ಮಹದೇವಪುರ(ಬೆಂಗಳೂರು):ಕಲುಷಿತ ನೀರು, ನೊರೆ, ಬೆಂಕಿ, ವಾಸನೆ ಮೂಲಕವೇ ನಗರ ಮಾತ್ರವಲ್ಲದೇ ರಾಜ್ಯದಲ್ಲೂ ಕುಖ್ಯಾತಿ ಗಳಿಸಿದ್ದ ಬೆಳ್ಳಂದೂರು ಕೆರೆಯಲ್ಲಿ ಕಾರೊಂದು ಪತ್ತೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಬೆಳ್ಳಂದೂರು ಕೆರೆಯಲ್ಲಿ ಪತ್ತೆಯಾದ ಏಸ್ಟಿಮೊ ಕಾರು ಈ ಹಿಂದೆ ಕೊಳಚೆ ನೀರು, ರಾಸಾಯನಿಕ ಮಿಶ್ರಣದ ನೊರೆ, ಬೆಂಕಿ ಮತ್ತು ದುರ್ವಾಸನೆ ಮೂಲಕ ಕುಖ್ಯಾತಿ ಗಳಿಸಿದ್ದ ಬೆಳ್ಳಂದೂರು ಕೆರೆಯಲ್ಲಿ ಇಂದಿರಾನಗರ ಪ್ರಾದೇಶಿಕ ಕಚೇರಿಯಲ್ಲಿ ನೋಂದಣಿಯಾಗಿರುವ ಕೆಎ 03 ಪಿ 6643 ಮಾರುತಿ ಸುಜುಕಿ ಕಂಪನಿಯ ಏಸ್ಟಿಮೊ ಕಾರು ಪತ್ತೆಯಾಗಿದೆ.
ಬೆಳ್ಳಂದೂರು ಕೆರೆ ಕುರಿತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ನೇಮಿಸಿದ್ದ ತಜ್ಞರ ಸಮಿತಿ ನೀಡಿದ್ದ ಶಿಫಾರಸಿನಂತೆ ಸರ್ಕಾರ ಅಭಿವೃದ್ಧಿ ಕಾರ್ಯ ಕೈಗೊಂಡಿದೆ. ಅಲ್ಲದೆ ಕೆರೆಯಲ್ಲಿ ನೀರು ಕಡಿಮೆಯಾಗಿರುವ ಹಿನ್ನೆಲೆ ಕಳೆದ ಶುಕ್ರವಾರ ಕೆರೆಯಲ್ಲಿ ಹಸುಗಳಿಗೆ ಹುಲ್ಲು ತೆಗೆದುಕೊಳ್ಳಲು ಬಂದವರಿಗೆ ಕಾರು ಕಂಡುಬಂದಿದೆ.
ಕಾರನ್ನು ನೋಡಿದ ಸ್ಥಳೀಯರು ಕೂಡಲೇ ಕೆರೆ ಸಂರಕ್ಷಣೆಗೆ ನೇಮಿಸಿರುವ ಮಾರ್ಷಲ್( ಮಾಜಿ ಸೈನಿಕ) ಸದಾಶಿವ ಅವರ ಗಮನಕ್ಕೆ ತಂದಿದ್ದಾರೆ. ಸದಾಶಿವ ಅವರು ಹೂಳು ಹಾಗೂ ಹುಲ್ಲಿನ ನಡುವೆ ಅರ್ಧಬಂರ್ಧ ಗೋಚರಿಸುವುದನ್ನು ನೋಡಿ ಸ್ಥಳೀಯ ಮಾರತ್ತಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾರತ್ತಹಳ್ಳಿಯ ಹಿರಿಯ ಪೊಲೀಸ್ ಅಧಿಕಾರಿಗಳು ಕಾರನ್ನು ಪರಿಶೀಲಿಸಿ ಕ್ರೇನ್ ಮೂಲಕ ಮೇಲಕ್ಕೆತ್ತಿದ್ದಾರೆ. ಕಾರನ್ನು ಸುಮಾರು ಐದು ಆರು ವರ್ಷಗಳ ಹಿಂದೆಯೇ ತಂತಿ ಬೇಲಿ ಅಳವಡಿಸುವ ಮುನ್ನ ಕೆರೆಗೆ ತಳ್ಳಲಾಗಿದೆ. ಕಾರಿನಲ್ಲಿ ಸ್ಟೇರಿಂಗ್ ಇಲ್ಲದೆ ಇರುವುದು ನೋಡಿದರೆ ಹಲವು ಅನುಮಾನಗಳಿಗೆ ಆಸ್ಪದ ನೀಡುತ್ತಿದೆ.
ಕಾರು ಇಂದಿರಾನಗರದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೋಂದಣಿಯಾಗಿದೆ. ಅದರ ಮಾಲೀಕನನ್ನು ಪತ್ತೆ ಹಚ್ಚುವ ಕೆಲಸ ಮುಂದುವರೆದಿದೆ. ಕಾರನ್ನು ಕಳತನ ಮಾಡಿದ್ದಾರಾ ಅಥವಾ ಅಕ್ರಮ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದರಾ ಎಂಬುದು ತನಿಖೆಯಿಂದ ಪತ್ತೆಯಾಗಲಿದೆ. ಕಾರಿನ ಮೇಲೆ ಯಾವುದೇ ರೀತಿಯ ಪ್ರಕರಣ ದಾಖಲಾಗಿಲ್ಲ. ಕಾರು ಕಳ್ಳತನವಾಗಿದೆ ಎಂದು ಸಹ ಯಾರು ದೂರು ನೀಡಿಲ್ಲ ಎಂದು ಪೊಲೀಸರು ತಿಳಿಸಿದರು.