ಬೆಂಗಳೂರು:ಧಾರವಾಡದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರವನ್ನು ತೀವ್ರವಾಗಿ ಖಂಡಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಕೃತ್ಯ ಎಸಗಿದವರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಟ್ವೀಟ್ ಮೂಲಕ ಬೇಸರ ಹೊರಹಾಕಿರುವ ಅವರು, ಧಾರವಾಡದ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ನಾಗರೀಕ ಸಮಾಜ ತಲೆತಗ್ಗಿಸುವಂತದ್ದು. ಇಷ್ಟಕ್ಕೂ ಆ ಬಾಲಕಿ ಮಾಡಿದ ತಪ್ಪಾದ್ರು ಏನು? ಆಕೆ ಹೆಣ್ಣಾಗಿದ್ದೇ ತಪ್ಪಾ?ಇಂತಹ ಘಟನೆ ನಡೆದಿದ್ದರೂ ಸರ್ಕಾರಕ್ಕೆ ಕಣ್ಣು ಇಲ್ಲ, ಕಿವಿಯೂ ಇಲ್ಲ ಹೃದಯವಂತೂ ಇಲ್ಲವೇ ಇಲ್ಲ. ಇದು ಹೃದಯಹೀನ ಸರ್ಕಾರ. ಸರ್ಕಾರವನ್ನ ಬಡಿದೆಬ್ಬಿಸ ಬೇಕಿದೆ. ಸರ್ಕಾರ ಬಾಲಕಿ ಕುಟುಂಬಕ್ಕೆ ಪೂರ್ಣ ಭದ್ರತೆ ಕೊಡುವುದರ ಜೊತೆಗೆ ತಪ್ಪಿತಸ್ಥರಿಗೆ ಶೀಘ್ರ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕಿದೆ.
ಒಬ್ಬ ತಂದೆಯಾಗಿ ಸಂತ್ರಸ್ತೆಗೆ ನ್ಯಾಯ ಸಿಗುವವರೆಗೂ ತಪ್ಪಿತಸ್ಥರಿಗೆ ಶಿಕ್ಷೆ ಆಗುವವರೆಗೂ ಈ ಹೋರಾಟವನ್ನ ನಾನು ಬೆಂಬಲಿಸುತ್ತೇನೆ ಎಂದಿದ್ದಾರೆ.
ಇದೇ ವೇಳೆ ಕೊರೊನಾ ವಿರುದ್ದ ಹೋರಾಡಲು ನಮ್ಮ "ಕೈ" ಪಡೆ ಸಿದ್ದವಾಗಿದೆ. ಕಾಂಗ್ರೆಸ್ನ "ಆರೋಗ್ಯ ಹಸ್ತ" ಯೋಜನೆ ಅಡಿ ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸ್ವಯಂ ಸೇವಕರ ತಂಡ ಮನೆ ಮನೆಗೆ ತೆರಳಿ ಕೋವಿಡ್ ಪರೀಕ್ಷೆ ಸೇರಿದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳಲಿದೆ. ನಮ್ಮ ಆರೋಗ್ಯ ಹಸ್ತ ಸ್ವಯಂ ಸೇವಕರಿಗೆ ಕೋವಿಡ್ ಪರೀಕ್ಷಾ ಕಿಟ್ ಅನ್ನ ವಿತರಿಸುತ್ತಿರುವುದಕ್ಕೆ ಸಂತಸವಾಗುತ್ತಿದೆ ಎಂದಿದ್ದಾರೆ.
ಮಕ್ಕಳಿಗೆ ಧೈರ್ಯ ತುಂಬಿದ ಖಂಡ್ರೆ ಇಂದು ಎಸ್ಎಸ್ಎಲ್ಸಿ ಫಲಿತಾಂಶ ಹೊರಬಿದ್ದಿದೆ. ನನ್ನ ವಿದ್ಯಾರ್ಥಿ ದಿನಗಳು ನೆನಪಾಗುತ್ತಿದೆ. ರಿಸಲ್ಟ್ ದಿನದ ಆತಂಕ ನನಗೆ ಅರ್ಥವಾಗುತ್ತೆ. ಪ್ರಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರೇ, ಕೊರೋನಾ ಸಂಕಷ್ಟದ ನಡುವೆಯೂ ಧೈರ್ಯವಾಗಿ ಪರೀಕ್ಷೆ ಬರೆದಿದ್ದೀರಿ. ಫಲಿತಾಂಶ ಏನೇ ಬಂದಿರಲಿ ಯಶಸ್ಸು ನಿಮ್ಮದಾಗಿರಲಿ. ಇದು ಕೇವಲ ಪರೀಕ್ಷೆಯ ಫಲಿತಾಂಶವೇ ಹೊರತು ಜೀವನದ ಅಂತ್ಯವಲ್ಲ. ಹೀಗಾಗಿ ಪಾಲಕರು ಕೂಡ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿ. ಎಲ್ಲರಿಗೂ ಶುಭವಾಗಲಿ ಎಂದಿದ್ದಾರೆ.