೇ ಸಾಯುತ್ತಿದ್ದಾರೆ. ಇಷ್ಟಾದರೂ ಸರ್ಕಾರ ಏನೂ ಆಗೇ ಇಲ್ಲ, ಆ್ಯಕ್ಸಿಜನ್ ಕೊರತೆ ಇಲ್ಲ ಎಂದು ಭಂಡತನದ ಮಾತುಗಳನ್ನಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಉತ್ತರ ನೀಡದಿರುವುದು ದುರಂತ:

ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣದ ಬಗ್ಗೆ ಸಿಎಂ ಬಿಎಸ್​ವೈ ಅವರ ನೇತೃತ್ವದಲ್ಲಿ ನಿನ್ನೆ ವಿಧಾನ ಸೌಧದಲ್ಲಿ ಜನಪ್ರತಿನಿಧಿಗಳ ಸಭೆ ನಡೆಸಲಾಗಿದೆ. 3 ಗಂಟೆಗಳ ಕಾಲ ಸಭೆ ನಡೆಸಿ ಯಾವುದೇ ನಿರ್ಧಾರಕ್ಕೆ ಬರಲಾಗದೇ ಸಭೆ ಮುಗಿಸಲಾಗಿದೆ. ಕೇವಲ ನೆಪ ಮಾತ್ರಕ್ಕೆ ಪ್ರತಿಪಕ್ಷದವರನ್ನು ಕರೆದು ಸಭೆ ಮಾಡಲಾಗಿದೆ. ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರತಿನಿಧಿಗಳು ಕೇಳಿದ ಯಾವುದೇ ಪ್ರಶ್ನೆಗಳಿಗೆ ಸರ್ಕಾರದಿಂದ ಉತ್ತರ ಸಿಕ್ಕಿಲ್ಲ. ಬೆಡ್ ವ್ಯವಸ್ಥೆ, ರೆಮ್ ಡೆಸಿವರ್ ಲಭ್ಯತೆ, ಐಸಿಯು, ವೆಂಟಿಲೇಟರ್ ಲಭ್ಯತೆ ಬಗ್ಗೆ ಸರ್ಕಾರದ ಯಾವೊಬ್ಬ ಪ್ರತಿನಿಧಿಯೂ ಸಮರ್ಪಕ ಉತ್ತರ ನೀಡದಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details