ಬೆಂಗಳೂರು :ಚುನಾವಣಾ ಆಯೋಗ ಎರಡು ಕ್ಷೇತ್ರಗಳಿಗೆ ಉಪಚುನಾವಣೆಗೆ ದಿನಾಂಕ ಫಿಕ್ಸ್ ಮಾಡಿದೆ. ಕಾಂಗ್ರೆಸ್ ಪಕ್ಷ ಚುನಾವಣೆ ಎದುರಿಸಲು ಸಜ್ಜಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಅಕ್ಟೋಬರ್ 30ರಂದು ಹಾನಗಲ್, ಸಿಂಧಗಿ ಉಪಚುನಾವಣೆ ನಡೆಯಲಿದೆ. ಎರಡು ಉಪ ಚುನಾವಣೆಗಳ ಬಗ್ಗೆ ಹಿರಿಯರು ಎಲ್ಲಾ ಸೇರಿ ಚರ್ಚೆ ಮಾಡಿದ್ದೀವಿ.
ಪಕ್ಷದ ಅಧ್ಯಕ್ಷರು, ಪ್ರತಿ ಪಕ್ಷದ ನಾಯಕರು ಪೂರ್ವ ಸಿದ್ಧತೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಚುನಾವಣೆಗೆ ಸಜ್ಜಾಗಿದೆ. ಸಿಂಧಗಿ ಕ್ಷೇತ್ರಕ್ಕೆ ಅಶೋಕ್ ಮನಗುಳಿ ಘೋಷಣೆಯಾಗಿದೆ.
ಹಾನಗಲ್ ಅಭ್ಯರ್ಥಿ ವಿಚಾರಕ್ಕೆ ಈಗಾಗಲೇ ಚರ್ಚೆ ಮಾಡಿದ್ದೇವೆ. ರಣದೀಪ್ ಸಿಂಗ್ ಸುರ್ಜೇವಾಲಾ, ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ ಜೊತೆ ರಾಯಚೂರಿನಲ್ಲಿ ಚರ್ಚೆ ಮಾಡಿದ್ದೀವಿ ಎಂದರು.
ಬೈ ಎಲೆಕ್ಷನ್ ಗೆ ನಾವ್ ರೆಡಿ ಅಂತಿದಾರೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ.. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ರೈತರ ಪ್ರತಿಭಟನೆ ನಡೆಸಿರುವ ಬಗ್ಗೆ ಮಾತನಾಡಿದ ಅವರು, ರೈತ ವಿರೋಧಿ ನೀತಿ ವಿರುದ್ಧ ಹೋರಾಟ ಮಾಡಿದ್ದಾರೆ.
ಬಂಡ ಸರ್ಕಾರ ಕ್ಯಾರೇ ಎನ್ನುತ್ತಿಲ್ಲ. ಬೆಲೆ ಏರಿಕೆ ಆಗಿದೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆಯಾಗಿದೆ. ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಮಧ್ಯಮ ವರ್ಗದ ಜನರು ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ.
ಕೊರೊನಾದಿಂದ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. ಬೈ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸುತ್ತೆ. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗಳನ್ನ ಮುಂದೂಡಿಕೆ ಮಾಡಲಾಗ್ತಿದೆ. ವಿಳಂಬದ ನೀತಿ ಅನುಸರಿಸುತ್ತಿದ್ದಾರೆ. ಬಿಜೆಪಿ ಪಕ್ಷದಲ್ಲಿ ಭಿನ್ನಮತವಿದೆ. ಕಾಂಗ್ರೆಸ್ ಸಾಧನೆಗಳನ್ನ ಹೇಳಿ ಎರಡು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದರು.
ಹಾನಗಲ್ನಲ್ಲಿ ಮನೋಹರ್ ತಹಶೀಲ್ದಾರ್, ಶ್ರೀನಿವಾಸ್ ಮಾನೆ ಆಕಾಂಕ್ಷಿಗಳಾಗಿದ್ದಾರೆ. ಇವರಿಬ್ಬರಷ್ಟೇ ಅಲ್ಲ, ಇನ್ನು ಕೆಲವರು ಟಿಕೆಟ್ ಕೇಳಿದ್ದಾರೆ. ಶ್ರೀನಿವಾಸ್ ಮಾನೆ ನಮ್ಮ ಪ್ರಮುಖ ಮುಖಂಡರು. ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ. ನಮ್ಮ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜತೆ ಮಾತನಾಡಿದ್ದಾರೆ. ಒಮ್ಮತದಿಂದ ಒಪ್ಪಿ ಅಭ್ಯರ್ಥಿ ಹಾಕ್ತೇವೆ ಎಂದು ತಿಳಿಸಿದರು.
ಕಳೆದ ಬೀದರ್ ಉಪಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿ ಹಾಕಿದ್ದಕ್ಕೆ ಸೋಲಿನ ವಿಚಾರವಾಗಿ ಅವರು ಮಾತನಾಡಿದರು. ಬಸವ ಕಲ್ಯಾಣ ಭಾಗದಲ್ಲಿ ಕಾಂಗ್ರೆಸ್ಗೆ ಒಲವಿತ್ತು. ಆದರೆ, ಜೆಡಿಎಸ್ ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿ ಬಿಜೆಪಿಗೆ ಸಹಾಯ ಮಾಡಿತ್ತು ಎಂದರು.
ಬಿಜೆಪಿ ತಾಲಿಬಾನ್ ಹೋಲಿಕೆ ವಿಚಾರ ಮಾತನಾಡಿ, ಆರ್ ಎಸ್ ಎಸ್ ನವರು ಹಿಂದೆ ಕೋಲು ಹಿಡ್ಕೊಂಡು ಓಡಾಡುತ್ತ ಇದ್ದರು. ಕೂಬಾ ಅವರು ಅವರ ಬೆಂಬಲಿಗರಿಗೆ ಹೇಳಿ ಬಂದೂಕಿನಿಂದ ಸ್ವಾಗತ ಮಾಡಿಸಿಕೊಂಡ್ರು. ರಾಜಾರೋಷವಾಗಿ ಬಂದೂಕು ಹಿಡಿದು ಓಡಾಡಬಹುದಾ? ಕಾನೂನು ಸುವ್ಯವಸ್ಥೆ ಇದೆಯಾ? ಇದು ತಾಲಿಬಾನ್ ಸಂಸ್ಕೃತಿ ಅಲ್ಲದೇ ಇನ್ನೇನು ಎಂದರು.
ಸಿಟಿ ರವಿ ನಿನ್ನೆ ಸಿದ್ದರಾಮಯ್ಯರನ್ನ ನೇತಾಕ್ತಿದ್ವಿ ಎಂಬ ವಿಚಾರಕ್ಕೆ ಅವರು ಪ್ರತಿಕ್ರಿಯಿಸಿದರು. ಸಿ ಟಿ ರವಿ ಹಿಟ್ಲರ್ ಧೋರಣೆ ಅನುಸರಿಸುತ್ತಿದ್ದಾರೆ. ಅಧಿಕಾರದ ಮದದಿಂದ ದುರ್ವತನೆ ತೋರುತ್ತಿದ್ದಾರೆ. ಇಂತಹ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ. ಅನಾಗರಿಕರಂತೆ ಮಾತನಾಡಿದ್ದಾರೆ. ಹಿರಿಯರ ಬಗ್ಗೆ ಮಾತನಾಡಿದ್ದನ್ನ ಖಂಡಿಸುತ್ತೇನೆ ಎಂದರು.
ಡಿಕೆಶಿ ದೆಹಲಿ ಪ್ರವಾಸ ವಿಚಾರ ಮಾತನಾಡಿ, ಪಧಾದಿಕಾರಿಗಳ ಪಟ್ಟಿಗೆ ಅಂತಿಮಗೊಳಿಸುವ ವಿಚಾರವಾಗಿ ಹೋಗಿದ್ದಾರೆ. ರಾಜ್ಯದಲ್ಲಿ ಪಕ್ಷ ಬಲವರ್ಧನೆ ಬಗ್ಗೆ ಚರ್ಚೆ ನಡೆಸುತ್ತಾರೆ. ಸಂಘಟನೆ ಬಗ್ಗೆ ಚರ್ಚೆ ಮಾಡಿ ಬರುತ್ತಾರೆ. ಪದಾಧಿಕಾರಿಗಳ ಪಟ್ಟಿ ನೇಮಕಾತಿ ವಿಳಂಬ ಹಿನ್ನೆಲೆ ಪಕ್ಷದ ಚಟುವಟಿಕೆಗೆ ಹಿನ್ನಡೆಯಾಗಿಲ್ಲ. ಶೀಘ್ರದಲ್ಲಿ ರಿಲೀಸ್ ಆಗುತ್ತೆ. ಸಿದ್ದರಾಮಯ್ಯ, ಡಿಕೆಶಿ ಇಬ್ಬರ ನಡುವೆ ಯಾವುದೇ ಅಂತರವಿಲ್ಲ ಎಂದು ಸ್ಪಷ್ಟಪಡಿಸಿದರು.
ಓದಿ:ನಾಯಕತ್ವ ಬದಲಾವಣೆ ಬಳಿಕ ಮೊದಲ ಉಪಸಮರ: ಬೊಮ್ಮಾಯಿಗೆ ಅಗ್ನಿ ಪರೀಕ್ಷೆ, ಬಿಜೆಪಿಗಿದು ಸತ್ವ ಪರೀಕ್ಷೆ..!