ಕರ್ನಾಟಕ

karnataka

ETV Bharat / state

ಸರ್ಕಾರ ಬದಲಾದರೂ ಬದಲಾಗದ ಹೆಚ್​ ವಿಶ್ವನಾಥ ಸ್ಥಾನ: ಆಗಲೂ ಆಡಳಿತ ಪಕ್ಷದ ಸಾಲು ಈಗಲೂ ಆಡಳಿತ ಪಕ್ಷದ ಸಾಲಿನಲ್ಲೇ ಹಳ್ಳಿಹಕ್ಕಿ - ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ರತ್ನ ವಿ ಕುಶನೂರ

ಬಿಜೆಪಿ ಸರ್ಕಾರವಿದ್ದಾಗಲೂ ಆಡಳಿತ ಪಕ್ಷದ ಸಾಲಿನಲ್ಲಿದ್ದ ಹೆಚ್​ ವಿಶ್ವನಾಥ್ ಅವರು ಕಾಂಗ್ರೆಸ್​ ಅಧಿಕಾರಕ್ಕೆ ಬಂದಿದ್ದರೂ ಆಡಳಿತ ಪಕ್ಷದಲ್ಲಿಯೇ ಇದ್ದಾರೆ.

ವಿಧಾನ ಪರಿಷತ್
ವಿಧಾನ ಪರಿಷತ್

By

Published : Jul 3, 2023, 3:24 PM IST

ಅಗಲಿದ ಗಣ್ಯರಿಗೆ ಸಂತಾಪ

ಬೆಂಗಳೂರು:ಸರ್ಕಾರ ಬದಲಾಗಿ ಮೊದಲ ಅಧಿವೇಶನ ಆರಂಭಗೊಂಡಿದ್ದು, ಆಡಳಿತ ಪಕ್ಷ ಪ್ರತಿಪಕ್ಷದ ಸಾಲಿನಲ್ಲಿ ಪ್ರತಿಪಕ್ಷ ಆಡಳಿತ ಪಕ್ಷದ ಸಾಲಿಗೆ ಬಂದರೆ ಹಿರಿಯ ಸದಸ್ಯ ಹೆಚ್ ವಿಶ್ವನಾಥ್ ಸ್ಥಾನ ಮಾತ್ರ ಬದಲಾಗಿಲ್ಲ. ಬಿಜೆಪಿ ಸರ್ಕಾರ ಇದ್ದಾಗಲೂ ಆಡಳಿತ ಪಕ್ಷದ ಸಾಲಿನಲ್ಲಿ ಇದ್ದ ಅವರು ಇದೀಗ ಕಾಂಗ್ರೆಸ್ ಸರ್ಕಾರ ಬಂದಿದ್ದರೂ ಆಡಳಿತ ಪಕ್ಷದ ಸಾಲಿನಲ್ಲೇ ಆಸೀನರಾಗಿದ್ದಾರೆ.

ಬಿಜೆಪಿ ಸರ್ಕಾರದ ವೇಳೆ ನಾಮ ನಿರ್ದೇಶನಗೊಂಡಿದ್ದ ಹೆಚ್ ವಿಶ್ವನಾಥ್ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಪಕ್ಷದ ಜೊತೆ ಮುನಿಸಿಕೊಂಡು ಅಂತರ ಕಾಯ್ದುಕೊಂಡಿದ್ದರು. ಆಡಳಿಯ ಪಕ್ಷದ ಸಾಲಿನಲ್ಲಿದ್ದುಕೊಂಡೇ ಸರ್ಕಾರವನ್ನು ಟೀಕಿಸಿ ಆಡಳಿತ ಪಕ್ಷವನ್ನು ಮುಜುಗರಕ್ಕೆ ಸಿಲುಕುವಂತೆ ಮಾಡುತ್ತಿದ್ದರು. ಹಳ್ಳಿ ಹಕ್ಕಿಯ ಕುಟಕು ಪ್ರತಿ ಅಧಿವೇಶನದಲ್ಲೂ ಸಾಮಾನ್ಯವಾಗಿತ್ತು.

ಚುನಾವಣೆ ಸಮೀಪ ಬರುತ್ತಿದ್ದಂತೆ ಅಧಿಕೃತವಾಗಿ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದ ಹೆಚ್. ವಿಶ್ವನಾಥ್ ಬಿಜೆಪಿ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸಿದ್ದರು. ಈ ಹಿಂದೆ ಸಿದ್ದರಾಮಯ್ಯ ಅವರನ್ನು ಟೀಕಿಸಿದ್ದ ವಿಶ್ವನಾಥ್ ಮತ್ತೆ ಅದೇ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದರು. ಇದೀಗ ಸಹಜವಾಗಿಯೇ ಕಾಂಗ್ರೆಸ್ ಸಖ್ಯದ ಹಿನ್ನೆಲೆಯಲ್ಲಿ ಆಡಳಿತ ಪಕ್ಷದ ಸಾಲಿನಲ್ಲೇ ಆಸನ ಪಡೆದುಕೊಂಡು ಮತ್ತೆ ಆಡಳಿತ ಪಕ್ಷದ ಜೊತೆಯಲ್ಲಿಯೇ ಇದ್ದಾರೆ.

ವಿಶ್ವನಾಥ್ ಅವರು ನಾಮ ನಿರ್ದೇಶಿತ ಸದಸ್ಯರಾದ ಕಾರಣ ಅವರ ಮೇಲೆ ಪಕ್ಷದ ಹಿಡಿತ ಇರುವುದಿಲ್ಲ. ಪಕ್ಷಾಂತರ ನಿಷೇಧ ಕಾಯ್ದೆಯ ಅಸ್ತ್ರ ಅನ್ವಯವಾಗಲ್ಲ. ಹಾಗಾಗಿ ಅವರು ಕಾಂಗ್ರೆಸ್ ಜೊತೆ ಬಹಿರಂಗವಾಗಿಯೇ ಗುರುತಿಸಿಕೊಂಡು ಈಗ ಕಾಂಗ್ರೆಸ್ ಸದಸ್ಯರ ಜೊತೆಯಲ್ಲಿಯೇ ಆಸೀನರಾಗಿ ಕಲಾಪದಲ್ಲಿ ಭಾಗಿಯಾಗಿದ್ದಾರೆ.

ಅಗಲಿದ ಗಣ್ಯರಿಗೆ ಸಂತಾಪ: ರಾಜ್ಯಪಾಲರು ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಿದ ನಂತರ ವಿಧಾನ ಪರಿಷತ್ ಕಲಾಪ ಆರಂಭವಾಯಿತು. ಕಲಾಪ ಆರಂಭಗೊಳ್ಳುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ ಸಂತಾಪ ಸೂಚನೆ ಮಂಡಿಸಿದರು. ಇತ್ತೀಚೆಗೆ ನಿಧನರಾದ ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ರತ್ನ ವಿ ಕುಶನೂರು, ಮಾಜಿ ಸಚಿವರಾದ ಅಂಜನಮೂರ್ತಿ, ಡಿವಿ ಇನಾಮದಾರ, ಮಾಜಿ ಸಂಸದ ಆರ್ ಧ್ರುವನಾರಾಯಣ, ಸಾಹಿತಿ ಮಲೆಯೂರು ಗುರುಸ್ವಾಮಿ, ತೊಗಲು ಗೊಂಬೆಯಾಟ ಕಲಾವಿದ ನಾಡೋಜ ಬೆಳಕಲ್ಲು ವೀರಣ್ಣ, ಹಿರಿಯ ಸಾಹಿತಿ ಶ್ರೀನಿವಾಸ ವೈದ್ಯ, ನೇತ್ರ ತಜ್ಞ ಡಾ. ಭುಜಂಗಶೆಟ್ಟಿ, ವಿಮರ್ಶಕ ಪ್ರೊ. ಜಿ. ಹೆಚ್. ನಾಯಕ್, ನಿರ್ದೇಶಕ ಸಿ.ವಿ ಶಿವಶಂಕರ್ ನಿಧನಕ್ಕೆ ಸಂತಾಪ ಸೂಚಿಸಿದರು.

ಸಭಾಪತಿ ಮಂಡಿಸಿದ ಸಂತಾಪ ಸೂಚನೆಗೆ ಸಭಾ ನಾಯಕ ಬೋಸರಾಜ್ ಮತ್ತು ಪ್ರತಿಪಕ್ಷದಿಂದ ಕೋಟಾ ಶ್ರೀನಿವಾಸ ಪೂಜಾರಿ ಸಹಮತ ವ್ಯಕ್ತಪಡಿಸಿದರು. ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದರು. ನಂತರ ಒಂದು ನಿಮಿಷ ಮೌನ ಆಚರಿಸುವ ಮೂಲಕ ಅಗಲಿದ ಗಣ್ಯರಿಗೆ ಗೌರವ ಸಲ್ಲಿಕೆ ಮಾಡಲಾಯಿತು. ಬಳಿಕ ಸದನದಲ್ಲಿ ಪ್ರಸ್ತಾಪಿಸಿದ ಸಂತಾಪ ಸೂಚನೆಯನ್ನು ಮೃತ ಗಣ್ಯರ ಕುಟಂಬ ವರ್ಗದವರಿಗೆ ಕಳುಹಿಸಿಕೊಡುವುದಾಗಿ ಪ್ರಕಟಿಸಲಾಯಿತು. ನಂತರ ಕಲಾಪವನ್ನು ಮಂಗಳವಾರ ಬೆಳಗ್ಗೆ 11 ಗಂಟೆಗೆ ಮುಂದೂಡಿಕೆ ಮಾಡಲಾಯಿತು.

ಇದನ್ನೂ ಓದಿ:ಇಂದಿನಿಂದ 16ನೇ ವಿಧಾನಸಭೆಯ ಮೊದಲ ಅಧಿವೇಶನ: ಆಡಳಿತ ಪಕ್ಷ-ಪ್ರತಿಪಕ್ಷ ಮಧ್ಯೆ 'ಗ್ಯಾರಂಟಿ' ಕದನ ಕಲಹ

ABOUT THE AUTHOR

...view details