ಬೆಂಗಳೂರು:15 ಕ್ಷೇತ್ರಗಳ ಉಪ ಚುನಾವಣೆಗೆ ಸಂಪೂರ್ಣವಾಗಿ ಸನ್ನದ್ಧವಾಗಿದ್ದು, ಚುನಾವಣೆಯಲ್ಲಿ ನಾವು ಏಕ ಪಕ್ಷದ ಸ್ಥಿರ ಸರ್ಕಾರ ಸ್ಥಾಪನೆ ಹಾಗೂ ಅಭಿವೃದ್ಧಿ ಪರ ಮತಗಳನ್ನು ಕೇಳಲಿದ್ದೇವೆಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಾಮಗ್ರಿಗಳ ಉದ್ಘಾಟನೆ ಮಾಡಲಾಯಿತು. ಬಳಿಕ ಮಾತನಾಡಿದ ಅರವಿಂದ ಲಿಂಬಾವಳಿ, ಉಪ ಚುನಾವಣೆಯನ್ನು ರಾಜಕೀಯ ದೃವೀಕರಣ ಎಂದು ಬಿಜೆಪಿ ಭಾವಿಸಲಿದೆ. ಹಿಂದಿನ ಮೈತ್ರಿ ಸರ್ಕಾರ, ಸ್ಥಿರ ಸರ್ಕಾರ ನೀಡದೇ ಇರುವುದು ಹಾಗೂ ಉತ್ತಮ ಆಡಳಿತ ನೀಡದೇ ಇರುವುದನ್ನು ಧಿಕ್ಕರಿಸಿ ಅನೇಕರು ರಾಜೀನಾಮೆ ಕೊಟ್ಟಿದ್ದಾರೆ. ಹಾಗಾಗಿ ಮೂರು ವರ್ಷ ಸ್ಥಿರ ಆಡಳಿತ ನೀಡಲು ಮತಯಾಚನೆ ಮಾಡಲಿದ್ದೇವೆ ಎಂದರು.
ಹಿಂದಿನ ಯಡಿಯೂರಪ್ಪ ಸರ್ಕಾರದಲ್ಲಿ ಒಳ್ಳೆಯ ಆಡಳಿತ ನೀಡಿದ್ದೆವು. ಸದಾನಂದಗೌಡ, ಶೆಟ್ಟರ್ ಸೇರಿ ಐದು ವರ್ಷ ಒಳ್ಳೆಯ ಆಡಳಿತ ನೀಡಿದ್ದೆವು. ಈಗ ನಾಲ್ಕು ತಿಂಗಳಿನಲ್ಲಿನ ಆಡಳಿತ, ಪ್ರವಾಹದ ಪರಿಸ್ಥಿತಿ, ಬೆಂಗಳೂರಿನ ಸಂಚಾರ ಸಮಸ್ಯೆ ಸೇರಿ ಹಲವು ವಿಷಯ ಕುರಿತು ನಮ್ಮ ಸರ್ಕಾರ ಆ ಸಮಸ್ಯೆಗಳನ್ನು ಪರಿಹರಿಸುವತ್ತ ತಕ್ಷಣ ಗಮನ ಹರಿಸಿದೆ. ಇದನ್ನೆಲ್ಲಾ ಮತದಾರರ ಮುಂದಿಡಲಿದ್ದೇವೆ ಎಂದರು.