ಕರ್ನಾಟಕ

karnataka

ETV Bharat / state

'ಮಮತಾ ದೀದಿಗೆ ಪತ್ರ ಬರೆದ ಶಾ ಅವರಿಗೆ ಕರ್ನಾಟಕದ ಕಾರ್ಮಿಕರ ಸ್ಥಿತಿ ಬಗ್ಗೆ ತಿಳಿದಿಲ್ವೇ?'- ಖಂಡ್ರೆ ಪ್ರಶ್ನೆ - eshwar khandre talking about migrant labours

ರಾಜ್ಯಕ್ಕೆ ಮರಳಲಿಚ್ಚಿಸುವ ಕನ್ನಡಿಗರಿಗೆ ಸರ್ಕಾರದಿಂದ ಅನ್ಯಾಯವಾಗಿದೆ. ಸ್ವಾಭಿಮಾನಿ ಕಾರ್ಮಿಕರು ತಮ್ಮ ತಮ್ಮ ಊರಿಗೆ ಮರಳಲು ಉತ್ಸುಕರಾಗಿದ್ದು, ಇವರ ವಿಚಾರದಲ್ಲಿ ಸರ್ಕಾರ ಮಾನವೀಯತೆಯಿಂದ ವರ್ತಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಬೇಸರ ವ್ಯಕ್ತಪಡಿಸಿದ್ದಾರೆ.

eshwar khandre
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ

By

Published : May 10, 2020, 12:49 PM IST

ಬೆಂಗಳೂರು:ಜನ ಸತ್ತ ಮೇಲೆ ಪರಿಹಾರ ಕೊಡುವುದು ಸಾಧನೆಯಲ್ಲ. ಇರುವಾಗಲೇ ಬದುಕು ಕಲ್ಪಿಸುವುದು ಸರ್ಕಾರದ ಕರ್ತವ್ಯ. ವಲಸೆ ಕಾರ್ಮಿಕರ ವಿಚಾರದಲ್ಲಿ ಮಾನವೀಯತೆಯಿಂದ ವರ್ತಿಸಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಗ್ರಹಿಸಿದ್ದಾರೆ.

ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯಕ್ಕೆ ಮರಳಲಿಚ್ಚಿಸುವ ಕನ್ನಡಿಗರಿಗೆ ಸರ್ಕಾರದಿಂದ ಅನ್ಯಾಯವಾಗಿದೆ. ಲಾಕ್​ಡೌನ್ ಅವಧಿಯಲ್ಲಿ ದುಡಿಯುವ ಕೈಗಳಿಗೆ ಕೆಲಸ ಇಲ್ಲದೆ ಸರ್ಕಾರ ಅಥವಾ ದಾನಿಗಳು ನೀಡುವ ದವಸ, ಧಾನ್ಯಕ್ಕೆ ಕೈಯೊಡ್ಡಲು ಮನಸ್ಸು ಒಪ್ಪದೆ ಸಾವಿರಾರು ಸ್ವಾಭಿಮಾನಿ ಕಾರ್ಮಿಕರು ತಮ್ಮ ತಮ್ಮ ಊರಿಗೆ ಮರಳಲು ಉತ್ಸುಕರಾಗಿದ್ದಾರೆ. ಇವರ ವಿಚಾರದಲ್ಲಿ ಸರ್ಕಾರ ಮಾನವೀಯತೆಯಿಂದ ವರ್ತಿಸಬೇಕು ಎಂದಿದ್ದಾರೆ.

ಹೊರ ರಾಜ್ಯಗಳಿಗೆ ಹೋಗಿ ದುಡಿಯುತ್ತಿರುವ ಲಕ್ಷಾಂತರ ಕನ್ನಡಿಗರ ಪೈಕಿ ಪ್ರಸ್ತುತ 91,077ಕ್ಕೂ ಹೆಚ್ಚು ಜನರು ರಾಜ್ಯಕ್ಕೆ ಮರಳಲು ಸೇವಾ ಸಿಂಧು ವೆಬ್​ಸೈಟ್​ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರ ಈವರೆಗೆ 706 ಜನರಿಗೆ ಅನುಮತಿ ನೀಡಿದೆ. ಇನ್ನೂ 51,241ಕ್ಕೂ ಹೆಚ್ಚು ಅರ್ಜಿ ವಿಲೇವಾರಿ ಮಾಡದೆ ಸರ್ಕಾರ ವಿಳಂಬ ಮಾಡುತ್ತಿದೆ. ಕೆಲವು ಅರ್ಜಿಗಳು ಜಿಲ್ಲಾಧಿಕಾರಿಗಳ ಬಳಿಯೇ ಇದೆ, ಮತ್ತೆ ಕೆಲವು ನೋಡಲ್ ಅಧಿಕಾರಿಗಳ ಬಳಿ ಇವೆ ಎಂದರು.

ಕೇಂದ್ರ ಗೃಹ ಸಚಿವರ ಗಮನಕ್ಕೆ ಬಂದಿಲ್ಲವೇ? :ಕೋಲ್ಕತ್ತಾ ಮುಖ್ಯಮಂತ್ರಿ ತಮ್ಮ ರಾಜ್ಯದವರು ಬರುವ ರೈಲಿಗೆ ಪ್ರವೇಶ ನೀಡುತ್ತಿಲ್ಲ ಎಂದು ಕೇಂದ್ರ ಗೃಹ ಸಚಿವರು ಮಮತಾ ಬ್ಯಾನರ್ಜಿಗೆ ಪತ್ರ ಬರೆದು ಅನ್ಯಾಯ ಎನ್ನುತ್ತಾರೆ. ಬಿಜೆಪಿ ಸರ್ಕಾರ ಇರುವ ಕರ್ನಾಟಕದಲ್ಲಿ 52 ಸಾವಿರ ಅರ್ಜಿ ಬಾಕಿ ಇರುವುದು ಕೇಂದ್ರ ಗೃಹ ಸಚಿವರ ಗಮನಕ್ಕೆ ಬಂದಿಲ್ಲವೇ, ಇದು ಅನ್ಯಾಯ ಅಲ್ಲವೇ ಎಂದು ಪ್ರಶ್ನಿಸಿದರು. ವಿದೇಶಗಳಿಂದ ಬರುವವರಿಗೆ ಸಕಲ ಅನುಕೂಲತೆ ಕಲ್ಪಿಸುವ ಸರ್ಕಾರ, ಬಡವರ ವಿಚಾರದಲ್ಲಿ ಹೀಗೆ ತಾರತಮ್ಯ ಮಾಡುವುದು ಸೂಕ್ತವಲ್ಲ ಎಂದು ಹೇಳಿದರು.

ಈಗಾಗಲೇ 40 ದಿನಗಳಿಂದ ಹಲವರು ತಿನ್ನಲು ಊಟ ಇಲ್ಲದೆ, ಕೈಯಲ್ಲಿ ಹಣವೂ ಇಲ್ಲದೆ ಕಂಗಾಲಾಗಿದ್ದಾರೆ. ಇಂಥ ಜನರ ವಿಚಾರದಲ್ಲಿ ಸರ್ಕಾರ ಮಾನವೀಯತೆಯಿಂದ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಅದೇ ರೀತಿ ರಾಜ್ಯದಿಂದ ತಮ್ಮ ತಮ್ಮ ಊರುಗಳಿಗೆ ಹೋಗಲು ಬಯಸುವವರಿಗೂ ಸರ್ಕಾರ ವ್ಯವಸ್ಥೆ ಕಲ್ಪಿಸಿಕೊಡಬೇಕು. ಅವರೆಲ್ಲರೂ ಹೊರಟು ಹೋದರೆ, ನೌಕರರ ಸಮಸ್ಯೆ ಬರುತ್ತದೆ ಎಂಬ ವಾದ ಇದೆ. ಆದರೆ, ಹೊರ ರಾಜ್ಯಗಳಿಂದ ಬರುವ ರಾಜ್ಯದ ಕಾರ್ಮಿಕರಿಗೆ ಉದ್ಯೋಗ ಕೊಡಿ. ನಮ್ಮ ರಾಜ್ಯದವರಿಗೆ ಉದ್ಯೋಗ ಭದ್ರತೆ ಸಿಕ್ಕರೆ ಅವರೇಕೆ ವಲಸೆ ಹೋಗುತ್ತಾರೆ ಎಂದು ಸರ್ಕಾರದ ವಿರುದ್ಧ ಬೇಸರ ಹೊರ ಹಾಕಿದರು.

ನಡೆದು ಊರು ತಲುಪುತ್ತಿದ್ದಾರೆ :ವಲಸೆ ಕಾರ್ಮಿಕರುನೂರಾರು ಕಿ.ಮೀ ನಡೆದು ಹೋಗಿರುವುದನ್ನು ಮಾಧ್ಯಮಗಳು ಪ್ರಸಾರ ಮಾಡಿವೆ. ಎಲ್ಲಾ ಅನುಕೂಲತೆ ಇದ್ದರೆ ಯಾರೂ ಉರಿ ಬಿಸಿಲಿನಲ್ಲಿ ನಡೆದು ಹೋಗುವುದಿಲ್ಲ. ಕೈಗಾರಿಕೆ ಮಾಲೀಕರು ವಲಸಿಗರು ಹೊರಟು ಹೋದರೆ ತಮಗೆ ಅಲ್ಪ ಕೂಲಿಗೆ ದುಡಿಯುವ ಕೂಲಿಗಳು ಸಿಗುವುದಿಲ್ಲ ಎಂದು ಸರ್ಕಾರಕ್ಕೆ ತಿಳಿಸಿದ ಕೂಡಲೇ ಸರ್ಕಾರ ತನ್ನ ನಿರ್ಧಾರ ಬದಲಾಯಿಸಿದೆ. ಶ್ರಮಿಕರ ವಿಚಾರದಲ್ಲಿ ಹೀಗೆ ವರ್ತಿಸುವುದು ಅವರಿಗೆ ಮಾಡುವ ಅನ್ಯಾಯ ಅಲ್ಲದೆ ಮತ್ತೇನು ಎಂದು ಆಕ್ರೋಶ ಹೊರ ಹಾಕಿದರು.

ABOUT THE AUTHOR

...view details