ಬೆಂಗಳೂರು: ಕಲಬುರ್ಗಿ ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ 1058 ಮನೆಗಳು ಹಾನಿಯಾಗಿದ್ದು. 518 ಜಾನುವಾರುಗಳು ಮೃತಪಟ್ಟಿವೆ. 48 ಕಾಳಜಿ ಕೇಂದ್ರಗಳನ್ನು ಸ್ಥಾಪಿಸಿ, 7,603 ಸಂತ್ರಸ್ತರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಅವರು ತಿಳಿಸಿದ್ದಾರೆ.
ಪ್ರವಾಹದಲ್ಲಿ ಸಿಲುಕಿದವರನ್ನು ರಕ್ಷಿಸಲಾಗಿದೆ. ಮಳೆ ಮುಂದುವರೆದಿರುವುದರಿಂದ ಇನ್ನು ಹಾನಿಗೊಳಗಾಗುವ ಮನೆ ಹಾನಿ, ಬೆಳೆ ಹಾನಿ, ರಸ್ತೆ, ಸೇತುವೆ, ಕಟ್ಟಡ ಸೇರಿದಂತೆ ಸಾರ್ವಜನಿಕ ಆಸ್ತಿಪಾಸ್ತಿಗಳ ಹಾನಿ ಕುರಿತು ತ್ವರಿತವಾಗಿ ಸಮೀಕ್ಷೆ ನಡೆಸಿ, ಕೂಡಲೇ ಪರಿಹಾರ ವಿತರಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ. ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗದವರು ಸಮನ್ವಯತೆಯಿಂದ ಮುಂಜಾಗ್ರತಾ ಕ್ರಮಗಳು ಹಾಗೂ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಸೂಚಿರುವುದಾಗಿ ಡಿಸಿಎಂ ತಿಳಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣ, ಘಟಪ್ರಭ ಹಾಗೂ ಮಲಪ್ರಭ ನದಿಗಳ ಭೀಕರ ಪ್ರವಾಹದಿಂದ 31 ಗ್ರಾಮಗಳು ಬಾದಿತಗೊಂಡಿವೆ. ಒಟ್ಟು 270 ಕುಟುಂಬಗಳು ಭಾದಿತಗೊಂಡಿವೆ. 4 ಕಾಳಜಿ ಕೇಂದ್ರಗಳನ್ನು ತೆರೆದು 210 ಜನವರಿಗೆ ಊಟ, ಉಪಹಾರ ಮತ್ತು ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ಬಾದಿತವಾದ 270 ಕುಟುಂಬಗಳಿಗೆ ತಲಾ 10ಸಾವಿರ ರೂ. ತುರ್ತು ಪರಿಹಾರವನ್ನು ಪಾವತಿಸಲಾಗಿದೆ.