ಬೆಂಗಳೂರು: ಸಕ್ಕರೆ ಕಾರ್ಖಾನೆಯ ಸುತ್ತಮುತ್ತ 15 ಕಿ. ಮೀ ವ್ಯಾಪ್ತಿಯಲ್ಲಿ ಎಥೆನಾಲ್ ಉತ್ಪಾದನಾ ಘಟಕ ಸ್ಥಾಪಿಸುವಂತಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಆಸ್ಕಿನ್ಸ್ ಬಯೋಫ್ಯುಯೆಲ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಶ್ರೀ ಬ್ರಹ್ಮಾನಂದಸಾಗರ್ ಸಕ್ಕರೆ ಕೈಗಾರಿಕೆ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ನ್ಯಾ. ಎನ್. ಎಸ್ ಸಂಜಯ್ ಗೌಡ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ಮಾಡಿದೆ.
1966 ಮತ್ತು 2021ರ ಕಬ್ಬು (ನಿಯಂತ್ರಣ) ಆದೇಶದ ನಿಬಂಧನೆಗಳನ್ನು ವಿಶ್ಲೇಷಿಸಿರುವ ನ್ಯಾಯಪೀಠವು, 2021ರಿಂದೀಚೆಗೆ ಸಕ್ಕರೆ ಮತ್ತು ಎಥೆನಾಲ್ ಎರಡನ್ನೂ ತಯಾರಿಸುವ ಅಗತ್ಯವಿಲ್ಲ ಮತ್ತು ಸಕ್ಕರೆ ಅಥವಾ ಎಥೆನಾಲ್ ಎರಡರಲ್ಲಿ ಒಂದು ತಯಾರಿಸಿದರೆ, ಕಾನೂನಿನ ಅಡಿಯಲ್ಲಿ ಸಕ್ಕರೆ ಕಾರ್ಖಾನೆಯನ್ನು ‘ಕಾರ್ಖಾನೆ ಅಥವಾ ಸಕ್ಕರೆ ಕಾರ್ಖಾನೆ’ ಎಂದು ವ್ಯಾಖ್ಯಾನಿಸಬಹುದಾಗಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
15 ಕಿ. ಮೀ ವ್ಯಾಪ್ತಿಯ ನಿರ್ಬಂಧ ಅನ್ವಯಿಸುತ್ತದೆ: 2021ರಿಂದ ಕಬ್ಬು (ನಿಯಂತ್ರಣ) ತಿದ್ದುಪಡಿ ಆದೇಶ ಜಾರಿಗೆ ಬಂದಿದೆ. ಅದರಲ್ಲಿ ‘ಕಾರ್ಖಾನೆ’ ವ್ಯಾಖ್ಯಾನದಲ್ಲಿ ಬಳಸಲಾದ ಭಾಷೆ ಮತ್ತು ವಿರಾಮ ಚಿಹ್ನೆಯನ್ನು ವಿಶ್ಲೇಷಿಸಿದಾಗ, ನ್ಯಾಯಾಲಯವು ಕೇವಲ ಎಥೆನಾಲ್ ಅನ್ನು ಕಾರ್ಖಾನೆಯ ಆವರಣ/ಕಾರ್ಖಾನೆಯಲ್ಲಿ ತಯಾರಿಸಿದ್ದರೂ, ಸಕ್ಕರೆ ಕಾರ್ಖಾನೆ ವ್ಯಾಖ್ಯಾನದಲ್ಲಿ ರಚಿಸಲಾದ ಕಾನೂನು ಮೂಲಕ ‘ಸಕ್ಕರೆ ಕಾರ್ಖಾನೆ‘ ಎಂದು ಪರಿಗಣಿಸಲು ಸಕ್ಕರೆ ಉತ್ಪಾದಿಸುವ ಅಗತ್ಯವಿಲ್ಲ ಮತ್ತು ಪರಿಣಾಮವಾಗಿ ಕೇವಲ ಎಥೆನಾಲ್ ಉತ್ಪಾದಿಸುವ ಕಾರ್ಖಾನೆ ಸ್ಥಾಪಿಸಲು ಸಹ 15 ಕಿ. ಮೀ ವ್ಯಾಪ್ತಿಯ ನಿರ್ಬಂಧ ಅನ್ವಯಿಸುತ್ತದೆ ಎಂದು ಕೋರ್ಟ್ ಆದೇಶಿಸಿದೆ.