ಬೆಂಗಳೂರು: ರಾಜ್ಯವನ್ನು ದೇಶದ ವಿದ್ಯುತ್ ಚಾಲಿತ ವಾಹನಗಳ ಕ್ಷೇತ್ರದಲ್ಲಿ ದೇಶದಲ್ಲಿ ನಂಬರ್ 1 ಮಾಡುವ ಗುರಿಯೊಂದಿಗೆ ರಾಜ್ಯ ಸರ್ಕಾರ ಕರಡು ನೀತಿ ರೂಪಿಸಿದ್ದು, ಮುಂದಿನ 5 ವರ್ಷಗಳಲ್ಲಿ 50 ಸಾವಿರ ಕೋಟಿ ರೂ ಬಂಡವಾಳ ಆಕರ್ಷಿಸುವ ಮತ್ತು 1 ಲಕ್ಷ ಉದ್ಯೋಗ ಸೃಷ್ಟಿಸುವ ಉದ್ದೇಶಗಳನ್ನು ಹೊಂದಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
2023ರಿಂದ 2028 ರ ವರೆಗಿನ ಐದು ವರ್ಷಗಳ ಅವಧಿಯನ್ನು ಗಮನದಲ್ಲಿ ಇಟ್ಟುಕೊಂಡು ರೂಪಿಸಿರುವ ನೀತಿಯ ಕರಡಿನ ಬಗ್ಗೆ ಚರ್ಚಿಸಲು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ನಡೆದ ಉದ್ಯಮ ಪ್ರತಿನಿಧಿಗಳೊಂದಿಗಿನ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಮುಂಬರುವ ದಿನಗಳಲ್ಲಿ ವಿದ್ಯುತ್ ಚಾಲಿತ ವಾಹನಗಳು ನಮ್ಮ ಸಂಚಾರ ಕ್ಷೇತ್ರವನ್ನು ಆಳಲಿವೆ. ಕರಡು ನೀತಿಯಲ್ಲಿ ಬಂಡವಾಳ ಸಬ್ಸಿಡಿ ಹೆಚ್ಚಿಸಬೇಕು ಎನ್ನುವ ಸಲಹೆ ಕೊಡಲಾಗಿದೆ. ಜೊತೆಗೆ ಉತ್ಪಾದನೆ ಆಧರಿಸಿ ಕೊಡುವ ಪ್ರೋತ್ಸಾಹ ಭತ್ಯೆಯನ್ನು ಈಗಿನಂತೆ ಶೇಕಡಾ 1ರ ಪ್ರಮಾಣದಲ್ಲೇ ಮುಂದುವರಿಸಿಕೊಂಡು ಹೋಗುವ ಚಿಂತನೆಯೂ ಇದರಲ್ಲಿದೆ ಎಂದು ತಿಳಿಸಿದರು.
ಕರಡು ನೀತಿ ಕೇವಲ ವಿದ್ಯುತ್ ಚಾಲಿತ ವಾಹನಗಳ ಬಗ್ಗೆ ಮಾತ್ರ ಗಮನ ಹರಿಸಿಲ್ಲ. ಬದಲಿಗೆ ಇದರಲ್ಲಿನ ಕೋಶಗಳಲ್ಲಿರುವ ಅನೋಡ್, ಕ್ಯಾಥೋಡ್, ಸೆಪರೇಟರ್ಸ್, ಕಾರ್ಬೊನೇಟ್, ಸಾಲ್ವೆಂಟ್, ಶಕ್ತಿಶಾಲಿ ಹೈಬ್ರಿಡ್ ವಾಹನಗಳು, ಬ್ಯಾಟರಿ ರೀಸೈಕ್ಲಿಂಗ್ ಸೌಲಭ್ಯ, ಪರೀಕ್ಷಾರ್ಥ ಮೂಲಸೌಕರ್ಯಗಳನ್ನೂ ಕರಡು ನೀತಿ ಒಳಗೊಂಡಿದೆ ಎಂದು ತಿಳಿಸಿದರು.
ವಿದ್ಯುತ್ ಚಾಲಿತ ವಾಹನಗಳ ಮತ್ತು ಬಿಡಿಭಾಗಗಳ ತಯಾರಿಕೆಗೆ ಸೂಕ್ತ ಸ್ಥಳಗಳಲ್ಲಿ ಔದ್ಯಮಿಕ ಕ್ಲಸ್ಟರ್ ಗಳನ್ನು ಅಭಿವೃದ್ಧಿಪಡಿಸಲು ಇದರಲ್ಲಿ ಹೇಳಲಾಗಿದೆ. ಇದಕ್ಕೆ ಗೌರಿಬಿದನೂರು ಮತ್ತು ಚಿಕ್ಕಮಲ್ಲಿಗವಾಡ ಎರಡು ತಕ್ಕ ತಾಣಗಳು ಎಂದು ಗುರುತಿಸಲಾಗಿದೆ. ಉದ್ದೇಶಿತ ಕ್ಲಸ್ಟರುಗಳಲ್ಲಿ ಉತ್ಪಾದನಾ ಚಟುವಟಿಕೆ ಆರಂಭಿಸಲು ಸಜ್ಜುಗೊಳಿಸಿರುವ ಕೈಗಾರಿಕಾ ಶೆಡ್, ಪ್ಲಗ್ & ಪ್ಲೇ ಇನ್ಕ್ಯುಬೇಷನ್ ಸೌಲಭ್ಯ, ಪರೀಕ್ಷಾ ಪ್ರಯೋಗಾಲಯಗಳು, ತ್ವರಿತ ಅನುಮೋದನೆ ಮುಂತಾದ ಆರು ಅಂಶಗಳಿಗೆ ಒತ್ತು ಕೊಡಲಾಗುವುದು. ಜೊತೆಗೆ ವಿದ್ಯುತ್ಚಾಲಿತ ವಾಹನಗಳ ಬಳಕೆ ಉತ್ತೇಜಿಸಲು ಎಲ್ಲೆಡೆ ಚಾರ್ಜಿಂಗ್ ಸ್ಟೇಷನ್ಗಳನ್ನು ತ್ವರಿತ ಗತಿಯಲ್ಲಿ ಸ್ಥಾಪಿಸುವ ಚಿಂತನೆ ಇದೆ ಎಂದು ಮಾಹಿತಿ ನೀಡಿದರು.