ಬೆಂಗಳೂರು: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಬುಧವಾರ ಎರಡು ರಾಜ್ಯದ ಮುಖ್ಯಮಂತ್ರಿಗಳ ಜೊತೆ ಮಹತ್ವದ ಸಭೆ ನಡೆಯಲಿದೆ. ಉಭಯ ರಾಜ್ಯಗಳ ಸಂಸದರ ನಿಯೋಗದ ಮನವಿ ಆಲಿಸಿದ್ದ ಅಮಿತ್ ಶಾ, ಉಭಯ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಲ್ಪಿಸುವ ಪ್ರಯತ್ನ ನಡೆಸಲಿದ್ದಾರೆ.
ಅಮಿತ್ ಶಾಗೆ ದೂರು: ಸುಪ್ರೀಂಕೋರ್ಟ್ ಮೆಟ್ಟಿಲೇರುವ ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ವಿವಾದ ಇದೀಗ ಕೋರ್ಟ್ನಲ್ಲಿ ವಿಚಾರಣೆ ವಿಳಂಬವಾಗುತ್ತಿರುವ ಹಿನ್ನೆಲೆ ಕೇಂದ್ರದ ಅಂಗಳಕ್ಕೆ ಕಾಲಿಟ್ಟಿದೆ. ಮಹಾರಾಷ್ಟ್ರ ಸಂಸದರ ನಿಯೋಗ ಕರ್ನಾಟಕದ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ದೂರು ನೀಡಿದೆ. ಇದಕ್ಕೆ ಪ್ರತಿಯಾಗಿ ಕರ್ನಾಟಕದ ಪರ ವಸ್ತುಸ್ಥಿತಿ ವಿವರಗಳೊಂದಿಗೆ ರಾಜ್ಯದ ಸಂಸದರ ನಿಯೋಗ ಅಮಿತ್ ಶಾಗೆ ಸಮಗ್ರ ಮಾಹಿತಿ ಒದಗಿಸಿತ್ತು.
ಉಭಯ ರಾಜ್ಯಗಳ ಸಂಸದರ ನಿಯೋಗದ ಮನವಿ ಆಲಿಸಿದ್ದ ಅಮಿತ್ ಶಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಭೆ ನಡೆಸಲಿದ್ದಾರೆ. ನವದೆಹಲಿಯ ಕೃಷ್ಣ ಮೆನನ್ ಮಾರ್ಗದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ನಿವಾಸದಲ್ಲಿ ಸಂಜೆ 7 ಗಂಟೆಗೆ ಮುಖ್ಯಮಂತ್ರಿಗಳ ಸಭೆ ಕರೆಯಲಾಗಿದೆ. ಗಡಿ ವಿವಾದದ ಕುರಿತು ರಾಜ್ಯದ ಪರ ಸವಿಸ್ತಾರವಾದ ಮಾಹಿತಿ ನೀಡಲಿದ್ದಾರೆ. ಕೋರ್ಟ್ ತೀರ್ಪಿನ ದಾಖಲೆ, ಮಹಾಜನ್ ವರದಿಯ ಅಂಶಗಳ ದಾಖಲೆ ಒದಗಿಸಲಿದ್ದಾರೆ.
ಮಹಾರಾಷ್ಟ್ರ ಸರ್ಕಾರದ ವಿರುದ್ಧ ದೂರು ಸಾಧ್ಯತೆ: ಕರ್ನಾಟಕದ ಕೆಲ ನಿಲುವುಗಳಿಂದ ಗಡಿ ಜಿಲ್ಲೆಯಲ್ಲಿರುವ ಮರಾಠಿ ಭಾಷೆ ಜನರ ಭಾವನೆಗಳಿಗೆ ಧಕ್ಕೆಯಾಗಿದೆ. ರಾಜ್ಯಗಳ ಪುನಾರಚನೆ ಬಳಿಕ ಬೆಳಗಾವಿ ಸೇರಿ 865 ಗ್ರಾಮಗಳು ನಮಗೆ ಸೇರಬೇಕು ಎಂದು ಮಹಾರಾಷ್ಟ್ರ ತಕರಾರು ಎತ್ತಿರುವುದಕ್ಕೆ ಆಕ್ಷೇಪ ಸಲ್ಲಿಸಲಿದ್ದಾರೆ. ಗಡಿ ವಿವಾದ ಮುಗಿದ ಅಧ್ಯಾಯ ಎನ್ನುವ ಕರ್ನಾಟಕದ ವಾದವನ್ನು ಮತ್ತೊಮ್ಮೆ ಒತ್ತಿ ಹೇಳಲಿದ್ದಾರೆ. ಇದರ ಜೊತೆ ಮಹಾರಾಷ್ಟ್ರ ಸರ್ಕಾರದ ವಿರುದ್ಧ ದೂರು ನೀಡುವ ಸಾಧ್ಯತೆ ಇದೆ.