ಬೆಂಗಳೂರು: ರಾಜ್ಯ ಮುಂಗಡ ಬಜೆಟ್ ಮಂಡನೆ ಬೆನ್ನಲ್ಲೇ ಎರಡು ಹೊಸ ನಿಗಮಗಳನ್ನು ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಚುನಾವಣೆ ಸಮೀಪದಲ್ಲಿರುವಾಗಲೇ ಗಾಣಿಗ ಅಭಿವೃದ್ಧಿ ನಿಗಮ ಹಾಗೂ ನಾರಾಯಣಗುರು ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಹಿಂದುಳಿದ ವರ್ಗಗಳ ಮತಬುಟ್ಟಿಗೆ ಬಿಜೆಪಿ ಕೈ ಹಾಕಿದೆ. ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಕ್ರಮಸಂಖ್ಯೆ 78 ಎ ಯಿಂದ ಇ ವರೆಗೆ ಗಾಣಿಗ, ತೇಲಿ, ಗಾಂಡ್ಲ, ವನಿಯನ್ ಹಾಗು ಜ್ಯೋತಿನಗರ ವೈಶ್ಯ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗಾಗಿ ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಇದರ ಜೊತೆಗೆ ಪ್ರವರ್ಗ 2 ಎ ರಲ್ಲಿ ಕ್ರಮಸಂಖ್ಯೆ 4ಎ ಯಿಂದ ಜೆಡ್ ವರೆಗೆ ಈಡಿಗ ಬಿಲ್ಲವ ಸೇರಿದಂತೆ ನಮೂದಾಗಿರುವ ಒಟ್ಡು 26 ಜಾತಿಗಳ ಸಮಗ್ರ ಅಭಿವೃದ್ಧಿಗಾಗಿ ನಾರಾಯಣಗುರು ಅಭಿವೃದ್ಧಿ ನಿಗಮ ಸ್ಥಾಪಿಸಿ ಆದೇಶ ಹೊರಡಿಸಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧೀನ ಕಾರ್ಯದರ್ಶಿಗಳು ಈ ಆದೇಶ ಹೊರಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ರಾಜ್ಯದ ಬಿಲ್ಲವ/ಈಡಿಗ ಸಮುದಾಯಗಳ ಬಹುದಿನದ ಬೇಡಿಕೆಯಾಗಿದ್ದ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ, ಆದೇಶ ಹೊರಡಿಸಲಾಗಿದೆ. ಈ ನಿಗಮವು ಈಡಿಗ/ಬಿಲ್ಲವ ಸೇರಿದಂತೆ ಇತರ ಪ್ರಮುಖ 26 ಉಪಜಾತಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಕೆಲಸ ನಿರ್ವಹಿಸಲಿದೆ ಎಂದು ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ಸಿಎಂಗೆ ಸಚಿವ ಸುನಿಲ್ ಕುಮಾರ್ ಅಭಿನಂದನೆ:ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆಗೆ ಸ್ಪಂದಿಸುವ ಮೂಲಕ ಸರ್ಕಾರ ನುಡಿದಂತೆ ನಡೆದಿದೆ. ಇದಕ್ಕಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ. ಬಿಲ್ಲವ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಬ್ರಹ್ಮರ್ಷಿ ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಇಂದು ಅಧಿಕೃತ ಆದೇಶ ಹೊರಡಿಸಿದೆ. ರಾಜ್ಯದ ಹಿಂದುಳಿದ ಜಾತಿಗಳ ಪೈಕಿ ಒಂದಾಗಿರುವ ಬಿಲ್ಲವ ಸಮುದಾಯದ ಸರ್ವತೋಮುಖ ಅಭಿವೃದ್ಧಿ ಹಾಗೂ ಬ್ರಹ್ಮರ್ಷಿ ನಾರಾಯಣ ಗುರುಗಳ ತತ್ವಾದರ್ಶಗಳ ಪ್ರಸಾರಕ್ಕೆ ಪ್ರತ್ಯೇಕ ನಿಗಮ ಸ್ಥಾಪನೆ ಮಾಡಬೇಕೆಂಬುದು ಸಮುದಾಯದ ಬಹುಕಾಲದ ಬೇಡಿಕೆಯಾಗಿತ್ತು.
ಇದನ್ನೂ ಓದಿ:ಸೈಬರ್ ವಂಚನೆ ತಡೆಗೆ ಕಟ್ಟುನಿಟ್ಟಿನ ಕ್ರಮ: ಗೃಹ ಸಚಿವ ಆರಗ ಜ್ಞಾನೇಂದ್ರ
ಸಮುದಾಯದ ಈ ಬೇಡಿಕೆ ಈಡೇರಿಕೆಗಾಗಿ ಕೆಲ ದಿನಗಳ ಹಿಂದಷ್ಟೇ ಸಚಿವ ವಿ ಸುನಿಲ್ ಕುಮಾರ್ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸ್ವಾಮೀಜಿಗಳು ಮತ್ತು ಸಮುದಾಯದ ಮುಖಂಡರ ಜತೆ ಭೇಟಿಯಾಗಿ ನಿಗಮ ಸ್ಥಾಪನೆಗೆ ಮನವಿ ಸಲ್ಲಿಸಿದ್ದರು. ಬಜೆಟ್ ನಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಿಎಂ ಬೊಮ್ಮಾಯಿ ನೀಡಿದ ಭರವಸೆ ಈಗ ಕಾರ್ಯ ರೂಪಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ಅತೀ ಭ್ರಷ್ಟ ಸರ್ಕಾರ ನೀಡಿತ್ತು, ತನಿಖೆಯಾಗದ ಎಲ್ಲಾ ಪ್ರಕರಣ ಲೋಕಾಯುಕ್ತಕ್ಕೆ ಶಿಫಾರಸು: ಸಿಎಂ ಘೋಷಣೆ