ಬೆಂಗಳೂರು: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕುರುಬ ಸಮುದಾಯದ ನಾಯಕರು. ಆದರೆ ಇಡೀ ಕುರುಬ ಸಮುದಾಯ ಅವರ ಹಿಂದೆ ಇಲ್ಲ. ಈಶ್ವರಪ್ಪ ಬೆಂಬಲಕ್ಕೆ ಹೆಚ್ಚಿನ ಕುರುಬರಿದ್ದಾರೆ ಎಂದು ಹಿಂದುಳಿದ ದಲಿತ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಕೆ. ಮುಕುಡಪ್ಪ ತಿಳಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ದಾವಣಗೆರೆ ಸಮಾವೇಶಕ್ಕೆ ದೊಡ್ಡ ಪ್ರಮಾಣದ ಜನ ಸೇರಿದ ಮಾತ್ರಕ್ಕೆ ಸಿದ್ದರಾಮಯ್ಯ ಹಿಂದೆ ಎಲ್ಲಾ ಕುರುಬರು ಇದ್ದಾರೆ ಎನ್ನುವುದು ತಪ್ಪು ಕಲ್ಪನೆ. ಜನ ಸೇರಿಸುವುದರಿಂದ ಬಲ ಇದೆ ಎಂದಲ್ಲ. ಹಿಂದೆ ಇಂದಿರಾಗಾಂಧಿ ಸಮಾವೇಶಕ್ಕೂ ಜನ ಸೇರಿದ್ದರು. ಆದರೆ ಅವರು ಚುನಾವಣೆಯಲ್ಲಿ ಸೋತಿದ್ದರು.
ಕಾಂಗ್ರೆಸ್ನವರು ಭ್ರಮೆಯಲ್ಲಿದ್ದಾರೆ: ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದವರು. ಆದರೆ ಅವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಎರಡು ಕಡೆ ಕಣಕ್ಕಿಳಿದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಏಕೆ ಸೋತರು? ಸಿದ್ದರಾಮಯ್ಯ ಇದ್ದರೆ ಕುರುಬರು ಮತ ಹಾಕುತ್ತಾರೆ ಎಂಬುದು ಭ್ರಮೆ, ಕಾಂಗ್ರೆಸ್ನವರು ಈ ಭ್ರಮೆಯಲ್ಲಿ ಇದ್ದಾರೆ ಎಂದರು.
ತವರಿನಲ್ಲಿ ಸೋತಿದ್ದ ಸಿದ್ದರಾಮಯ್ಯಗೆ ಗೆಲುವಿನ ಉಡುಗೊರೆ ನೀಡಿದ್ದ ಬಾದಾಮಿಯಲ್ಲಿ, ಈ ಬಾರಿ ನಿಲ್ಲಲು ಏಕೆ ಹಿಂದೇಟು ಹಾಕುತ್ತಿದ್ದಾರೆ?. ಜನ ಸೇರಿಸಿದ ಮಾತ್ರಕ್ಕೆ ಕುರುಬ ಸಮುದಾಯ ಸಿದ್ದರಾಮಯ್ಯ ಜೊತೆ ಇದೆ ಎಂದು ಅರ್ಥವಲ್ಲ. ಕುರಿಯದ್ದು ಒಳ್ಳೆಯ ಬುದ್ಧಿ ಮತ್ತು ಕೆಟ್ಟ ಬುದ್ಧಿ ಎರಡೂ ಇದೆ. ಒಂದು ಕಡೆ ನುಗ್ಗಲು ಶುರುಮಾಡಿದರೆ ಪ್ರಾಣ ಹೋದರೂ ಹಿಂದೆ ಸರಿಯಲ್ಲ ಎಂದು ಬಿಜೆಪಿ ಪರ ಕುರುಬ ಸಮುದಾಯ ಹೋಗಲಿದೆ ಎಂದು ಪರೋಕ್ಷವಾಗಿ ತಿಳಿಸಿದರು.
ಇದನ್ನೂ ಓದಿ:ಸರ್ಕಾರದ ಮುಂದೆ ಮೂರು ಬೇಡಿಕೆ ಇಟ್ಟ ಮುಕುಡಪ್ಪ