ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ 2012ರಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಪೋಕ್ಸೋ ಕಾಯ್ದೆ 2012ರ ತಿದ್ದುಪಡಿಗೆ ಅನುಮೋದನೆ ನೀಡಲಾಗಿತ್ತು.
ಅದರಂತೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೋ) ಅಡಿ ದಾಖಲಾಗುವ ಪ್ರಕರಣಗಳ ವಿಚಾರಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನಗಳ ಅನ್ವಯ ರಾಜ್ಯ ಸರ್ಕಾರ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಿದ್ದು, ಉತ್ತಮವಾಗಿ ಕಾರ್ಯಾಚರಿಸುತ್ತಿವೆ.
ಪೋಕ್ಸೋ ಕಾಯ್ದೆ ಜಾರಿ :ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 2012ರಲ್ಲಿ ಪೋಕ್ಸೋ ಕಾಯ್ದೆ ಜಾರಿಗೊಳಿಸಿದೆ. ಅದರಂತೆ ಮೊದಲು ರಾಜ್ಯದಲ್ಲಿನ 12 ಜಿಲ್ಲೆಗಳಲ್ಲಿ ಪೋಕ್ಸೋ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿತ್ತು. ಕಳೆದ 2019ರಲ್ಲಿ ಸುಪ್ರೀಂಕೋರ್ಟ್ ಯಾವುದೇ ಜಿಲ್ಲೆಯಲ್ಲಿ 100 ಕ್ಕಿಂತ ಹೆಚ್ಚು ಪ್ರಕರಣಗಳಿದ್ದಲ್ಲಿ ಅಲ್ಲಿಯೂ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ನಿರ್ದೇಶನ ನೀಡಿತ್ತು.
ಅದರನ್ವಯ ರಾಜ್ಯದ ಉಳಿದ 18 ಜಿಲ್ಲೆಗಳಲ್ಲಿಯೂ ಇದೀಗ ಪೋಕ್ಸೋ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳ ಪ್ರಕರಣಗಳ ವಿಚಾರಣೆಗೂ ತಲಾ ಎರಡೆರಡು ವಿಶೇಷ ನ್ಯಾಯಾಲಯಗಳನ್ನು ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಸ್ಥಾಪಿಸಲಾಗಿದೆ.
ಮಕ್ಕಳ ಸ್ನೇಹಿ ನ್ಯಾಯಾಲಯ :ಘಟನೆಯಿಂದ ಮಾನಸಿಕ ಆಘಾತಕ್ಕೊಳಗಾಗಿರುವ ಮಕ್ಕಳು ಹಾಗೂ ಪೋಷಕರಿಗೆ ಕೋರ್ಟ್ ವಿಚಾರಣೆ ಕಿರಿಕಿರಿಯಾಗದಂತೆ ನೋಡಿಕೊಳ್ಳುವುದು ಸವಾಲಿನ ಕೆಲಸವಾಗಿರುತ್ತದೆ. ಹೀಗಾಗಿ, ಪೋಕ್ಸೋ ಪ್ರಕರಣಗಳ ವಿಚಾರಣೆ ನಡೆಸುವಾಗ ಮೊದಲಿಗೆ ಸಂತ್ರಸ್ತ ಮಕ್ಕಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ.
ಅವರಿಗೆ ಯಾವುದೇ ಭೀತಿ ಕಾಡದಂತೆ ಮನೆಯಲ್ಲಿಯೇ ಇದ್ದೇವೆ ಎಂಬ ವಾತಾವರಣ ಸೃಷ್ಟಿಸಿ ನಂತರವೇ ವಿಚಾರಣೆ ನಡೆಸಬೇಕಾಗುತ್ತದೆ. ಅದರಂತೆ ವಿಶೇಷ ನ್ಯಾಯಾಲಯಗಳು ಕಾರ್ಯಾಚರಿಸುತ್ತಿವೆ.
ವಿಶೇಷವಾಗಿ ಸಜ್ಜಾಗಿವೆ ನ್ಯಾಯಾಲಯಗಳು :ಪೋಕ್ಸೋ ಪ್ರಕರಣಗಳನ್ನು ವಿಚಾರಣೆ ನಡೆಸುವ ನ್ಯಾಯಾಲಯಗಳನ್ನು ವಿಶೇಷವಾಗಿ ಸಜ್ಜುಗೊಳಿಸಲಾಗಿದೆ. ನ್ಯಾಯಾಲಯಕ್ಕೆ ಬರುವ ಮಕ್ಕಳು ಹಾಗೂ ಪೋಷಕರಿಗೆ ಪ್ರತ್ಯೇಕ ಇರುವ ವ್ಯವಸ್ಥೆ ಮಾಡಲಾಗಿದೆ. ಮಗುವಿಗೆ ಕೋರ್ಟ್ ವಿಚಾರಣೆ ಒತ್ತಡ ಸೃಷ್ಟಿಸಬಾರದೆಂದು ಇಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗಿರುತ್ತದೆ.
ಕೋರ್ಟ್ ಸಿಬ್ಬಂದಿಗೂ ವಿಶೇಷವಾಗಿ ತರಬೇತಿ ನೀಡಲಾಗಿರುತ್ತದೆ. ಜತೆಗೆ ನ್ಯಾಯಾಲಯಕ್ಕೆ ಕರೆತರುವ ಪೊಲೀಸರು ಕೂಡ ಸಮವಸ್ತ್ರದ ಬದಲಿಗೆ ಸಾಮಾನ್ಯ ಉಡುಪಿನಲ್ಲಿರುತ್ತಾರೆ. ನ್ಯಾಯಾಧೀಶರು, ಅಭಿಯೋಜಕರು ಸಂತ್ರಸ್ತ ಮಗುವಿನೊಂದಿಗೆ ಅತ್ಯಂತ ಸ್ನೇಹಮಯಿಯಾಗಿ ನಡೆದುಕೊಳ್ಳುತ್ತಲೇ ಮಾಹಿತಿ ಪಡೆದುಕೊಳ್ಳುತ್ತಾರೆ.
ಆರೋಪಿ ಕಾಣಿಸದಂತೆ ಪರದೆ :ಪ್ರಕರಣದ ವಿಚಾರಣೆ ವೇಳೆ ಆರೋಪಿ ನ್ಯಾಯಾಲಯದಲ್ಲೇ ಇದ್ದರೂ ಅವರು ಕಾಣಿಸದಂತೆ ಪರದೆ ಹಾಕಲಾಗಿರುತ್ತದೆ. ದೌರ್ಜನ್ಯ ಎಸಗಿದ ಆರೋಪಿಯನ್ನು ಗುರುತಿಸುವ ಸಂದರ್ಭದಲ್ಲಿ ಮಾತ್ರ ಕಾಣುವಂತೆ ಎದ್ದು ನಿಲ್ಲಿಸಿ, ಬಳಿಕ ಪರದೆ ಹಿಂದೆ ಅಡಗಿಸಿ ಕೂರಿಸಲಾಗುತ್ತದೆ.
ಮಗುವಿನ ಮನಸ್ಸಿನಲ್ಲಿ ಭೀತಿ ಉಂಟಾಗಬಾರದು ಎಂಬ ಕಾರಣಕ್ಕೆ ಈ ಕ್ರಮ ಅನುಸರಿಸಲಾಗುತ್ತದೆ. ಹಾಗಿದ್ದೂ ಮಗುವಿನ ಹೇಳಿಕೆ ಆಲಿಸಲು ಆರೋಪಿಯನ್ನು ಕೋರ್ಟ್ ಆವರಣದಲ್ಲೇ ಪರದೆ ಹಿಂದೆ ಬಚ್ಚಿಡಲಾಗಿರುತ್ತದೆ.
ಇನ್ ಕ್ಯಾಮೆರಾ ಪ್ರೊಸೀಡಿಂಗ್ಸ್ :ಸಾಮಾನ್ಯವಾಗಿ ನ್ಯಾಯಾಲಯದ ಕಲಾಪಗಳು ತೆರೆದ ಕೋರ್ಟ್ನಲ್ಲಿಯೇ ನಡೆಯುತ್ತವೆ. ಆದರೆ, ಪೋಕ್ಸೋ ಪ್ರಕರಣಗಳನ್ನು ವಿಚಾರಣೆ ನಡೆಸುವಾಗ ಇದಕ್ಕೆ ತದ್ವಿರುದ್ಧ ನಿಯಮ ಅನುಸರಿಸಲಾಗುತ್ತದೆ. ವಿಚಾರಣೆ ಸಂದರ್ಭದಲ್ಲಿ ಮಗು, ಮಗುವಿನ ತಾಯಿ ಅಥವಾ ತಂದೆ ಸಾಕ್ಷ್ಯ ವಿಚಾರಣೆ ಹಂತದಲ್ಲಿ ಆರೋಪಿ, ಆರೋಪಿ ಪರ ವಕೀಲರು, ಅಭಿಯೋಜಕರನ್ನು ಬಿಟ್ಟರೆ ಮತ್ಯಾರಿಗೂ ಕೋರ್ಟ್‌ನೊಳಗೆ ಬರಲು ಅವಕಾಶವಿಲ್ಲ.
ಹೀಗೆ ಮುಚ್ಚುಮರೆಯಲ್ಲಿ ನಡೆಸುವ ವಿಚಾರಣೆಯನ್ನು ಕಾನೂನು ಭಾಷೆಯಲ್ಲಿ ಇನ್ ಕ್ಯಾಮೆರಾ ಪ್ರೊಸೀಡಿಂಗ್ ಎನ್ನಲಾಗುತ್ತದೆ. ಇನ್ನು, ಕೋರ್ಟ್ ಸಿಬ್ಬಂದಿಯೂ ಹೆಚ್ಚಿಗೆ ಇರುವಂತಿಲ್ಲ. ನ್ಯಾಯಾಧೀಶರನ್ನು ಬಿಟ್ಟರೆ ಮಗುವಿನ ಹೇಳಿಕೆ ದಾಖಲಿಸಿಕೊಳ್ಳಲು ಓರ್ವ ಟೈಪಿಸ್ಟ್ ಮಾತ್ರ ಇರುತ್ತಾರೆ. ಸಂತ್ರಸ್ತ ಮಗು 12 ವರ್ಷಕ್ಕಿಂತ ಕಡಿಮೆ ಇದ್ದು ಒತ್ತಡ ಅಥವಾ ಭೀತಿಯಲ್ಲಿದ್ದರೆ ವಿಚಾರಣೆಯನ್ನು ಕೋರ್ಟ್ ಹಾಲ್ ಬದಲಿಗೆ ನ್ಯಾಯಾಧೀಶರ ಚೇಂಬರ್‌ನಲ್ಲಿಯೇ ನಡೆಸಲಾಗುತ್ತದೆ.