ಬೆಂಗಳೂರು : ರಾಜ್ಯ ಬಿಜೆಪಿ ಪ್ರಣಾಳಿಕೆಯನ್ನು ಕಾಂಗ್ರೆಸ್ ಪಕ್ಷ ಲೇವಡಿ ಮಾಡಿದೆ. ಟ್ವೀಟ್‌ನಲ್ಲಿ, ಬಿಜೆಪಿ ತನ್ನ ಹಿಂದಿನ ಪ್ರಣಾಳಿಕೆಯನ್ನ ಒಮ್ಮೆ ಜನರ ಮುಂದಿಟ್ಟು ಎಷ್ಟು ಭರವಸೆಗಳನ್ನು ಪೂರೈಸಿದೆ ಎಂಬ ಲೆಕ್ಕ ಕೊಡಲಿ. ನಂತರ ಹೊಸ ಪ್ರಣಾಳಿಕೆಯ ಬಗ್ಗೆ ಮಾತಾಡಲಿ. ಬಿಜೆಪಿಯ ಪ್ರಣಾಳಿಕೆ ಎಂದರೆ ಸುಳ್ಳಿನ ಕಂತೆ ಎಂಬುದು ಈಗಾಗಲೇ ಸಾಬೀತಾಗಿದೆ, ಬಿಜೆಪಿಯ ಪ್ರಣಾಳಿಕೆ ಓದುವುದು, ಸತ್ತ ಮಗನ ಜಾತಕ ಓದುವುದು ಎರಡೂ ಒಂದೇ ಎಂದು ವ್ಯಂಗ್ಯವಾಡಿದೆ.
ಕಳೆದ ಬಾರಿ ಅನ್ನಪೂರ್ಣ ಕ್ಯಾಂಟೀನ್ ತೆರೆಯುತ್ತೇವೆ ಎಂದಿದ್ದರು. ಆದರೆ ಇದ್ದ ಇಂದಿರಾ ಕ್ಯಾಂಟೀನ್ ಮುಚ್ಚಿದರು. ಈಗ ಅನ್ನಪೂರ್ಣ ಹೋಗಿ ಅಟಲ್ ಕ್ಯಾಂಟೀನ್ ತೆರೆಯುತ್ತೇವೆ ಎನ್ನುತ್ತಿದ್ದಾರೆ. ಮುಂದಿನ ಪ್ರಣಾಳಿಕೆಯಲ್ಲಿ ಮೋದಿ ಕ್ಯಾಂಟೀನ್ ತೆರೆಯುತ್ತೇವೆ ಎನ್ನುತ್ತಾರೆ. ಇದು ಹೀಗೆಯೇ ಮುಂದುವರೆಯುತ್ತದೆ ಎಂದಿದೆ.
2018ರ ಪ್ರಣಾಳಿಕೆಯಲ್ಲಿ "ಸ್ತ್ರೀ ಉನ್ನತಿ ನಿಧಿ" ಎಂಬ ಘೋಷಣೆಯ ನೆನಪಿದೆಯೇ ರಾಜ್ಯ ಬಿಜೆಪಿ? ನೆನಪಿಲ್ಲ ಎಂದರೆ ಹಿಂದಿನ ಪ್ರಣಾಳಿಕೆಯನ್ನು ತೆರೆದು ನೋಡಿ. ಬಿಜೆಪಿ ಮೊದಲು ತಮ್ಮ ಹಿಂದಿನ ಪ್ರಣಾಳಿಕೆಯ ರಿಪೋರ್ಟ್ ಕಾರ್ಡ್ ನೀಡಿ ಹೊಸ ಭರವಸೆಗಳ ಬಗ್ಗೆ ಮಾತಾಡಲಿ. ಬಿಜೆಪಿಯ ಸುಳ್ಳಿನ ಪ್ರಣಾಳಿಕೆಯನ್ನು ಗುಜರಿ ವ್ಯಾಪಾರಿಗಳೂ ಖರೀದಿಸುವುದಿಲ್ಲ.
ಯುಪಿ, ಗೋವಾಗಳಲ್ಲೂ ಬಿಜೆಪಿ 3 ಉಚಿತ ಸಿಲಿಂಡರ್ ನೀಡುವ ಭರವಸೆಯನ್ನು ನೀಡಿತ್ತು. ಆದರೆ ಅಧಿಕಾರಕ್ಕೇರಿದ ನಂತರ ಆ ರಾಜ್ಯಗಳಲ್ಲಿ ಗ್ಯಾಸ್ ಇರುವ ಸಿಲಿಂಡರ್ ಇರಲಿ, ಕನಿಷ್ಠ ಖಾಲಿ ಸಿಲಿಂಡರ್‌ಗಳನ್ನೂ ಕೊಟ್ಟಿಲ್ಲ ಬಿಜೆಪಿ. ಅದೇ ನಾಟಕವನ್ನು ಕರ್ನಾಟಕದಲ್ಲಿ ಪ್ರದರ್ಶನ ಹಮ್ಮಿಕೊಂಡಿದೆ ಅಷ್ಟೇ. ಇದೂ ಕೂಡ ಗ್ಯಾಸ್ ಸಬ್ಸಿಡಿ ಎಂಬ ಜುಮ್ಲಾದಂತೆಯೇ ಎಂದು ರಾಜ್ಯ ಕಾಂಗ್ರೆಸ್ ಹೇಳಿದೆ.