ಬೆಂಗಳೂರು :ಬರದ ಜಿಲ್ಲೆಗಳು ಸೇರಿ ಬೆಂಗಳೂರಿಗೆ ಕುಡಿಯುವ ನೀರು ಪೂರೈಸಲು ಎತ್ತಿನಹೊಳೆ ಯೋಜನೆ ಕೈಗೊಳ್ಳಲಾಗಿದೆ. ಆದರೆ, ಮಹತ್ವಾಕಾಂಕ್ಷಿಯ ಯೋಜನೆಯ ಕಾಮಗಾರಿ ಮಾತ್ರ ಇನ್ನೂ ಕುಂಟುತ್ತಾ ಸಾಗುತ್ತಿದೆ. ಒಂದೆಡೆ ಹತ್ತಾರು ಕೋರ್ಟ್ ವ್ಯಾಜ್ಯಗಳು, ಇನ್ನೊಂದೆಡೆ ಅರಣ್ಯ ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ವಿಘ್ನ ಯೋಜನೆಯ ವೇಗಕ್ಕೆ ಬ್ರೇಕ್ ಹಾಕಿದೆ.
2014ರ ಫೆಬ್ರವರಿಯಲ್ಲಿ ಎತ್ತಿನ ಹೊಳೆ ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿತ್ತು. ಯೋಜನೆ ಕಾಮಗಾರಿ ಆರಂಭಿಸಿ ಆರು ವರ್ಷ ಕಳೆದರೂ ಯೋಜನೆ ಪ್ರಗತಿ ಆರಕ್ಕೇರಲಿಲ್ಲ, ಮೂರಕ್ಕಿಳಿಯಲಿಲ್ಲ ಎಂಬ ರೀತಿ ಕುಂಟುತ್ತಿದೆ. ಆರಂಭದಲ್ಲಿ 12,912.36 ಕೋಟಿ ರೂ. ವೆಚ್ಚದ ಯೋಜನೆ ಇದೀಗ 24,982 ಕೋಟಿ ರೂ. ಅಂದಾಜು ವೆಚ್ಚಕ್ಕೆ ಏರಿಕೆ ಕಂಡಿದೆ.
ಯೋಜನೆಗಾಗಿ ಪ್ರಾರಂಭದಿಂದ ಜನವರಿ 2020ರ ಅಂತ್ಯದವರೆಗೆ 6584.96 ಕೋಟಿ ರೂ. ವೆಚ್ಚ ಮಾಡಲಾಗಿರುತ್ತದೆ. ಯೋಜನೆ ಪೂರ್ಣಗೊಳಿಸಲು ಇನ್ನೂ 18,397,04 ಕೋಟಿ ರೂ. ಬೇಕಾಗಿದೆ ಎಂದು ಜಲಸಂಪನ್ಮೂಲ ಇಲಾಖೆ ತಿಳಿಸಿದೆ. ಕಳೆದ ವಾರ ನಡೆದ ಸಭೆಯಲ್ಲಿ ಯೋಜನೆ ಅನುಷ್ಠಾನಕ್ಕಾಗಿನ ವಿಘ್ನಗಳ ಬಗ್ಗೆ ಜಲಸಂಪನ್ಮೂಲ ಸಚಿವರು ವಿಸ್ತೃತ ಚರ್ಚೆ ನಡೆಸಿದ್ದಾರೆ.
ಯೋಜನೆಗೆ ಕೋರ್ಟ್ ಕೇಸ್ ಗಳ ವಿಘ್ನ :ಎತ್ತಿನಹೊಳೆ ಯೋಜನೆಗೆ ಕೋರ್ಟ್ ವ್ಯಾಜ್ಯಗಳೂ ಕಗ್ಗಂಟಾಗಿವೆ. ಎತ್ತಿನ ಹೊಳೆ ಯೋಜನೆ ಪ್ರಶ್ನಿಸಿ, ಭೂ ತಕರಾರು ಸೇರಿ ವಿವಿಧ ಕೋರ್ಟ್‌ಗಳಲ್ಲಿ ಸುಮಾರು 35 ಪ್ರತ್ಯೇಕ ವ್ಯಾಜ್ಯ ಹೂಡಲಾಗಿದೆ. ಅದರಂತೆ ಹೈಕೋರ್ಟ್‌ನಲ್ಲಿ ಯೋಜನೆ ಪ್ರಶ್ನಿಸಿ ಒಂದು ಅರ್ಜಿ ಸಲ್ಲಿಸಲಾಗಿದ್ದು, ವಿಚಾರಣೆ ಹಂತದಲ್ಲಿದೆ. ಜಿಲ್ಲಾ ನ್ಯಾಯಾಲಯಗಳಲ್ಲಿ ಒಟ್ಟು 9 ಕೇಸ್ ಇವೆ. ಆ ಪೈಕಿ ಒಂದು ಕೇಸ್ ಇತ್ಯರ್ಥವಾಗಿದೆ.
ತಾಲೂಕು ಮಟ್ಟದ ಕೋರ್ಟ್‌ಗಳಲ್ಲೂ ಯೋಜನೆ ಸಂಬಂಧ ಒಟ್ಟು 22 ಕೇಸ್‌ಗಳಿವೆ. ಈ ಪೈಕಿ 9 ಕೇಸ್ ಇತ್ಯರ್ಥವಾಗಿವೆ. ಎನ್‌ಜಿಟಿಯಲ್ಲಿ ಯೋಜನೆ ಅನುಷ್ಠಾನ ಪ್ರಶ್ನಿಸಿ ಒಟ್ಟು 3 ಅರ್ಜಿ ಹಾಕಲಾಗಿತ್ತು. ಆದರೆ, ಮೂರು ಅರ್ಜಿಗಳನ್ನು ಎನ್‌ಜಿಟಿ ವಜಾಗೊಳಿಸಿದೆ.
ಸದ್ಯದ ಯೋಜನೆ ಕಾಮಗಾರಿ ಪ್ರಗತಿ ಹೇಗಿದೆ?:
-ಹಂತ 1ರ ಏತ ಕಾಮಗಾರಿಗಳನ್ನು 5 ಪ್ಯಾಕೇಜ್‌ಗಳಲ್ಲಿ ಟೆಂಡರ್ ಮೂಲಕ ಕೈಗೆತ್ತಿಕೊಳ್ಳಲಾಗಿದೆ. 8 ಅಣೆಕಟ್ಟು (ವಿಯರ್) ಪೈಕಿ 5 ವಿಯರ್ ಕಾಮಗಾರಿಗಳು ಪೂರ್ಣಗೊಂಡಿದೆ. 2 ವಿಯರ್‌ಗಳ ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿದ್ದು, ಒಂದು ವಿಯರ್ ಕಾಮಗಾರಿ ಪ್ರಗತಿಯಲ್ಲಿದೆ.
-9 ಪಂಪ್ ಹೌಸ್‌ಗಳ ಪೈಕಿ 6 ಪಂಪ್ ಹೌಸ್‌ಗಳ ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿವೆ. ಉಳಿದ 3 ಪಂಪ್‌ಹೌಸ್‌ಗಳ ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ. 129.84 ಕಿ.ಮೀ. ಉದ್ದದ ರೈಸಿಂಗ್ ಮೇನ್ ಅಳವಡಿಸಲು ಎಲ್ಲಾ ಪೈಪುಗಳು ಸಿದ್ಧವಾಗಿವೆ. ಈಗಾಗಲೇ 106.885 ಕಿ.ಮೀ. ಉದ್ದದಷ್ಟು ಪೈಪ್ ಅಳವಡಿಸಲಾಗಿದೆ.