ಬೆಂಗಳೂರು: ಇಡೀ ರಾಜ್ಯದಲ್ಲಿ ಕರ್ಫ್ಯೂನೂ ಇಲ್ಲ. ಸುಡುಗಾಡುನೂ ಇಲ್ಲ. ಕೋವಿಡ್ ಪ್ರಕರಣ ಕಡಿಮೆ ಇರುವ ಜಿಲ್ಲೆಗಳಲ್ಲಿ ನಿರ್ಬಂಧ ಸಡಲಿಸಲು ಸಿಎಂಗೆ ಮನವಿ ಮಾಡುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ವಿಧಾನಸೌಧದಲ್ಲಿ ರಾತ್ರಿ ಕರ್ಫ್ಯೂ ಜಾರಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇಡೀ ಕರ್ನಾಟಕದಲ್ಲಿ ಕರ್ಫ್ಯೂ ಇಲ್ಲ. ರಾತ್ರಿ ಕರ್ಫ್ಯೂ ಇಲ್ಲ, ಸುಡುಗಾಡು ಇಲ್ಲ. ಯಾವ ಜಿಲ್ಲೆಗಳಲ್ಲಿ ಕೊರೊನಾ ಪ್ರಮಾಣ ಹೆಚ್ಚಾಗಿದೆಯೋ ಅಲ್ಲಿ ಮಾತ್ರ ಬಿಗಿ ಕ್ರಮ ಕೈಗೊಳ್ಳಲಿ. ಯಾವ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣ ಕಡಿಮೆ ಇದೆಯೋ ಅಲ್ಲಿನ ಪರಿಸ್ಥಿತಿಗನುಗುಣವಾಗಿ ಕ್ರಮ ಕೈಗೊಳ್ಳುವಂತೆ ಸಿಎಂರಲ್ಲಿ ಮನವಿ ಮಾಡುತ್ತೇನೆ ಎಂದರು.
ರಾಜ್ಯದಲ್ಲಿ ಒಂದೇ ರೂಲ್ ಇದೆ ಅಂತಾ ಯಾರು ಹೇಳಿದ್ದಾರೆ. ಯಾವ ಕರ್ಫ್ಯೂ ಇಲ್ಲ, ಏನೂ ಇಲ್ಲ. ನಮ್ಮ ಶಿವಮೊಗ್ಗದಲ್ಲಿ ಯಾವ ಕರ್ಫ್ಯೂನೂ ಇಲ್ಲ. ಜಿಲ್ಲೆಗಳಿಗೆ ಇನ್ನೂ ಆ ಆದೇಶ ಬಂದಿಲ್ಲ. ಈ ಬಗ್ಗೆ ನಾನು ಬೇಸರ ಮಾಡಿಕೊಂಡಿಲ್ಲ. ಜನರ ಭಾವನೆಗಳನ್ನ ವ್ಯಕ್ತಪಡಿಸಿದ್ದೇನೆ ಅಷ್ಟೇ. ಬೆಂಗಳೂರಿನಲ್ಲಿ ಬಿಗಿ ಮಾಡೋದು ಮಾಡಿ. ಬೇರೆ ಜಿಲ್ಲೆಗಳಲ್ಲಿ ಮಾಡುವುದು ಬೇಡ. ಇದನ್ನೇ ಸಿಎಂ ಜೊತೆ ನಾನು ಮಾತನಾಡ್ತೇನೆ. ಸಂಪುಟ ಸಭೆಯಲ್ಲಿ ನಾನು ಮಾತನಾಡ್ತೇನೆ ಎಂದು ಕರ್ಫ್ಯೂ ಜಾರಿ ಬಗ್ಗೆ ಈಶ್ವರಪ್ಪ ಬೇಸರ ವ್ಯಕ್ತಪಡಿಸಿದರು.
ಲಾಕ್ ಡೌನ್ ಸಂಬಂಧ ಸರ್ಕಾರದಲ್ಲೇ ಗೊಂದಲ ವಿಚಾರವಾಗಿ ಮಾತನಾಡಿದ ಸಚಿವ ಈಶ್ವರಪ್ಪ, ಎಲ್ಲಾ ವಿಚಾರವನ್ನ ಸಂಪೂರ್ಣವಾಗಿ ಸಂಪುಟ ಸಭೆಯಲ್ಲಿ ಚರ್ಚಿಸಲು ಸಾಧ್ಯವಿಲ್ಲ. ನಮ್ಮ ಜಿಲ್ಲೆಯಲ್ಲಿ ಹೆಚ್ಚಿನ ಕೋವಿಡ್ ಪ್ರಕರಣಗಳು ಇಲ್ಲ. ಕಡಿಮೆ ಇರುವ ಕಡೆ ನಿರ್ಬಂಧ ಸಡಿಲಿಸಬೇಕು. ಇದನ್ನ ಸಂಪುಟ ಸಭೆಯಲ್ಲಿ ಚರ್ಚಿಸುತ್ತೇನೆ ಎಂದರು.
ಬಿಎಸ್ವೈ, ಸಿದ್ದರಾಮಯ್ಯ, ದೇವೇಗೌಡ ರಾಜ್ಯದ ಆಸ್ತಿ.. ಕಾಂಗ್ರೆಸ್ ಪಾದಯಾತ್ರೆ ವಿಚಾರವಾಗಿ ಮಾತನಾಡಿದ ಈಶ್ವರಪ್ಪ, ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷ ಬದುಕಿದೆ ಅನ್ನೋದನ್ನು ತೋರಿಸಲು ಹೀಗೆ ಮಾಡುತ್ತಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಆರೋಗ್ಯವಂತರಾಗಿರಬೇಕು ಅನ್ನೋದು ನಮ್ಮ ಆಶಯ. ಮಾಜಿ ಸಿಎಂಗಳಾದ ಯಡಿಯೂರಪ್ಪ, ಸಿದ್ದರಾಮಯ್ಯ, ಮಾಜಿ ಪ್ರಧಾನಿದೇವೇಗೌಡ ಇವರೆಲ್ಲ ನಮ್ಮ ರಾಜ್ಯದ ಆಸ್ತಿ ಎಂದು ತಿಳಿಸಿದರು.